ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಗೆ ಜೀವ ಬೆದರಿಕೆ: ದೂರು
ದಾವಣಗೆರೆ: ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್‍ಗೆ ಜೀವ ಬೆದರಿಕೆ ಹಾಗೂ ಹಿಂದೂಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಎಸ್‍ಡಿಪಿಐ ಮುಖಂಡನೋರ್ವನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಹಿಂದೂ ಮಹಾಸಭಾ ಸೇವಾ ಸಮಿತಿ ಒತ್ತಾಯಿಸಿದೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಸಮಿತಿಯ ಮುಖಂಡ ಉಮೇಶ ಕತ್ತಿ ಮಾತನಾಡಿ, ಇತ್ತೀಚೆಗೆ ತ್ರಿಪುರಾ ಘಟನೆ ಹಿನ್ನೆಲೆಯಲ್ಲಿ ನಡೆದ ಪ್ರತಿಭಟನೆಯಲ್ಲಿ ಎಸ್‍ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿರುವ ಸೈಯದ್ ಅಶ್ಫಾಕ್ ಎಂಬಾತ ಶ್ರೀರಾಮಸೇನೆಯ ಪ್ರಮೋದ್ ಮುತಾಲಿಕ್ ಅವರಿಗೆ ಕೊಲೆ ಬೆದರಿಕೆ ಹಾಕಿದ್ದಾನೆ. ಅಲ್ಲದೆ, ಭಾರತ ಮಾತೆ ಹಾಗೂ ಹಿಂದೂಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾನೆ. ತಕ್ಷಣವೇ ಈತನನ್ನು ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಪ್ರಕರಣಕ್ಕೆ ಸಂಬಧಿಸಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸುವಲ್ಲಿ ಪೊಲೀಸ್ ಇಲಾಖೆ ನಿರ್ಲಕ್ಷ್ಯ ವಹಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈಗಾಗಲೇ ಸದರಿ ವ್ಯಕ್ತಿಯ ವಿರುದ್ಧ ನಗರದ ಆರ್‍ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಹಿಂದೂಗಳ ವಿಚಾರದಲ್ಲಿ ಬಹು ತ್ವರಿತವಾಗಿ ಕಾರ್ಯಪ್ರವೃತ್ತರಾಗುವ ಪೊಲೀಸರು, ಘಟನೆ ನಡೆದು ಒಂದು ವಾರವಾದರೂ ಆರೋಪಿಯನ್ನು ಬಂಧಿಸಿಲ್ಲ. ಇನ್ನೊಂದು ವಾರದಲ್ಲಿ ಕ್ರಮ ಕೈಗೊಳ್ಳದಿದ್ದರೆ ಸಮಾನಮನಸ್ಕ ಹಿಂದೂಪರ ಸಂಘಟನೆಗಳೊಂದಿಗೆ ಚರ್ಚಿಸಿ, ತೀವ್ರಸ್ವರೂಪದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.
ಸಮಿತಿಯ ಬರ್ನಾಟ್ ನಟರಾಜ್, ಪರಶುರಾಮ, ಕೃಷ್ಣ ಕರಾಟೆ, ಪ್ರಶಾಂತ, ಸತೀಶ, ಜಗದೀಶ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.