ಹೈದರ್‌ಪೋರಾ ಎನ್‌ಕೌಂಟರ್: ಮೃತ ನಾಗರಿಕರ ಕುಟುಂಬ ಪ್ರತಿಭಟನೆ,ಮೃತದೇಹಗಳನ್ನು ಹಸ್ತಾಂತರಿಸಲು ಒತ್ತಾಯ
ಶ್ರೀನಗರ: ಶ್ರೀನಗರದ ಹೈದರ್‌ಪೋರಾ ಎನ್‌ಕೌಂಟರ್‌ನಲ್ಲಿ ಮೃತಪಟ್ಟ ಇಬ್ಬರು ನಾಗರಿಕರ ಕುಟುಂಬಗಳು ಸಂತ್ರಸ್ತರಿಗೆ ನ್ಯಾಯ ಒದಗಿಸಲು ಹಾಗೂ ಮೃತದೇಹಗಳನ್ನು ಹಿಂದಿರುಗಿಸುವಂತೆ ಒತ್ತಾಯಿಸಿ ಬುಧವಾರ ಪ್ರತಿಭಟನೆ ನಡೆಸಿದರು.
ಹೈದರ್‌ಪೋರಾದಲ್ಲಿ ಸೋಮವಾರ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ನಾಗರಿಕರನ್ನು ಕೊಂದ ಬಳಿಕ ಪೊಲೀಸರು ಮೃತರು ‘ಭಯೋತ್ಪಾದಕ ಸಹವರ್ತಿಗಳು’ ಎಂದು ಆರೋಪಿಸಿದ್ದರು. ಇದನ್ನು ಮೃತ ನಾಗರಿಕರ ಕುಟುಂಬದವರು ವಿರೋಧಿಸಿದ್ದರಿಂದ ವಿವಾದವು ಸ್ಫೋಟಗೊಂಡಿತು.
ಪೊಲೀಸರ ಪ್ರಕಾರ ಪಾಕಿಸ್ತಾನಿ ಭಯೋತ್ಪಾದಕ ಮುಹಮ್ಮದ್ ಅಮೀರ್ ಹಾಗೂ ಆತನ ಸ್ಥಳೀಯ ಸಹಚರರಾದ ಇಬ್ಬರು ಅಲ್ತಾಫ್ ಭಟ್ ಹಾಗೂ ಮುದಾಸಿರ್ ಗುಲ್ ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟರು. ವಾಣಿಜ್ಯ ಸಂಕೀರ್ಣದೊಳಗೆ ಅಕ್ರಮ ಕಾಲ್ ಸೆಂಟರ್ ಹಾಗೂ ಭಯೋತ್ಪಾದಕ ಅಡಗುತಾಣವನ್ನು ನಡೆಸಲಾಗುತ್ತಿತ್ತು ಎಂದು ಹೇಳಲಾಗಿದೆ.
ಬುಧವಾರ ಭಟ್ ಮತ್ತು ಗುಲ್ ಅವರ ಕುಟುಂಬಗಳು ನಗರದ ಪ್ರೆಸ್ ಎನ್‌ಕ್ಲೇವ್‌ನಲ್ಲಿ ಪ್ರತಿಭಟನೆ ನಡೆಸಿದರು. ಅವರು ಉಗ್ರಗಾಮಿಗಳು ಅಥವಾ ಓಜಿಡಬ್ಲ್ಯೂ ಅಲ್ಲದ ಕಾರಣ ಅವರ ಮೃತದೇಹಗಳನ್ನು ತಮಗೆ ಹಿಂದಿರುಗಿಸಬೇಕೆಂದು ಒತ್ತಾಯಿಸಿದರು.
ಎನ್‌ಕೌಂಟರ್‌ನಲ್ಲಿ ಹತರಾದ ನಾಲ್ವರ ಶವಗಳನ್ನು ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ಹಂದ್ವಾರ ಪ್ರದೇಶದಲ್ಲಿ ಹೂಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.