ಪ್ರಕಾಶ್ ಝಾ ಮೇಲಿನ ದಾಳಿಕೋರ, ಕೊಲೆ ಆರೋಪದಲ್ಲಿ ಶಿಕ್ಷೆಗೀಡಾಗಿದ್ದ ಬಜರಂಗದಳ ಮುಖಂಡ

ಪ್ರಕಾಶ್ ಝಾ ಮೇಲಿನ ದಾಳಿಕೋರ, ಕೊಲೆ ಆರೋಪದಲ್ಲಿ ಶಿಕ್ಷೆಗೀಡಾಗಿದ್ದ ಬಜರಂಗದಳ ಮುಖಂಡ

ಭೋಪಾಲ್: ವೆಬ್ ಸೀರೀಸ್ ‘ಆಶ್ರಮ್’ ಸೆಟ್‌ನಲ್ಲಿ ನಿರ್ದೇಶಕ ಪ್ರಕಾಶ್ ಝಾ ಮತ್ತು ಅವರ ತಂಡದ ಮೇಲೆ ದಾಳಿ ನಡೆಸಿದ ಆರೋಪಿ ಬಜರಂಗ ದಳ ಮುಖಂಡನಾಗಿದ್ದು, ಈತ ಈ ಹಿಂದೆ ಕೊಲೆ ಆರೋಪದಲ್ಲಿ ಶಿಕ್ಷೆಗೆ ಒಳಗಾಗಿದ್ದ ಎನ್ನುವುದನ್ನು NDTV ಪತ್ತೆ ಮಾಡಿದೆ.

 

ಆಶ್ರಮ್ ಸೆಟ್‌ಗಳ ಮೇಲೆ ನಡೆದ ದಾಳಿಯಲ್ಲಿ ಶಾಮೀಲಾದ ಆರೋಪದಲ್ಲಿ ಬಂಧಿಸಲಾದ ಏಳು ಮಂದಿಯ ಪೈಕಿ ಬಲಪಂಥೀಯ ಸಂಘಟನೆಯ ಭೋಪಾಲ್ ಘಟಕದ ಪ್ರಾಂತ ಪ್ರಮುಖ ಸುರೇಶ್ ಸುದೇಲೆ ಸೇರಿದ್ದಾರೆ. ಮರುದಿನವೇ ಸುದೇಲೆ ಸೇರಿದಂತೆ ಎಲ್ಲ ಏಳು ಮಂದಿ ಜಾಮೀನು ಪಡೆದಿದ್ದರು. ಆಶ್ರಮ್ ತಂಡ ದೂರು ನೀಡಲು ಉತ್ಸುಕವಾಗಿಲ್ಲದ ಕಾರಣ ಪೊಲೀಸರ ಮೇಲೆ ಗೂಬೆ ಕೂರಿಸಲಾಗದು ಎಂದು ಪೊಲೀಸರು ಹೇಳಿದ್ದಾರೆ. ಪೊಲೀಸರು ಸುದೇಲೆ ಹಾಗೂ ಇತರರ ವಿರುದ್ಧ ಸಣ್ಣ ಪುಟ್ಟ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿದ್ದು, ಇದು ಆರೋಪಿಗಳು ತಕ್ಷಣ ಜಾಮೀನು ಪಡೆಯಲು ನೆರವಾಯಿತು.

 

ಆದರೆ ಸುದೇಲೇ ಹಿಂದೆಯೂ ಹಿಂಸಾತ್ಮಕ ಇತಿಹಾಸದಲ್ಲಿ ಶಾಮೀಲಾಗಿರುವುದು ಪೊಲೀಸರ ಗಮನಕ್ಕೆ ಬಂದಂತಿಲ್ಲ. 2011ರಲ್ಲಿ ಭೋಪಾಲ್ ಮೂಲದ ಉದ್ಯಮಿ ಭಾಗ್‌ಚಂದ್ ಅವರ ಹತ್ಯೆ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿದ್ದ ಹಾಗೂ ನಾಲ್ಕು ವರ್ಷದ ಬಳಿಕ ಜಾಮೀನು ಪಡೆದಿದ್ದ.

 

ಪ್ರಕಾಶ್ ಝಾ ಮೇಲೆ ಹಲ್ಲೆ ನಡೆದ ತಕ್ಷಣವೇ ಪೊಲೀಸರು ನ್ಯಾಯಾಲಯಕ್ಕೆ ಮೊರೆ ಹೋಗಿ, ಹತ್ಯೆ ಪ್ರಕರಣದಲ್ಲಿ ಸುದೇಲೆ ಪಡೆದಿದ್ದ ಜಾಮೀನು ರದ್ದುಪಡಿಸುವಂತೆ ಕೋರಬೇಕಿತ್ತು ಎನ್ನುವುದು ತಜ್ಞರ ಅಭಿಮತ. ಈ ಸಂಬಂಧದ ಪ್ರಶ್ನೆಗೆ ರಾಜ್ಯ ಗೃಹಸಚಿವ ಡಾ.ನರೋತ್ತಮ ಮಿಶ್ರಾ ಪ್ರತಿಕ್ರಿಯೆ ನೀಡಿಲ್ಲ.

 

ಆಡಳಿತಾರೂಢ ಬಿಜೆಪಿ ಅಪರಾಧಿಗಳಿಗೆ ಆಶ್ರಯ ನೀಡುತ್ತಿದ್ದು, ಸುದೇಲೆ ತನ್ನ ರಾಜಕೀಯ ಸಂಪರ್ಕದಿಂದಾಗಿ ನಿರ್ಭೀತಿಯಿಂದ ಇದ್ದಾನೆ ಎಂದು ಕಾಂಗ್ರೆಸ್ ಆಪಾದಿಸಿದೆ. ರಾಜ್ಯದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಗೃಹ ಸಚಿವ ನರೋತ್ತಮ ಮಿಶ್ರ, ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್, ಬಿಜೆಪಿ ಹಾಗೂ ಆರೆಸ್ಸೆಸ್‌ನ ಹಲವು ಮುಖಂಡರ ಜತೆ ಈ ಬಲಪಂಥೀಯ ಮುಖಂಡ ಇರುವ ಹಲವು ಫೋಟೊಗಳು ಇವೆ ಎಂದು NDTV ವರದಿ ಮಾಡಿದೆ.

 

“ಸುರೇಶ್ ಸುದೇಲೇ ದಾಳಿಗಳನ್ನು ನಡೆಸುತ್ತಾರೆ. ರಾಜ್ಯದ ಗೃಹಸಚಿವರು ಸೇರಿದಂತೆ ಹಲವು ಮಂದಿ ಅವರನ್ನು ಶ್ಲಾಘಿಸುತ್ತಾರೆ. ಹತ್ಯೆ ಪ್ರಕರಣದಲ್ಲಿ ಆತ ಈಗ ಜಾಮೀನು ಪಡೆದಿದ್ದಾನೆ. ಕಾನೂನು ಉಲ್ಲಂಘಿಸಿದ ಇಂಥವರಿಗೆ ಸರ್ಕಾರ ಆಶ್ರಯ ನೀಡಿದರೆ, ಹೇಗೆ ಫಿಲ್ಮ್ ಸಿಟಿ ನಿರ್ಮಿಸಲು ಮತ್ತು ಉದ್ಯೋಗ ಸೃಷ್ಟಿಸಲು ಸಾಧ್ಯ? ತಕ್ಷಣವೇ ಆತನನ್ನು ಜೈಲಿಗೆ ಕಳುಹಿಸಬೇಕು. ಆತನಿಗೆ ರಾಜ್ಯ ಸರಕಾರ ಆಶ್ರಯ ನೀಡುತ್ತಿರುವುದು ದುರದೃಷ್ಟಕರ” ಎಂದು ರಾಜ್ಯದ ಮಾಜಿ ಕಾನೂನು ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಪಿ.ಸಿ.ಶರ್ಮಾ ಹೇಳಿದ್ದಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!