ಮುಸ್ಲಿಮರಿಗೆ ನ್ಯಾಯಬದ್ಧ ಪಾಲು ಸಿಗಬೇಕು: ಉವೈಸಿ
ಹೊಸದಿಲ್ಲಿ, ನ.12: ದೇಶದ ರಾಜಕೀಯ ಮತ್ತು ಶಿಕ್ಷಣ ವ್ಯವಸ್ಥೆಯಲ್ಲಿ ಮುಸ್ಲಿಮರಿಗೆ ನ್ಯಾಯಬದ್ಧ ಪಾಲು ಸಿಗಬೇಕು ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಉವೈಸಿ ಪ್ರತಿಪಾದಿಸಿದ್ದಾರೆ. ಈ ಬೇಡಿಕೆ ಸಂವಿಧಾನದಲ್ಲಿ ದೃಢಪಡಿಸಿದ ಪಾಲುದಾರಿಕೆ ಪ್ರಜಾಪ್ರಭುತ್ವದ ತತ್ವಗಳಿಗೆ ಅನುಸಾರವಾಗಿದೆ ಎಂದು ಅವರು ಹೇಳಿದ್ದಾರೆ.
ಟೈಮ್ಸ್ ನೌ ಶೃಂಗದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮುಸ್ಲಿಂ ವೋಟ್ ಬ್ಯಾಂಕ್ ಎಂಬ ಮಿಥ್ಯೆಯನ್ನು 2014ರ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಛಿದ್ರಗೊಳಿಸಿದ್ದಾರೆ. ಇದಕ್ಕೆ ತದ್ವಿರುದ್ಧವಾಗಿ ದೇಶದಲ್ಲಿ ಸದಾ ಹಿಂದೂ ವೋಟ್ ಬ್ಯಾಂಕ್ ಇದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಮುಸ್ಲಿಂ ಕೋಮುವಾದದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಹೈದರಾಬಾದ್ ಮೂಲದ ಪ್ರಭಾವಿ ಮುಸ್ಲಿಂ ನಾಯಕತ್ವದ ರಾಜಕೀಯ ಪಕ್ಷದ ಮುಖ್ಯಸ್ಥ, “ನಮ್ಮ ದೇಶದಲ್ಲಿ ಯಾವುದೇ ಬಗೆಯ ಕೋಮುವಾದ ಕೆಟ್ಟದು. ನಾನು ಕೋಮುವಾದವನ್ನು ಉತ್ತೇಜಿಸುವುದಿಲ್ಲ. ನಾನು ಹೇಳುವುದೇನೆಂದರೆ ನಮಗೆ ನ್ಯಾಯಬದ್ಧ ಪಾಲು ಸಿಗಬೇಕು ಎನ್ನುವುದು” ಎಂದು ಸ್ಪಷ್ಟಪಡಿಸಿದರು.