ಭಾರತ ಉತ್ಪಾದಿತ ಕೋವಿಡ್ ಮಾತ್ರೆಗೆ ಸದ್ಯದಲ್ಲೇ ಅನುಮತಿ ನಿರೀಕ್ಷೆ : ಡಾ.ರಾಮ್ ವಿಶ್ವಕರ್ಮ
ಹೊಸದಿಲ್ಲಿ: ಕೋವಿಡ್-19 ಸಾಂಕ್ರಾಮಿಕ ವಿರುದ್ಧದ ಸಮರದಲ್ಲಿ ನಿರ್ಣಾಯಕ ಎನ್ನಲಾಗಿರುವ, ಭಾರತದಲ್ಲೇ ಉತ್ಪಾದನೆಯಾದ ‘ಮೆರ್ಕ್ ಡ್ರಗ್ ಮೊಲ್ನುಪಿರವಿರ್’ ತುರ್ತು ಬಳಕೆಗೆ ಕೆಲವೇ ದಿನಗಳಲ್ಲಿ ಭಾರತದ ಔಷಧ ನಿಯಂತ್ರಣ ವ್ಯವಸ್ಥೆ ಅನುಮತಿ ನೀಡುವ ನಿರೀಕ್ಷೆ ಇದೆ ಎಂದು ಸಿಎಸ್‌ಐಆರ್ ಕೋವಿಡ್ ಕಾರ್ಯತಂತ್ರ ಗುಂಪಿನ ಅಧ್ಯಕ್ಷ ಡಾ.ರಾಮ್ ವಿಶ್ವಕರ್ಮ ಬಹಿರಂಗಪಡಿಸಿದ್ದಾರೆ.
ಮಂದ ಅಥವಾ ಸಾಧಾರಣ ಮಟ್ಟದ ಕೋವಿಡ್-19 ಸೋಂಕಿಗೆ ಚಿಕಿತ್ಸೆ ನೀಡಲು ಮೊಲ್ನುಪಿರವಿರ್ ಬಳಸಬಹುದಾಗಿದೆ. ಕೋವಿಡ್ ಸೋಂಕಿತರ ರೋಗಲಕ್ಷಣ ತೀವ್ರವಾಗುವುದನ್ನು ಅಥವಾ ಆಸ್ಪತ್ರೆಗೆ ದಾಖಲಿಸಬೇಕಾದ ಅಗತ್ಯತೆಯನ್ನು ತಡೆಯುವ ನಿಟ್ಟಿನಲ್ಲಿ ವಯಸ್ಕರಿಗೆ ಇದನ್ನು ನೀಡಬಹುದಾಗಿದೆ. ಪಿಫಿಝರ್‌ನ ಪಾಕ್ಸ್‌ಲವಿಡ್‌ಗೆ ಅನುಮತಿ ನೀಡಲು ಮತ್ತೆ ಕೆಲ ಸಮಯ ಹಿಡಿಯಬಹುದು ಎಂದು ಅವರು ಹೇಳಿದ್ದಾರೆ.
ಈ ಎರಡು ಮಾತ್ರೆಗಳು “ಪೆಂಡಮಿಕ್”ನಿಂದ “ಎಂಡಮಿಕ್” ಆಗಿ ಪರಿವರ್ತನೆಯಾಗಲು ಸಹಾಯಕವಾಗಲಿವೆ. ಇದು ಲಸಿಕೆಗಿಂತಲೂ ಮಹತ್ವದ್ದಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ಮಾತ್ರೆಯನ್ನು “ವೈರಸ್ ಶವಪೆಟ್ಟಿಗೆಗೆ ವಿಜ್ಞಾನದ ಕೊನೆಯ ಮೊಳೆ” ಎಂದು ಬಣ್ಣಿಸಿದ ಅವರು, “ನನ್ನ ಪ್ರಕಾರ ಮೊಲ್ನುಪಿರವೀರ್ ನಮಗೆ ಲಭ್ಯವಾಗಬಹುದು. ಐದು ಕಂಪನಿಗಳು ಔಷಧಿ ಉತ್ಪಾದಕರ ಜತೆ ಈಗಾಗಲೇ ಮಾತುಕತೆ ನಡೆಸಿವೆ. ಯಾವುದೇ ದಿನ ಇದಕ್ಕೆ ಅನುಮೋದನೆ ನೀಡಬಹುದು” ಎಂದು ಸ್ಪಷ್ಟಪಡಿಸಿದ್ದಾರೆ.