ಹವಾನಾ ಸಿಂಡ್ರೋಮ್ ಬಗ್ಗೆ ತನಿಖೆಗೆ ಸಮಿತಿ ರೂಪಿಸಿದ ಅಮೆರಿಕ.
ವಾಷಿಂಗ್ಟನ್, : ನಿಗೂಢ ಕಾಯಿಲೆ ಹವಾನಾ ಸಿಂಡ್ರೋಮ್ ನ ಪ್ರಕರಣಗಳ ಕುರಿತು ತನಿಖೆ ನಡೆಸಲು ಹಿರಿಯ ರಾಜತಂತ್ರಜ್ಞ ಜೊನಾಥನ್ ಮೂರ್ ನೇತೃತ್ವದ ಸಮಿತಿಯನ್ನು ನೇಮಿಸಲಾಗಿದೆ ಎಂದು ಅಮೆರಿಕ ಘೋಷಿಸಿದೆ.
ಈ ರೋಗಲಕ್ಷಣದ ಪ್ರಕರಣಗಳು ಹೆಚ್ಚುತ್ತಿದ್ದು ವಿದೇಶದ ವಿರೋಧಿಗಳಿಂದ ಈ ರೋಗ ಕಾಣಿಸಿಕೊಂಡಿದೆಯೇ ಅಥವಾ ಇದೊಂದು ಸಾಮೂಹಿಕ ಮಾನಸಿಕ ಘಟನೆಯಾಗಿದೆಯೇ ಎಂಬ ರಹಸ್ಯವನ್ನು ಬೇಧಿಸಬೇಕಿದೆ. ಈ ನಿಟ್ಟಿನಲ್ಲಿ ತನಿಖೆ ನಡೆಸಲು ರೂಪಿಸಿರುವ ಸಮಿತಿಗೆ ಹಿರಿಯ ರಾಯಭಾರಿ ಮೂರ್ ನೇತೃತ್ವ ವಹಿಸಲಿದ್ದಾರೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಹೇಳಿದ್ದಾರೆ.
ಈ ರೋಗಲಕ್ಷಣ ಕಾಣಿಸಿಕೊಂಡವರು ಯಾವುದೇ ಹಿಂಜರಿಕೆಯಿಲ್ಲದೆ ಮಾಹಿತಿ ನೀಡಿದರೆ ರೋಗದ ಮೂಲವನ್ನು ಪತ್ತೆಹಚ್ಚಲು ಸಹಾಯವಾಗುತ್ತದೆ. ಇದೊಂದು ಆರೋಗ್ಯಕ್ಕೆ ಸಂಬಂಧಿಸಿದ ವಿಲಕ್ಷಣ ಪ್ರಕರಣವಾಗಿದೆ.
ಸರಕಾರದ ಎಲ್ಲರೂ, ಅದರಲ್ಲೂ ವಿಶೇಷವಾಗಿ ವಿದೇಶ ವ್ಯವಹಾರ ಇಲಾಖೆಯು ಈ ರೋಗಲಕ್ಷಣದ ಬಗ್ಗೆ, ಇದಕ್ಕೆ ಕಾರಣರು ಯಾರು ಎಂಬ ಗೊಂದಲವನ್ನು ನಿವಾರಿಸಲು ಮತ್ತು ದೇಶದ ಜನತೆಯ ಆರೋಗ್ಯ ರಕ್ಷಣೆಯ ವಿಷಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತೇವೆ ಎಂದು ಬ್ಲಿಂಕೆನ್ ಹೇಳಿದ್ದಾರೆ. ಹವಾನಾ ಸಿಂಡ್ರೋಮ್ಗೆ ರಶ್ಯಾ ಹೊಣೆ ಎಂದು ಗುಪ್ತಚರ ವಿಭಾಗದ ಕೆಲವು ಮಾಜಿ ಅಧಿಕಾರಿಗಳು ಹೇಳಿದ್ದಾರೆ. ಆದರೆ ಇದನ್ನು ರಶ್ಯಾ ನಿರಾಕರಿಸಿದೆ.
ಮತ್ತೊಬ್ಬ ರಾಯಭಾರಿ ಮಾರ್ಗರೇಟ್ ಉಯೆಹರ ಸಮಿತಿಯ ಸಂಯೋಜಕರಾಗಿ ನೇಮಕಗೊಂಡಿದ್ದಾರೆ. ತಾವು ತೀವ್ರ ಅಸ್ವಸ್ಥಗೊಂಡಿರುವ ಬಗ್ಗೆ ಮಾಹಿತಿ ನೀಡಿದರೂ ಅಮೆರಿಕ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂಬ ಕೆಲವು ರಾಯಭಾರಿಗಳಲ್ಲಿರುವ ಹತಾಶೆಯನ್ನು ನಿವಾರಿಸಲು ಗಮನ ಹರಿಸುವುದಾಗಿ ಅವರು ಹೇಳಿದ್ದಾರೆ.
ಹವಾನಾ ಸಿಂಡ್ರೋಮ್ ಪ್ರಕರಣಗಳ ಬಗ್ಗೆ ತನಿಖೆ ನಡೆಸಲು ಕೇಂದ್ರ ವ್ಯಕ್ತಿಯೊಬ್ಬರನ್ನು ನೇಮಿಸಬೇಕೆಂದು ಕಳೆದ ತಿಂಗಳು ಅಮೆರಿಕದ ದ್ವಿಪಕ್ಷೀಯ ಸಂಸದರ ಗುಂಪೊಂದು ಬ್ಲಿಂಕೆನ್ರನ್ನು ಆಗ್ರಹಿಸಿತ್ತು. ಈ ಪ್ರಕರಣಕ್ಕೆ ನೀಡಬೇಕಾದ ಗರಿಷ್ಟ ಆದ್ಯತೆಯನ್ನು ವಿದೇಶಾಂಗ ಇಲಾಖೆ ನೀಡುತ್ತಿಲ್ಲ ಎಂಬ ಆತಂಕ ಮೂಡಿದೆ. ಇವು ದಾಳಿಯ ಪ್ರಕರಣಗಳು ಎಂದವರು ಹೇಳಿದ್ದರು.