ಕೇಂದ್ರ ಸರಕಾರ-ಇಟಲಿ ವಿಮಾನ ಯಾನ ಸಂಸ್ಥೆ ನಡುವಿನ ಒಪ್ಪಂದ; ಕಾಂಗ್ರೆಸ್ ಪ್ರಶ್ನೆ
ಹೊಸದಿಲ್ಲಿ, ನ. 8: ಅಗಸ್ಟಾ ಕಾಪ್ಟರ್ ಒಪ್ಪಂದದ ಕುರಿತಂತೆ ಆಡಳಿತಾರೂಢ ಬಿಜೆಪಿ ನಾಯಕರು ಭ್ರಷ್ಟ ಎಂದು ಹೇಳಲಾದ ಫಿನ್ ಮೆಕ್ಕಾನಿಕಾ ಕಂಪೆನಿಯಿಂದ ಖರೀದಿ ಮೇಲೆ ವಿಧಿಸಿದ ನಿಷೇದ ಹಿಂಪಡೆದ ವರದಿ ಕುರಿತಂತೆ ಕೇಂದ್ರ ಸರಕಾರ ಉತ್ತರಿಸುವಂತೆ ಕಾಂಗ್ರೆಸ್ ಸೋಮವಾರ ಆಗ್ರಹಿಸಿದೆ.
ಯುಪಿಎ ಆಡಳಿತದ 2ನೇ ಅವಧಿಯಲ್ಲಿ ವಿವಿಐಪಿ ಹೆಲಿಕಾಪ್ಟರ್ ಖರೀದಿ ಕುರಿತಂತೆ ಬಿಜೆಪಿ ‘ಭ್ರಷ್ಟಾಚಾರದ ಕೊಚ್ಚೆ’ ಎಂದು ವ್ಯಾಖ್ಯಾನಿಸಿರುವುದನ್ನು ಕಾಂಗ್ರೆಸ್ ಪ್ರತಿಪಾದಿಸಿದೆ ಹಾಗೂ ಬಿಜೆಪಿ ಈ ಹೇಳಿಕೆಯನ್ನು ಈಗ ಸದ್ದಿಲ್ಲದೆ ಮುಚ್ಚಿ ಹಾಕಿದೆ ಎಂದಿದೆ. ಒಪ್ಪಂದದ ಬಾಧ್ಯತೆ ಉಲ್ಲಂಘನೆ ಹಾಗೂ ಒಪ್ಪಂದವನ್ನು ಭದ್ರಪಡಿಸಲು ಕಂಪೆನಿ ಲಂಚ ನೀಡಿದ ಆರೋಪದ ಹಿನ್ನೆಲೆಯಲ್ಲಿ ಭಾರತೀಯ ವಾಯು ಪಡೆಗೆ 12 ಎಡಬ್ಲು-101 ವಿವಿಐಪಿ ಕಾಪ್ಟರ್ಗಳ ಪೂರೈಕೆಯನ್ನು ಫಿನ್ಮೆಕ್ಕಾನಿಕಾದ ಬ್ರಿಟಿಶ್ ಅಂಗ ಸಂಸ್ಥೆಯಾದ ಅಗಸ್ಟಾ ವೆಸ್ಟ್ ಲ್ಯಾಂಡ್ನ ಗುತ್ತಿಗೆಯನ್ನು ಭಾರತ ಸರಕಾರ 2014ರಲ್ಲಿ ರದ್ದುಗೊಳಿಸಿತ್ತು. ಆ ಸಂದರ್ಭ ಕಾಂಗ್ರೆಸ್ ಮೇಲೆ ವಾಗ್ದಾಳಿ ನಡೆಸಿದ ಬಿಜೆಪಿ, ಕಾಂಗ್ರೆಸ್ನ ನಾಯಕರು ಯುಪಿಎಯ ಸರಕಾರದ ಎರಡನೇ ಆಡಳಿತಾವಧಿಯ ಸಂದರ್ಭ ಒಪ್ಪಂದಕ್ಕೆ ಸಹಿ ಹಾಕಲು 450 ಕೋಟಿ ರೂಪಾಯಿ ಲಂಚದ ಪಡೆದಿದ್ದಾರೆ ಎಂದು ಆರೋಪಿಸಿತ್ತು ಎಂದು ಕಾಂಗ್ರೆಸ್ ಹೇಳಿದೆ.
ಇಂದು ಕಾಂಗ್ರೆಸ್ ವರಿಷ್ಠ ರಣದೀಪ್ ಸುರ್ಜೇವಾಲ, ‘‘ಮೋದಿ ಸರಕಾರ ಹಾಗೂ ಅಗಸ್ಟಾ / ಫಿನ್ಮೆಕ್ಕಾನಿಕಾ ನಡುವಿನ ರಹಸ್ಯ ಒಪ್ಪಂದ ಏನು? ಭ್ರಷ್ಟ-ಲಂಚ ನೀಡುವವರು-ನಕಲಿ ಎಂದು ಕರೆದ ಮೋದಿ ಹಾಗೂ ಅವರ ಸರಕಾರ ಈಗ ಈ ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಳ್ಳುವುದು ಸರಿಯೆಂದು ಕಾಣುತ್ತದೆಯೇ ?’’ ಎಂದು ಪ್ರಶ್ನಿಸಿದ್ದಾರೆ.
‘‘ಭ್ರಷ್ಟಾಚಾರವನ್ನು ಸದ್ದಿಲ್ಲದೇ ಮುಚ್ಚಲಾಗುತ್ತಿದೆ ಎಂಬುದು ಇದರ ಅರ್ಥವೇ? ದೇಶ ಉತ್ತರಕ್ಕಾಗಿ ಕಾಯುತ್ತಿದೆ’’ ಎಂದು ಅವರು ಹಿಂದಿಯಲ್ಲಿ ಸರಣಿ ಟ್ವೀಟ್ ಮಾಡಿದ್ದಾರೆ. ಫಿನ್ಮೆಕ್ಕಾನಿಕಾದಿಂದ ಖರೀದಿ ಕುರಿತ ನಿಷೇಧವನ್ನು ಪ್ರಧಾನಿ ಮೋದಿ ಸರಕಾರ ಹಿಂಪಡೆದ ಕುರಿತ ಮಾಧ್ಯಮ ವರದಿಯನ್ನು ಅವರು ಉಲ್ಲೇಖಿಸಿದ್ದಾರೆ. ‘‘ಪ್ರಧಾನಿ ನರೇಂದ್ರ ಮೋದಿ ಅವರು ಕಂಪೆನಿ ಭ್ರಷ್ಟ ಎಂದು ಹೇಳಿದ್ದಾರೆ. ಗೃಹ ಸಚಿವರು ಕಂಪೆನಿಯನ್ನು ನಕಲಿ ಎಂದು ಕರೆದಿದ್ದಾರೆ.
ಮಾಜಿ ರಕ್ಷಣಾ ಸಚಿವರು ಸಂಸತ್ತಿನಲ್ಲಿ ಕಂಪೆನಿ ಭ್ರಷ್ಟ ಎಂದು ಆರೋಪಿಸಿದ್ದಾರೆ. ಆದರೆ, ಮೋದಿ ಸರಕಾರ ಅಗಸ್ಟಾ /ಫಿನ್ಮೆಕ್ಕಾನಿಕಾವನ್ನು 2014 ಜುಲೈ 22ರಂದು ಕಪ್ಟು ಪಟ್ಟಿಯಿಂದ ಹಿಂಪಡೆದುಕೊಂಡಿದೆ. ಈಗ ಖರೀದಿ ನಿಷೇಧವನ್ನು ಕೂಡ ಹಿಂಪಡೆದುಕೊಂಡಿದೆ’’ ಎಂದು ಸುರ್ಜೇವಾಲ ಇನ್ನೊಂದು ಟ್ವೀಟ್ನಲ್ಲಿ ಹೇಳಿದ್ದಾರೆ. ಕೇಂದ್ರ ಸರಕಾರದಿಂದ ಸೋರಿಕೆಯಾದ ದಾಖಲೆಗಳ ಬಗ್ಗೆ ಮಾಧ್ಯಮ ಗೆಳೆಯರು ಸಾವಿರಾರು ಗಂಟೆಗಳ ಸುದ್ದಿ ಪ್ರಸಾರ ಮಾಡಿದರು ಹಾಗೂ 2014ರ ಲೋಕಸಭಾ ಚುನಾವಣೆ ಸಂದರ್ಭ ಯುಪಿಎ-ಕಾಂಗ್ರೆಸ್ ಸರಕಾರದ ವಿರುದ್ಧ ತಪ್ಪು ವ್ಯಾಖ್ಯಾನ ರೂಪಿಸಿದರು ಎಂದು ಸುರ್ಜೇವಾಲ ಆರೋಪಿಸಿದ್ದಾರೆ. ಅಗಸ್ಟಾದೊಂದಿಗಿನ ರಹಸ್ಯ ಒಪ್ಪಂದದ ಕುರಿತು ಮೋದಿ ಸರಕಾರವನ್ನು ಪ್ರಶ್ನಿಸುವ ಧೈರ್ಯ ಈಗ ಇದೆಯೇ ಎಂದು ಅವರು ಪ್ರಶ್ನಿಸಿದ್ದಾರೆ.