ತಾರತಮ್ಯದ ಕುರಿತು ಬುಡಕಟ್ಟು ಮಹಿಳೆಯ ಆರೋಪ: ಗ್ರಾಮಕ್ಕೆ ಭೇಟಿ ನೀಡಿ ಸವಲತ್ತು ವಿತರಿಸಿದ ಸಿಎಂ ಸ್ಟಾಲಿನ್
ಚೆನ್ನೈ: ʼನರಿಕ್ಕುರವರ್ʼ ಬುಡಕಟ್ಟು ಮಹಿಳೆಯೋರ್ವರು ತಮ್ಮ ಸಮುದಾಯದ ವಿರುದ್ಧ ತಾರತಮ್ಯ ಎಸಗಲಾಗುತ್ತಿದೆ ಎಂದು ಆರೋಪಿಸಿದ ಬಳಿಕ ಇದೀಗ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಆ ಗ್ರಾಮಕ್ಕೆ ಭೇಟಿ ನೀಡಿ ಸವಲತ್ತುಗಳನ್ನು ವಿತರಿಸಿದ್ದಾರೆ ಎಂದು indianexpress.com ವರದಿ ಮಾಡಿದೆ. ಸಮೀಪದ ಗ್ರಾಮಕ್ಕೆ ಭೇಟಿ ನೀಡಿದ ಅವರು ಭೂಸ್ವಾಧೀನ ಪತ್ರ, ರೇಶನ್ ಕಾರ್ಡ್, ಸಾಲ ಸೌಲಭ್ಯ ಸೇರಿದಂತೆ 4.53 ಕೋಟಿ ಮೌಲ್ಯದ ಯೋಜನೆಯನ್ನು 282 ಮಂದಿ ಫಲಾನುಭವಿಗಳಿಗೆ ವಿತರಿಸಿದ್ದಾರೆ.
ಫಲಾನುಭವಿಗಳಾದ ಅಶ್ವಿನಿ ಹಾಗೂ ಭವಾನಿ ಎಂಬವರು ತಮ್ಮ ಗ್ರಾಮಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದ್ದನ್ನು ಪುರಸ್ಕರಿಸಿ ಮುಖ್ಯಮಂತ್ರಿ ಅವರ ಮನೆಗಳಿಗೆ ಭೇಟಿ ನೀಡಿದರು. ಕುಟುಂಬದೊಂದಿಗೆ ಸಂವಾದ ನಡೆಸಿದರು ಹಾಗೂ ಇನ್ನಿತರ ನರಿಕುರವರ್ ಹಾಗೂ ಇರುಳರ ಮನೆಗಳನ್ನು ಸಂದರ್ಶಿಸಿ ಮೂಲಸೌಕರ್ಯಗಳನ್ನು ಹೆಚ್ಚಿಸುವ ಭರವಸೆ ನೀಡಿದರು.
ಕುಂದುಕೊರತೆಗಳ ಪರಿಹಾರ ಕೋರಿ ಸಲ್ಲಿಸಲಾದ ಮನವಿಗಳನ್ನು ಸ್ವೀಕರಿಸಿದ ಸಿಎಂ, ಸರಿಯಾದ ರಸ್ತೆಗಳು ಸೇರಿದಂತೆ ಎಲ್ಲ ಸೌಕರ್ಯಗಳನ್ನು ಕಲ್ಪಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು ಮತ್ತು ಅವರ ಜೀವನೋಪಾಯದ ಅವಕಾಶಗಳನ್ನು ಹೆಚ್ಚಿಸಲು ಭರವಸೆ ನೀಡಿದರು.
ದಕ್ಷಿಣ ಚೆನ್ನೈನ ತಿರುವನ್ಮಿಯೂರ್‌ನಿಂದ ಸುಮಾರು 50 ಕಿಮೀ ದೂರದಲ್ಲಿರುವ ಚೆಂಗಲ್‌ಪೇಟ್ ಜಿಲ್ಲೆಯ ತಿರುಕಝುಕುಂದ್ರಂ ತಾಲೂಕಿನ ಪೂಂಜೇರಿ ಗ್ರಾಮದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.