ಕೊರೋನ ಸೋಂಕಿನ ಮೂಲ ಪ್ರಯೋಗಾಲಯ ಎಂಬ ಅಮೆರಿಕದ ವರದಿ ವಿಶ್ವಾಸಾರ್ಹವಲ್ಲ: ಚೀನಾ

ಕೊರೋನ ಸೋಂಕಿನ ಮೂಲ ಪ್ರಯೋಗಾಲಯ ಎಂಬ ಅಮೆರಿಕದ ವರದಿ ವಿಶ್ವಾಸಾರ್ಹವಲ್ಲ: ಚೀನಾ

 

ಶಾಂಘೈ,: ಕೋವಿಡ್-19 ಸೋಂಕು ಪ್ರಯೋಗಾಲಯದಲ್ಲಿ ಹುಟ್ಟಿಕೊಂಡಿದೆ ಎಂಬುದು ನಂಬಲರ್ಹ ಮಾಹಿತಿಯಾಗಿದೆ ಎಂಬ ಅಮೆರಿಕದ ಗುಪ್ತಚರ ವರದಿ ಅವೈಜ್ಞಾನಿಕವಾಗಿದೆ ಮತ್ತು ವಿಶ್ವಾಸಾರ್ಹವಲ್ಲ ಎಂದು ಚೀನಾದ ವಿದೇಶ ವ್ಯವಹಾರ ಇಲಾಖೆಯ ವಕ್ತಾರ ವಾಂಗ್ ವೆನ್‌ಬಿನ್ ಹೇಳಿದ್ದಾರೆ. ಅಮೆರಿಕವು ಫೋರ್ಟ್ ಡೆಟ್ರಿಕ್‌ನಲ್ಲಿರುವ ತನ್ನ ಪ್ರಯೋಗಾಲಯವನ್ನು ಅಂತರಾಷ್ಟ್ರೀಯ ತಜ್ಞರ ವೀಕ್ಷಣೆಗೆ ಮುಕ್ತಗೊಳಿಸಬೇಕು ಎಂದು ವೆನ್‌ಬಿನ್ ಪುನರುಚ್ಚರಿಸಿದ್ದಾರೆ.

ಕೋವಿಡ್-19 ಸೋಂಕಿಗೆ ಕಾರಣವಾಗಿರುವ ಸಾರ್ಸ್-ಸಿಒವಿ-2 ರೋಗಾಣು ಪ್ರಾಕೃತಿಕವಾಗಿ ಹುಟ್ಟಿಕೊಂಡಿದೆ ಮತ್ತು ಪ್ರಯೋಗಾಲಯದಲ್ಲಿ ವೈರಾಣು ಸೋರಿಕೆಯಾಗಿ ಹರಡಿದೆ ಎಂಬ ಎರಡೂ ಮಾಹಿತಿಗಳು ವಿಶ್ವಾಸಾರ್ಹವಾಗಿದೆ. ಆದರೆ ಸತ್ಯ ಎಂದಿಗೂ ತಿಳಿಯದು ಎಂದು ಶನಿವಾರ ಅಮೆರಿಕ ಗುಪ್ತಚರ ಇಲಾಖೆಯ ಪರಿಷ್ಕತ ಮಾಹಿತಿಯಲ್ಲಿ ಉಲ್ಲೇಖಿಸಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಚೀನಾದ ವಿದೇಶ ವ್ಯವಹಾರ ಇಲಾಖೆ ‘ಸುಳ್ಳನ್ನು ಸಾವಿರ ಬಾರಿ ಪುನರಾವರ್ತಿಸಿದರೂ ಅದು ಸುಳ್ಳೇ ಆಗಿರುತ್ತದೆ. ಅಮೆರಿಕದ ಗುಪ್ತಚರ ಇಲಾಖೆ ಕುಟಿಲತನ ಮತ್ತು ವಂಚನೆಗೆ ಹೆಸರಾಗಿದೆ’ ಎಂದು ಟೀಕಿಸಿದೆ.

ಕೊರೋನ ಸೋಂಕಿನ ಮೂಲ ಪತ್ತೆಹಚ್ಚುವುದು ಗಂಭೀರ ಮತ್ತು ಸಂಕೀರ್ಣ ವಿಷಯವಾಗಿದ್ದು ಜಾಗತಿಕ ವಿಜ್ಞಾನಿಗಳ ಸಹಕಾರದಿಂದ ಮಾತ್ರ ಇದನ್ನು ಸಂಶೋಧನೆ ನಡೆಸಬಹುದು’ ಎಂದು ಇಲಾಖೆಯ ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ.

ವುಹಾನ್‌ನ ಪ್ರಯೋಗಾಲಯದಲ್ಲಿ ಸಂಶೋಧನೆಯ ಸಂದರ್ಭ ಸೋರಿಕೆಯಾದ ವೈರಾಣು ಕೊರೋನ ಸೋಂಕಿನ ಮೂಲವಾಗಿದೆ ಎಂಬ ವರದಿಯನ್ನು ಚೀನಾ ನಿರಂತರವಾಗಿ ನಿರಾಕರಿಸುತ್ತಿದೆ. ಈ ವರ್ಷ ಚೀನಾ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಜಂಟಿ ಅಧ್ಯಯನದ ಬಳಿಕ ಬಿಡುಗಡೆಗೊಳಿಸಿರುವ ವರದಿಯಲ್ಲೂ ಈ ವಾದವನ್ನು ಅಲ್ಲಗಳೆಯಲಾಗಿದ್ದು, ಬಹುಷಃ ವನ್ಯಜೀವಿಗಳ ಮಾರಾಟ ವ್ಯವಹಾರದಿಂದ ಕೊರೋನ ಸೋಂಕು ಮಾನವನಿಗೆ ಹರಡಿರುವ ಸಾಧ್ಯತೆಯಿದೆ ಎಂದಿದೆ.

ಆದರೆ , ವುಹಾನ್ ಪ್ರಯೋಗಾಲಯದಲ್ಲಿ ಪರಿಶೀಲನೆ ನಡೆಸದೆ ಮತ್ತು ಸೋಂಕಿನ ಆರಂಭಿಕ ಪ್ರಸಾರದ ಮಾರ್ಗದ ಬಗ್ಗೆ ತಿಳಿದುಕೊಳ್ಳಲು ಅಗತ್ಯವಾಗಿರುವ ಸಮಗ್ರ ಅಂಕಿಅಂಶವನ್ನು ಅಧ್ಯಯನ ನಡೆಸದೆ ಈ ವರದಿ ತಯಾರಿಸಲಾಗಿದೆ ಎಂದು ಈ ವರದಿಯ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.

ಈ ಹಿನ್ನೆಲೆಯಲ್ಲಿ, ಯಾವುದೇ ಹೊಸ ತನಿಖೆಗೆ ನೆರವಾಗುವ ಸಮಗ್ರ ಮಾಹಿತಿ ಒದಗಿಸುವಂತೆ ಕಳೆದ ತಿಂಗಳು ವಿಶ್ವ ಆರೋಗ್ಯ ಸಂಸ್ಥೆಯ ಸಾಂಕ್ರಾಮಿಕ ಮೂಲದ ಕುರಿತಾದ ವೈಜ್ಞಾನಿಕ ಸಲಹಾ ತಂಡ ಚೀನಾವನ್ನು ಆಗ್ರಹಿಸಿತ್ತು. ಆದರೆ ಇದರಿಂದ ರೋಗಿಗಳ ಖಾಸಗಿತನದ ಉಲ್ಲಂಘನೆಯಾಗುತ್ತದೆ ಎಂದು ಹೇಳಿದ್ದ ಚೀನಾ ಮಾಹಿತಿ ನೀಡಲು ನಿರಾಕರಿಸಿತ್ತು.

Leave a Reply

Your email address will not be published. Required fields are marked *

You cannot copy content of this page

error: Content is protected !!