ಪ್ರತಿಯೊಬ್ಬರು ಕನ್ನಡ ನಾಡು ನುಡಿ ಉಳಿಸಬೇಕು
ದೇವನಹಳ್ಳಿ: ಪ್ರತಿಯೊಬ್ಬರು ಕನ್ನಡ ನಾಡು-ನುಡಿ ಉಳಿಸಿ ಬೆಳೆಸುವ ಕಾರ್ಯ ಮಾಡಬೇಕು ಎಂದು ದೇವನಹಳ್ಳಿ ಸಾರ್ವಜನಿಕ ಸಂಪರ್ಕ ಕೇಂದ್ರದ ಅಧ್ಯಕ್ಷ ಸಹದೇಶ್ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ದೇವನಹಳ್ಳಿ ಸಾರ್ವಜನಿಕ ಸಂಪರ್ಕ ಕೇಂದ್ರ ವತಿಯಿಂದ ಭುವನೇಶ್ವರಿ ದೇವಿಗೆ ಗೌರವ ಸಮರ್ಪಿಸಿ ಅವರು ಮಾತನಾಡಿದರು. ನಮ್ಮ ಕೈಲಾದ ಸಹಾಯವನ್ನು ಇತರರಿಗೆ ಮಾಡಿದಾಗ ಮಾತ್ರ ನಮ್ಮ ಜೀವನ ಸಾರ್ಥಕವಾಗುತ್ತದೆ. ದೇವನಹಳ್ಳಿ ತಾಲೂಕಿನ ಜನತೆಗೆ ನಮ್ಮ ಸಂಸ್ಥೆಯ ವತಿಯಿಂದ ಸಿಗುವಂತಹ ಸೌಲಭ್ಯಗಳ ಬಗ್ಗೆ ಈಗಾಗಲೇ ಹಲವಾರು ರೀತಿಯಲ್ಲಿ ಮಾಹಿತಿ ತಂತ್ರಜ್ಞಾನ ಬಳಸಿಕೊಂಡು ಜನರ ವಿಶ್ವಾಸ ಗಳಿಸಲು ಸಹಕಾರಿಯಾಗಿದೆ. ಕನ್ನಡ ರಾಜ್ಯೋತ್ಸವದಲ್ಲಿ ನಮ್ಮ ತಾಲೂಕಿನ ಗಣ್ಯ ವ್ಯಕ್ತಿಗಳು ತಮ್ಮ ಪ್ರತಿಭೆಗಳನ್ನು ಹೊರಸೂಸಿದ್ದಾರೆ. ಅವರಿಗೆ ನಮ್ಮ ಸಂಸ್ಥೆಯ ಪರವಾಗಿ ಅಭಿನಂದಿಸುತ್ತೇನೆ ಎಂದರು.
ಭಾರತ ಜನ ಜಾಗೃತಿ ಸೇನೆಯ ರಾಜ್ಯಾಧ್ಯಕ್ಷ ಡಾ.ಸಿ.ಮುನಿಯಪ್ಪ ಮಾತನಾಡಿ, ದೇವನಹಳ್ಳಿ ತಾಲೂಕಿನಲ್ಲಿ ನೊಂದವರು, ತಿಳುವಳಿಕೆ ಇಲ್ಲದವರಿಗೆ ಸರಕಾರದ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ಮಾಡುತ್ತಿರುವ ಸಹದೇಶ್ ಅವರ ಸೇವೆ ಶ್ಲಾಘನೀಯವಾದದ್ದು, ಇಡೀ ದೇಶದಲ್ಲಿ ಇತರೆ ರಾಜ್ಯಗಳಲ್ಲಿ ಅವರದೇ ಆದಂತಹ ಭಾಷೆಗಳಿವೆ. ಉದಾಹರಣೆಗೆ ಆಂಧ್ರದಲ್ಲಿ ತೆಲುಗು, ತಮಿಳುನಾಡಿನಲ್ಲಿ ತಮಿಳು, ಕೇರಳದಲ್ಲಿ ಮಳಯಾಳಂ, ಮಹಾರಾಷ್ಟ್ರದಲ್ಲಿ ಹಿಂದಿ ಹೀಗೆ ಹಲವಾರು ರಾಜ್ಯಗಳಲ್ಲಿ ತಮ್ಮದೇ ಆದ ಭಾಷೆಗೆ ಒತ್ತು ನೀಡುತ್ತಿದ್ದಾರೆ. ಆದರೆ ಕರ್ನಾಟಕದಲ್ಲಿ ಕನ್ನಡವನ್ನು ಬಿಟ್ಟು ಇತರೆ ಭಾಷೆಯನ್ನು ಬಳಸುವುದು ಎಷ್ಟರ ಮಟ್ಟಿಗೆ ಸರಿಯೆನಿಸುತ್ತದೆ. ಅದ್ದರಿಂದ ಪ್ರತಿಯೊಬ್ಬರು ಕನ್ನಡ ಭಾಷೆಯನ್ನು ಮಾತೃಭಾಷೆಯನ್ನಾಗಿ ಬಳಸಬೇಕು. ಕರ್ನಾಟಕದಲ್ಲಿ ಕನ್ನಡವನ್ನು ಬಿಟ್ಟು ಬೇರೆ ಭಾಷೆಯಲ್ಲಿ ವ್ಯವಹರಿಸುವದನ್ನು ಬಿಡಬೇಕು ಎಂದು ಕರೆ ನೀಡಿದರು.
ಈ ವೇಳೆಯಲ್ಲಿ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ವೇದಿಕೆ ಅಧ್ಯಕ್ಷ ಎಂ.ಮುನಿಕೃಷ್ಣ, ಗೌರವಾಧ್ಯಕ್ಷ ಎಂ.ಡಿ.ರಾಮಚಂದ್ರ, ಜಿಲ್ಲಾಧ್ಯಕ್ಷ ನಾರಾಯಣಸ್ವಾಮಿ, ಸಂಶೋಧಕ ಗುರುಸಿದ್ಧಯ್ಯ, ಪೊಲೀಸ್ ಇಲಾಖೆಯ ಗೃಹರಕ್ಷಕ ನಾಗರಾಜ್, ಸಣ್ಣ ನೀರಾವರಿ ಇಲಾಖೆಯ ತಾಲೂಕು ಎಇಇ ಸೋಮಶೇಖರ್, ರೈತಸಂಘದ ಮುಖಂಡ ವಿಶ್ವನಾಥ್, ಸುಬ್ಬಣ್ಣ, ಇತರರು ಇದ್ದರು.
ಮಂಜು ಬೂದಿಗೆರೆ
9113813926