ಶ್ರೀ ಮಹರ್ಷಿ ವಾಲ್ಮೀಕಿ ಇಡೀ ಜಗತ್ತಿಗೆ ಆದರ್ಶ: ಸಂಸದ ಜಿ.ಎಸ್. ಬಸವರಾಜು

ಶ್ರೀ ಮಹರ್ಷಿ ವಾಲ್ಮೀಕಿ ಇಡೀ ಜಗತ್ತಿಗೆ ಆದರ್ಶ: ಸಂಸದ ಜಿ.ಎಸ್. ಬಸವರಾಜು

 

 

ತುಮಕೂರು: ರಾಮಾಯಣದಂತಹ ಮಹಾಕಾವ್ಯವನ್ನು ನೀಡಿದ ಶ್ರೀ ಮಹರ್ಷಿ ವಾಲ್ಮೀಕಿ ಅವರು ಇಡೀ ಜಗತ್ತಿಗೆ ಆದರ್ಶಪ್ರಾಯರಾಗಿದ್ದಾರೆ ಎಂದು ಸಂಸದ ಜಿ.ಎಸ್. ಬಸವರಾಜು ತಿಳಿಸಿದರು.

ಭಾರತದ ೭೫ನೇ ಸ್ವಾತಂತ್ರ‍್ಯ ಅಮೃತ ಮಹೋತ್ಸವದ ಅಂಗವಾಗಿ ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿಂದು ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಹಾಗೂ ವಾಲ್ಮೀಕಿ ಮಹರ್ಷಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ಕವಿಗಳಲ್ಲಿ ಆದಿಕವಿಯಾಗಿ ನಿಲ್ಲುವ ಮಹಾಕವಿ ವಾಲ್ಮೀಕಿ ಮಹರ್ಷಿ. ಅವರು ಬರೆದ ರಾಮಾಯಣ ವಿಶ್ವದಲ್ಲಿಯೇ ಪುರಾತನವಾಗಿದ್ದು, ಜ್ಞಾನೋದಯಕ್ಕೆ ದಾರಿದೀಪವಾಗಿದೆ ಎಂದರು.

ರಾಮಾಯಣ ಮತ್ತು ಮಹಾಭಾರತ ಮಹಾಗ್ರಂಥಗಳಾಗಿದ್ದು, ಈ ಮಹಾ ಗ್ರಂಥಗಳನ್ನು ಬರೆದವರು ಶೂದ್ರರೇ ಆಗಿದ್ದಾರೆ ಎನ್ನುವುದು ಹೆಮ್ಮೆಯ ವಿಚಾರವಾಗಿದೆ. ವಾಲ್ಮೀಕಿ ಅವರು ರಾಮಾಯಣ ಮಹಾಕಾವ್ಯವಾಗಿ ಉಳಿಯಬೇಕೆಂಬ ಹಿನ್ನೆಲೆಯಲ್ಲಿ ಬರೆದ ಗ್ರಂಥವಾಗಿದೆ. ಶ್ರೀ ವಾಲ್ಮೀಕಿ ಜಯಂತಿಯನ್ನು ರಾಷ್ಟ್ರ ವ್ಯಾಪ್ತಿಯಾಗಿ ಆಚರಣೆ ಮಾಡಲಾಗುತ್ತಿದ್ದು, ಇಂದಿನ ಪೀಳಿಗೆಯು ವಾಲ್ಮೀಕಿಯವರನ್ನು ಆದರ್ಶ ಗುರುವಾಗಿಟ್ಟುಕೊಳ್ಳಬೇಕು ಎಂದು ಸಲಹೆಯಿತ್ತರು.

ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ ಮಾತನಾಡಿ, ವಾಲ್ಮೀಕಿ ಬರೆದ ರಾಮಾಯಣವು ಗಿರಿ-ಶಿಖರ, ಸೂರ್ಯ- ಚಂದ್ರ- ಭೂಮಿ ಇರುವಷ್ಟು ದಿನ ಇರುತ್ತದೆ. ರಾಮಾಯಣ ಕೃತಿ ಸಾಹಿತ್ಯಾತ್ಮಕವಾಗಿದ್ದು, ಎಲ್ಲಾ ರೀತಿಯಲ್ಲಿಯೂ ಪರಿಪೂರ್ಣವಾಗಿದೆ ಎಂದರು.

ಸಾAಸ್ಕೃತಿಕ, ಸಾಮಾಜಿಕ, ರಾಜಕೀಯ, ಆರ್ಥಿಕವಾಗಿ ನೈಜ ಘಟನೆಗಳು ನಮ್ಮ ಮುಂದೆ ನಡೆಯುತ್ತಿವೆ ಎನ್ನುವ ರೀತಿಯಲ್ಲಿಯೇ ಮಹಾಕಾವ್ಯ ರಾಮಾಯಣವನ್ನು ಮಹಾಕವಿ ಮಹರ್ಷಿ ವಾಲ್ಮೀಕಿ ವರ್ಣನೆ ಮಾಡಿದ್ದಾರೆ. ರಾಮಾಯಣದಲ್ಲಿ ಸಾಹಿತ್ಯವಷ್ಟೇ ಅಲ್ಲ. ಪ್ರಸ್ತುತ ಪ್ರಚಲಿತದಲ್ಲಿರುವ ಎಲ್ಲಾ ಘಟನೆಗಳನ್ನೂ ಒಳಗೊಂಡAತೆ ವಿಜ್ಞಾನ- ತಂತ್ರಜ್ಞಾನವೂ ಅಡಗಿದೆ. ಜಗತ್ತಿನಲ್ಲಿ ಯಾವ ಕವಿಯೂ ಹೇಳದ್ದನ್ನು ವಾಲ್ಮೀಕಿ ತಮ್ಮ ಕೃತಿಯಲ್ಲಿ ಹೇಳಿದ್ದಾರೆ. ಇಂತಹ ಮಹಾಕೃತಿ ಬರೆದ ಕವಿ ಮಹರ್ಷಿ ವಾಲ್ಮೀಕಿ ಇನ್ನೂ ಶ್ರೇಷ್ಠ. ವಾಲ್ಮೀಕಿ ಅವರು ತಮ್ಮ ಮಹಾಕೃತಿ ಮೂಲಕ ಜಗತ್ತಿನ ದರ್ಶನ ಮಾಡಿಸುವ ಶ್ರೇಷ್ಠ ದಾರ್ಶನಿಕರೆನಿಸಿಕೊಂಡಿದ್ದಾರೆ ಎಂದು ಹೇಳಿದರು.

ಕರ್ನಾಟಕ ವಾಲ್ಮೀಕಿ ಸೇನೆಯ ರಾಜ್ಯಾಧ್ಯಕ್ಷ ಪ್ರತಾಪ್ ಮದಕರಿ ಮಾತನಾಡಿ, ಈ ಜಗತ್ತಿನಲ್ಲಿ ಏನಿದೆಯೋ ಅದೆಲ್ಲಾ ರಾಮಾಯಣದಲ್ಲಿದೆ. ಜಗತ್ತಿನಲ್ಲಿ ಏನಿಲ್ಲವೋ ಅದು ರಾಮಾಯಣದಲ್ಲೂ ಇಲ್ಲ. ಇಂತಹ ಕೃತಿಯನ್ನು ಕೊಡುಗೆಯಾಗಿ ಕೊಟ್ಟ ಮಹರ್ಷಿ ವಾಲ್ಮೀಕಿಯಂತಹ ಕವಿ ಮತ್ತೊಬ್ಬ ಜನಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

ನಗರದಲ್ಲಿ ನಿರ್ಮಾಣವಾಗಿರುವ ವಾಲ್ಮೀಕಿ ಭವನವನ್ನು ಶೀಘ್ರ ಉದ್ಘಾಟನೆ ಮಾಡಬೇಕು. ವಾಲ್ಮೀಕಿ ಭವನದ ಪಕ್ಕದಲ್ಲಿ ಇರುವ ಖಾಲಿ ಜಾಗವನ್ನು ವಾಲ್ಮೀಕಿ ಭವನಕ್ಕೆ ಮಂಜೂರು ಮಾಡಿಕೊಡಬೇಕು. ಅಲ್ಲದೆ, ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿಯನ್ನು ಹೆಚ್ಚಳ ಮಾಡಬೇಕು ಎಂದು ಶಾಸಕರಿಗೆ ಮನವಿ ಮಾಡಿದರು.

ತುಮಕೂರು ವಿಶ್ವ ವಿದ್ಯಾನಿಲಯದ ಪ್ರಾಧ್ಯಾಪಕ ನಾಗಭೂಷನ್ ಬಗ್ಗನಡು ಶ್ರೀ ಮಹರ್ಷಿ ವಾಲ್ಮೀಕಿ ಮತ್ತು ಅವರ ಬರೆದ ಮಹಾಕಾವ್ಯ ರಾಮಾಯಣ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆಯಿಂದ ನೀಡುವ ವಿವಿಧ ಸೌಲಭ್ಯಗಳನ್ನು ಫಲಾನುಭವಿಗಳಿಗೆ ಸಾಂಕೇತಿಕವಾಗಿ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಅಪರ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಉದೇಶ್, ತಹಸೀಲ್ದಾರ್ ಮೋಹನ್ ಕುಮಾರ್, ಪರಿಶಿಷ್ಟ ವರ್ಗದ ಕಲ್ಯಾಣ ಅಧಿಕಾರಿ ತ್ಯಾಗರಾಜ್ ಸೇರಿದಂತೆ ವಾಲ್ಮೀಕಿ ಸಮುದಾಯದ ಮುಖಂಡರು, ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

ವಾಲ್ಮೀಕಿ ಜಯಂತಿ ಅಂಗವಾಗಿ ನಗರದ ಟೌನ್ ಹಾಲ್ ವೃತ್ತದಿಂದ ಕಾರ್ಯಕ್ರಮ ನಡೆಯುವ ಸ್ಥಳ ಗುಬ್ಬಿ ವೀರಣ್ಣ ಕಲಾಕ್ಷೇತ್ರದವರೆಗೆ ವಾಲ್ಮೀಕಿ ಅವರ ಭಾವಚಿತ್ರದ ಮೆರವಣಿಗೆ ನಡೆಯಿತು.

Leave a Reply

Your email address will not be published. Required fields are marked *

You cannot copy content of this page

error: Content is protected !!