ದೇವನಹಳ್ಳಿ ಕ್ಷೇತ್ರದ 6 ಕಡೆಗಳಲ್ಲಿ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವ ಅಂಡರ್ ಪಾಸ್ ಖಂಡಿಸಿದ ಶಾಸಕ

ದೇವನಹಳ್ಳಿ ಕ್ಷೇತ್ರದ 6 ಕಡೆಗಳಲ್ಲಿ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವ ಅಂಡರ್ ಪಾಸ್ ಖಂಡಿಸಿದ ಶಾಸಕ

ದೇವನಹಳ್ಳಿ: ರೈಲ್ವೆ ಇಲಾಖೆಯವರು ಗುತ್ತಿಗೆದಾರರಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ವಿಧಾನಸಭಾ ಕ್ಷೇತ್ರದ 6 ಕಡೆಗಳಲ್ಲಿ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವ ಅಂಡರ್ ಪಾಸ್ ಗಳಿಂದಾಗಿ ಕೆಲವು ಹಳ್ಳಿಗಳ ಜನರು ಪಟ್ಟಣಗಳಿಗೆ ಬರಲಿಕ್ಕೆ ಇರುವ ರಸ್ತೆಗಳ ಸಂಪರ್ಕಗಳನ್ನು ಕಳೆದುಕೊಂಡಿದ್ದಾರೆ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಆರೋಪಿಸಿದರು.

ಪಟ್ಟಣದ ಪ್ರವಾಸಿಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರೈಲ್ವೆ ಅಂಡರ್ ಪಾಸ್ ಗಳಿಂದಾಗಿ ಶಾಲಾ ವಿದ್ಯಾರ್ಥಿಗಳು, ಹಾಲು ಉತ್ಪಾದಕರು, ಮಾರುಕಟ್ಟೆಗೆ ತರಕಾರಿಗಳನ್ನು ಕೊಂಡೊಯ್ಯುವ ರೈತರು, ಅಂಗವಿಕಲರು ಸೇರಿದಂತೆ ದಿನನಿತ್ಯ ವ್ಯವಹರಿಸುತ್ತಿರುವ ರೈತರ ಪಾಲಿಗೆ ಮುಳುವಾಗಿವೆ.

ಯರ್ತಿಗಾನಹಳ್ಳಿ ಸಮೀಪದಲ್ಲಿ ಸೇತುವೆ ಬಿದ್ದು ಹೋಗಿ ಪುನರ್ ನಿರ್ಮಾಣ ಮಾಡಬೇಕಾದಂತಹ ಸ್ಥಿತಿ ಬಂದಿದೆ. 50 ಕ್ಕೂ ಹೆಚ್ಚು ಹಳ್ಳಿಗಳ ಜನರು ಐವಿಸಿ ರಸ್ತೆಯಲ್ಲಿ ಸಂಚರಿಸಬೇಕಾಗಿದೆ. ದಿನಬೆಳಗಾದರೆ ಜನರು ಶಾಸಕರ ಮೇಲೆ ಆರೋಪ ಮಾಡುತ್ತಿದ್ದಾರೆ. ಯರ್ತಿಗಾನಹಳ್ಳಿ, ಡಾಬಾ ಗೇಟ್, ಇರಿಗೇಹಳ್ಳಿ, ಬುಳ್ಳಹಳ್ಳಿ, ಅಕ್ಕುಪೇಟೆ, ಸೇರಿದಂತೆ ಎಲ್ಲಾ ಕಡೆಗಳಲ್ಲಿ ಜನರಿಗೆ ಅನುಕೂಲ ಮಾಡಿಕೊಡುವ ಬದಲಿಗೆ ಜನರಿಗೆ ಸಮಸ್ಯೆಗಳನ್ನು ತಂದಿಟ್ಟಿದ್ದಾರೆ. ಇದು ರಾಜ್ಯದಲ್ಲಿನ ಎಲ್ಲಾ ಕಡೆಗಳಲ್ಲೂ ಇದೇ ಪರಿಸ್ಥಿತಿ ನಿರ್ಮಾಣವಾಗಿದೆ. ಕಾರುಗಳು, ಲಾರಿಗಳು ಸಿಕ್ಕಿಹಾಕಿಕೊಂಡು ಪರದಾಡುತ್ತಿದ್ದಾರೆ.

ಗ್ರಾಮೀಣ ಭಾಗದಲ್ಲಿ ಒಂದು ಹಳ್ಳಿಗೆ ಒಂದೇ ರಸ್ತೆ ಇರುತ್ತದೆ. ಇಂತಹ ಜನರು ತಮ್ಮ ನೋವನ್ನು ದೆಹಲಿಗೆ ಹೋಗಿ ಹೇಳಲಿಕ್ಕೆ ಸಾಧ್ಯವಾಗುತ್ತಾ? ಎಂದು ಪ್ರಶ್ನಿಸಿದರು. ಯರ್ತಿಗಾನಹಳ್ಳಿಯ ಬಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದಲ್ಲಿ ಕೆರೆಯ ಕೋಡಿಯನ್ನು ಕಾಂಪೌಂಡ್ ಅಳವಡಿಸಿದ್ದಾರೆ. ಅಲ್ಲಿನ ರೈತರು ತಮ್ಮ ಭೂಮಿಯನ್ನು ವಿಮಾನ ನಿಲ್ದಾಣ ವ್ಯಾಪ್ತಿಗೆ ಕೊಡಲಿ ಎನ್ನುವ ಉದ್ದೇಶಿಸಿ ಅಡ್ಡಗಟ್ಟಿದ್ದಾರೆ. ಈಗಾಗಲೇ ಕೆರೆ ತುಂಬಿದೆ. ಈಗ ಕೋಡಿ ಸರಿಪಡಿಸದಿದ್ದರೆ, ಸುತ್ತಮುತ್ತಲಿನ ರೈತರ ಬೆಳೆಗಳು ನಾಶವಾಗಲಿವೆ. ಈ ಬಗ್ಗೆ ಜಿಲ್ಲಾಡಳಿತ ಸೂಕ್ಷ್ಮವಾಗಿ ಗಮನಹರಿಸಬೇಕು ಎಂದು ಒತ್ತಾಯಿಸಿದರು.

ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ 207 ಕೇವಲ ಪಟ್ಟಣದಿಂದ ಹೊರಗಿನ ಭಾಗಕ್ಕೆ ಮಾತ್ರ ಸೀಮಿತವಾಗಿವೆ ಎಂದು ಯೋಜನೆ ಮಾಡಿದ್ದಾರೆ. ರಸ್ತೆಗಳು ಹಾಳಾಗಿವೆ. 20 ಕ್ಕೂ ಹೆಚ್ಚು ಮಂದಿ ಕೈ ಕಾಲುಗಳು ಮುರಿದುಕೊಂಡು ಆಸ್ಪತ್ರೆ ಸೇರಿದ್ದಾರೆ. ಗಿರಿಯಮ್ಮ ಸರ್ಕಲ್ ನಿಂದ ದೊಡ್ಡಬಳ್ಳಾಪುರದ ರಸ್ತೆಗೆ ಸಂಪರ್ಕ ಕಲ್ಪಿಸಬೇಕು ಎಂದು ಸೋಮವಾರದ ವರೆಗೂ ಗಡುವು ನೀಡಲಾಗಿದೆ. ಒಂದು ವೇಳೆ ಅಗತ್ಯ ಕ್ರಮ ಕೈಗೊಳ್ಳದಿದ್ದರೆ, ನಾವು ಹೋರಾಟ ಮಾಡ್ತೇವೆ ಎಂದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಪಾಳ್ಯದ ಮುನೇಗೌಡ ಮಾತನಾಡಿ, ಜಿಲ್ಲೆಯಲ್ಲಿ ಎಲ್ಲೆಡೆ ಮಳೆಯಾಗಿರುವುದು ಸಂತಸ ತಂದಿದ್ದರೂ ರೈಲ್ವೆ ಮಾರ್ಗಗಳಲ್ಲಿ ಹಿಂದಿನ ಪದ್ಧತಿಯಲ್ಲಿ ಗೇಟ್ ಗಳನ್ನು ಅಳವಡಿಸಿ, ಅಲ್ಲೊಬ್ಬ ಸಿಬ್ಬಂದಿಯನ್ನು ಇಟ್ಟು ನಿರ್ವಹಣೆ ಮಾಡುತ್ತಿದ್ದದ್ದು, ಉತ್ತಮವಾಗಿತ್ತು. ಆದರೆ, ಕೇಂದ್ರ ಸರ್ಕಾರದ ಅವೈಜ್ಞಾನಿಕ ಅಂಡರ್ ಪಾಸ್ ಕಾಮಗಾರಿಗಳಿಂದಾಗಿ ಸಾಕಷ್ಟು ತೊಂದರೆಯಾಗುತ್ತಿದ್ದು, ಇದಕ್ಕೆ ಸೂಕ್ತ ಪರಿಹಾರವನ್ನು ಸರ್ಕಾರ ಕಂಡುಕೊಳ್ಳಬೇಕು, ಅಂಡರ್ ಪಾಸ್ ಬದಲಾಗಿ ಮೇಲ್ಸೆತುವೆ ನಿರ್ಮಾಣ ಮಾಡಬೇಕು. ಲೋಕಸಭಾ ಸದಸ್ಯರೂ ಕೂಡಾ ಈ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು ಎಂದರು.

ಜೆಡಿಎಸ್ ತಾಲ್ಲೂಕು ಘಟಕದ ಅದ್ಯಕ್ಷ ಆರ್.ಮುನೇಗೌಡ ಮಾತನಾಡಿ, ರೈಲ್ವೆ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಜನರಿಗೆ ಆಗುತ್ತಿರುವ ತೊಂದರೆಯನ್ನು ಬಗೆಹರಿಸದಿದ್ದರೆ ನಾವು ಹೋರಾಟ ಮಾಡುವ ಮೂಲಕವಾದರೂ ಜನರಿಗೆ ನ್ಯಾಯ ಒದಗಿಸಿಕೊಡುವಂತಹ ಕೆಲಸ ಮಾಡಲಿದ್ದೇವೆ ಎಂದರು.

ಮುಖಂಡ ಯರ್ತಿಗಾನಹಳ್ಳಿ ಶಿವಣ್ಣ ಮಾತನಾಡಿ, ನಮ್ಮೂರಿನ ಸಮೀಪದಲ್ಲಿ ನಿರ್ಮಾಣ ಮಾಡಿರುವ ರೈಲ್ವೆ ಅಂಡರ್ ಪಾಸ್ ನ ಗೋಡೆ ಒಂದು ಕಡೆ ಕುಸಿದು ಬಿದ್ದಿದೆ. ಕೆರೆ ತುಂಬಿದ್ದು ಶೀಘ್ರವಾಗಿ ಕೋಡಿ ಹರಿಯಲಿದೆ. ಆದರೆ, ಕೋಡಿ ಹರಿಯುವಂತಹ ಜಾಗದಲ್ಲಿ ವಿಮಾನ ನಿಲ್ದಾಣದ ಪ್ರಾಧಿಕಾರದವರು ಕಾಂಪೌಂಡ್ ನಿರ್ಮಾಣ ಮಾಡಿರುವುದರಿಂದ ಮುಂದಿನ ದಿನಗಳಲ್ಲಿ ಈ ಭಾಗದ ಜನರು ಸಾಕಷ್ಟು ತೊಂದರೆ ಅನುಭವಿಸಲಿದ್ದಾರೆ ಎಂದರು. ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ನಾಗೇಶ್, ಸದಸ್ಯ ಜಿ.ಎ.ರವೀಂದ್ರ, ಹಾಜರಿದ್ದರು.

ದೇವನಹಳ್ಳಿ ಪ್ರವಾಸಿಮಂದಿರದಲ್ಲಿ ಸುದ್ದಿಗೋಷ್ಟಿಯಲ್ಲಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿದರು. ಯರ್ತಿಗಾನಹಳ್ಳಿ ಶಿವಣ್ಣ, ಆರ್.ಮುನೇಗೌಡ, ಶಾಸಕ ನಿಸರ್ಗ ನಾರಾಯಣಸ್ವಾಮಿ, ಪಾಳ್ಯದ ಮುನೇಗೌಡ ಇದ್ದರು

 

ಮಂಜು ಬೂದಿಗೆರೆ

9113813926

Leave a Reply

Your email address will not be published. Required fields are marked *

You cannot copy content of this page

error: Content is protected !!