ಉತ್ತರ ಪ್ರದೇಶದ ಹಿಂಸಾಪೀಡಿತ ಜಿಲ್ಲೆ ತಲುಪಿದ ಟೀಕಾಯತ್
ಗಾಝಿಯಾಬಾದ್: ರೈತ ಪ್ರತಿಭಟನೆ ವೇಳೆ ನಡೆದ ಹಿಂಸಾಚಾರದಲ್ಲಿ ಎಂಟು ಮಂದಿ ಬಲಿಯಾದ ಉತ್ತರ ಪ್ರದೇಶದ ಲಖೀಂಪುರ ಖೇರಿ ಪ್ರದೇಶಕ್ಕೆ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಮುಖಂಡ ರಾಕೇಶ್ ಟೀಕಾಯತ್ ಸೋಮವಾರ ಮುಂಜಾನೆ ಅಪಾರ ಬೆಂಬಲಿಗರೊಂದಿಗೆ ತಲುಪಿದ್ದಾರೆ.
“ಮೊದಲು ನಾವು ರೈತರು ಮತ್ತು ಗ್ರಾಮಸ್ಥರನ್ನು ಭೇಟಿ ಮಾಡಿ, ಪರಿಸ್ಥಿತಿ ಬಗ್ಗೆ ಅವರ ಜತೆ ಚರ್ಚಿಸುತ್ತೇವೆ. ಗ್ರಾಮಸ್ಥರು ಹಾಗೂ ರೈತರ ಜತೆ ಚರ್ಚಿಸಿದ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ಅವರ ನಿರ್ಧಾರವೇ ಅಂತಿಮವಾಗುತ್ತದೆ” ಎಂದು ಬನಬೀರ್‌ಪುರ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟೀಕಾಯತ್ ಹೇಳಿದ್ದಾರೆ.
ಕೇಂದ್ರದ ಗೃಹಖಾತೆಯ ರಾಜ್ಯ ಸಚಿವ ಅಜಯ್ ಮಿಶ್ರಾ ನೀಡಿದ್ದಾರೆ ಎನ್ನಲಾದ ಹೇಳಿಕೆಗಳ ಕುರಿತ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ಟೀಕಾಯತ್, “ಸಚಿವರನ್ನು ತಕ್ಷಣವೇ ಬಂಧಿಸಬೇಕು. ಕಳದೆ 10 ದಿನಗಳಿಂದ ಈ ಪ್ರದೇಶದಲ್ಲಿ ವಾತಾವರಣ ಪ್ರಕ್ಷುಬ್ಧವಾಗಿದೆ” ಎಂದರು. ಗ್ರಾಮಸ್ಥರನ್ನು ಭೇಟಿ ಮಾಡಿದ ಬಳಿಕ ವಿವರಗಳನ್ನು ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಪಶ್ಚಿಮ ಉತ್ತರ ಪ್ರದೇಶದಿಂದ ರವಿವಾರ ಸಂಜೆ ಹೊರಟಿರುವ ಬಿಕೆಯು ರಾಷ್ಟ್ರೀಯ ವಕ್ತಾರ ಮಧ್ಯರಾತ್ರಿ ವೇಳೆಗೆ ಗಲಭೆಪೀಡಿತ ಪ್ರದೇಶ ತಲುಪಿದರು. ಲಖೀಂಪುರಗೆ ಆಗಮಿಸುವ ಮಾರ್ಗಮಧ್ಯದಲ್ಲಿ ಹಲವು ಕಡೆ ಪೊಲೀಸರು ತಡೆದಿದ್ದಾರೆ ಎಂದು ಬಿಕೆಯು ಮಾಧ್ಯಮ ಉಸ್ತುವಾರಿ ಧಮೇಂದ್ರ ಮಲಿಕ್ ಆಪಾದಿಸಿದರು. ಹಿಂಸಾಪೀಡಿತ ಪ್ರದೇಶಗಳಲ್ಲಿ ಮೊಬೈಲ್ ಇಂಟರ್‌ನೆಟ್ ಸೇವೆಗಳನ್ನು ತಡೆಹಿಡಿಯಲಾಗಿದ್ದು, ಸಿಆರ್‌ಪಿಸಿ ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಘಟನೆ ದುರದೃಷ್ಟಕರ ಎಂದು ಉತ್ತರ ಪ್ರದೇಶ ಪೊಲೀಸ್ ಇಲಾಖೆ ಟ್ವೀಟ್ ಮಾಡಿದೆ. ಇದುವರೆಗೆ ಎಂಟು ಮಂದಿ ಮೃತಪಟ್ಟಿರುವುದನ್ನು ದೃಢಪಡಿಸಲಾಗಿದೆ. ಬಿಕೆಯು ಮುಖಂಡರು ಜಿಲ್ಲೆಗೆ ಭೇಟಿ ನೀಡಲು ಅವಕಾಶ ನೀಡಲಾಗಿದ್ದು, ಪ್ರಿಯಾಂಕಾ ಗಾಂಧಿ ಸೇರಿದಂತೆ ಕಾಂಗ್ರೆಸ್ ಮುಖಂಡರ ಗುಂಪು ಹಿಂಸಾಪೀಡಿತ ಗ್ರಾಮದ ಪ್ರವೇಶಕ್ಕೆ ಅನುಮತಿಗಾಗಿ ಗ್ರಾಮದ ಹೊರಗೆ ಕಾಯುತ್ತಿವೆ.