ಹಾನಗಲ್ ಕ್ಷೇತ್ರದಿಂದ ಶಿವಕುಮಾರ್ ಉದಾಸಿ ಪತ್ನಿ ಕಣಕ್ಕೆ? ಉಪ ಚುನಾವಣೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಇಂದು ಫೈನಲ್!

ಹಾನಗಲ್ ಕ್ಷೇತ್ರದಿಂದ ಶಿವಕುಮಾರ್ ಉದಾಸಿ ಪತ್ನಿ ಕಣಕ್ಕೆ? ಉಪ ಚುನಾವಣೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಇಂದು ಫೈನಲ್!

ಬೆಂಗಳೂರು: ಸಿಂದಗಿ ಮತ್ತು ಹಾನಗಲ್‌ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಯ ಸಂಭವನೀಯ ಅಭ್ಯರ್ಥಿಗಳ ಕುರಿತು ಭಾನುವಾರ ನಡೆಯುವ ಪಕ್ಷದ ರಾಜ್ಯ ಪ್ರಮುಖರ ಸಮಿತಿ (ಕೋರ್‌ ಕಮಿಟಿ) ಸಭೆಯಲ್ಲಿ ಚರ್ಚಿಸಿ, ವರಿಷ್ಠರಿಗೆ ಶಿಫಾರಸು ಕಳುಹಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

 

ಸಿಂದಗಿ ಮತ್ತು ಹಾನಗಲ್‌ ಕ್ಷೇತ್ರಗಳಲ್ಲಿ ಈಗಾಗಲೇ ಪಕ್ಷದ ಸ್ಥಳೀಯ ಕಾರ್ಯಕರ್ತರ ಸಭೆ ನಡೆಸಿ, ಅಭಿಪ್ರಾಯ ಸಂಗ್ರಹಿಸಲಾಗಿದೆ. ಅಲ್ಲಿಂದ ಬಂದಿರುವ ವರದಿಗಳ ಕುರಿತು ಪ್ರಮುಖರ ಸಮಿತಿ ಚರ್ಚಿಸಲಿದೆ. ಸಭೆಯ ಬಳಿಕ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ರಾಷ್ಟ್ರೀಯ ಘಟಕಕ್ಕೆ ರವಾನಿಸಲಾಗುವುದುʼ ಎಂದರು. ಕೆಲವು ಸಚಿವರು ಮತ್ತು ಪಕ್ಷದ ಪದಾಧಿಕಾರಿಗಳಲ್ಲಿ ಕೆಲವರನ್ನು ಚುನಾವಣಾ ಉಸ್ತುವಾರಿಗಳನ್ನಾಗಿ ನೇಮಿಸಲಾಗುವುದು. ಈ ಬಗ್ಗೆಯೂ ಪ್ರಮುಖರ ಸಮಿತಿಯ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.

 

ನಾಮಪತ್ರ ಸಲ್ಲಿಸಲು ಅಕ್ಟೋಬರ್ 8 ಕೊನೆಯ ದಿನವಾಗಿದ್ದು, ಹಾವೇರಿ ಲೋಕಸಭಾ ಸದಸ್ಯ ಶಿವಕುಮಾರ್ ಉದಾಸಿ ಅವರ ಪತ್ನಿ ರೇವತಿ ಹಾನಗಲ್ ನಿಂದ ಸ್ಪರ್ಧಿಸಲು ಉತ್ಸುಕರಾಗಿದ್ದಾರೆ. ಈ ವಿಷಯವನ್ನು ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಬೊಮ್ಮಾಯಿ ಹೇಳಿದರು.

 

ಸಂವಿಧಾನ ಕ್ಲಬ್‌ (ಕಾನ್‌ಸ್ಟಿಟ್ಯೂಷನ್‌ ಕ್ಲಬ್‌) ಸ್ಥಾಪಿಸುವ ಪ್ರಸ್ತಾವ ಹತ್ತು ವರ್ಷಗಳಿಂದಲೂ ಬಾಕಿ ಇತ್ತು. ಎಲ್ಲ ಪಕ್ಷಗಳ ನಾಯಕರ ಜತೆಗೂ ಈ ಕುರಿತು ಚರ್ಚಿಸಲಾಗಿತ್ತು. ಈಗ ಕ್ಲಬ್‌ ಸ್ಥಾಪನೆಗೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ತಕ್ಷಣದಲ್ಲೇ ಕ್ಲಬ್‌ ಆರಂಭವಾಗುವುದಿಲ್ಲ. ಹತ್ತು ವರ್ಷಗಳಿಂದಲೂ ಬಾಕಿ ಇರುವ ಪ್ರಸ್ತಾವದ ಕುರಿತು ಚರ್ಚಿಸಿ, ತೀರ್ಮಾನಕ್ಕೆ ಬರಲಾಗಿದೆ. ವಿರೋಧ ಪಕ್ಷದ ನಾಯಕರು ಸೇರಿದಂತೆ ಎಲ್ಲ ಪಕ್ಷಗಳ ನಾಯಕರ ಜತೆಗೂ ಈ ಕುರಿತು ಚರ್ಚಿಸಲಾಗಿದೆ ಎಂದರು.

 

ಕೋವಿಡ್ ನಂತರ ಹೆಚ್ಚುತ್ತಿರುವ ಆತ್ಮಹತ್ಯೆ ತಡೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ‘ತಾತ್ಕಾಲಿಕವಾಗಿ ನಮ್ಮನ್ನು ಕಾಡುವ ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ. ಕುಟುಂಬದ ಜತೆ ಒಟ್ಟಾಗಿ ನಿಂತು ಸಮಸ್ಯೆಗಳನ್ನು ಎದುರಿಸಬೇಕು. ಆತ್ಮಹತ್ಯೆಗಳನ್ನು ತಡೆಯಲು ಸರ್ಕಾರ, ಸಮಾಜ, ಶಿಕ್ಷಣ ಸಂಸ್ಥೆಗಳು ಎಲ್ಲರೂ ಒಗ್ಗೂಡಿ ಪ್ರಯತ್ನಿಸಬೇಕಿದೆʼ ಎಂದು ಹೇಳಿದರು.

Leave a Reply

Your email address will not be published. Required fields are marked *

You cannot copy content of this page

error: Content is protected !!