ಗುಲಾಬ್ ಅಬ್ಬರಕ್ಕೆ ಆಂಧ್ರದಲ್ಲಿ 3 ಸಾವು, ಒಡಿಶಾ ಪಾರು
ವಿಶಾಖಪಟ್ಟಣಂ/ಭುವನೇಶ್ವರ, ಸೆ.28: ಆಂಧ್ರ ಪ್ರದೇಶದಲ್ಲಿ ಗುಲಾಬ್ ಚಂಡಮಾರುತದ ಅಬ್ಬರಕ್ಕೆ ಮೂವರು ಬಲಿಯಾಗಿದ್ದಾರೆ. ರವಿವಾರ ರಾತ್ರಿ ಆಂಧ್ರದ ಕಾಳಿಂಗಪಟ್ಟಣಂ ಬಳಿ ಅಪ್ಪಳಿಸಿದ ಚಂಡಮಾರುತ ಶ್ರೀಕಾಕುಲಂ ಮತ್ತು ವೈಝಾನಗರಂ ಜಿಲ್ಲೆಗಳಲ್ಲಿ ವ್ಯಾಪಕ ಹಾನಿ ಮಾಡಿದೆ. ಆದರೆ ಚಂಡಮಾರುತದ ಅಬ್ಬರದಿಂದ ಒಡಿಶಾ ಪಾರಾಗಿದೆ. ವ್ಯಾಪಕ ಗಾಳಿಯಿಂದಾಗಿ ರಾಜ್ಯದ ಕೆಲವೆಡೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತ ಮತ್ತು ದೂರವಾಣಿ ವ್ಯವಸ್ಥೆ ಅಸ್ತವ್ಯಸ್ತಗೊಂಡದ್ದು ಹೊರತುಪಡಿಸಿದರೆ ರಾಜ್ಯದಲ್ಲಿ ವ್ಯಾಪಕ ಹಾನಿಯಾಗಿಲ್ಲ.
ಆಂಧ್ರ ಪ್ರದೇಶದಲ್ಲಿ ಚಂಡಮಾರುತ ವ್ಯಾಪಕ ಹಾನಿ ಮಾಡಿದೆ. ವಿದ್ಯುತ್ ಸಂಪರ್ಕ ಮತ್ತು ಸಂಪರ್ಕ ಸಾಧನಗಳು ಅಸ್ತವ್ಯಸ್ತಗೊಂಡಿವೆ. ಸಾವಿರಾರು ಎಕರೆಯಲ್ಲಿ ಬೆಳೆದಿದ್ದ ಬೆಳೆಗೆ ಹಾನಿಯಾಗಿದೆ. ವಿಶಾಖಪಟ್ಟಣಂನಲ್ಲಿ ಡಿ.ಭವಾನಿ (37) ಎಂಬ ಮಹಿಳೆ ಚಂಡಮಾರುತದಿಂದ ಸಂಭವಿಸಿದ ಮನೆಕುಸಿತದಲ್ಲಿ ಮೃತಪಟ್ಟಿದ್ದಾರೆ. ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ರಸ್ತೆ ಸಾರಿಗೆ ಸಂಸ್ಥೆಯ ಉದ್ಯೋಗಿ ಪಿ.ನಾಗೇಶ್ವರ ರಾವ್ ಎಂಬವವರು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಶ್ರೀಕಾಕುಲಂ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
ಆಂಧ್ರ ಮುಖ್ಯಮಂತ್ರಿ ಜಗನ್ಮೋಹನ ರೆಡ್ಡಿ, ಚಂಡಮಾರುತ ಸಂಬಂಧಿ ಅನಾಹುತಗಳಲ್ಲಿ ಮೃತಪಟ್ಟವರ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾದ ಎಲ್ಲರಿಗೆ ತಲಾ ಒಂದು ಸಾವಿರ ರೂಪಾಯಿ ನೆರವು ಪ್ರಕಟಿಸಿದ್ದಾರೆ. ಹಲವು ಗ್ರಾಮಗಳಲ್ಲಿ ರಸ್ತೆಗಳು ಪ್ರವಾಹದ ನೀರಿನಲ್ಲಿ ಕೊಚ್ಚಿಹೋಗಿದ್ದು, ನೂರಾರು ವಿದ್ಯುತ್ ಕಂಬಗಳು ಬಿದ್ದಿರುವ ಹಿನ್ನೆಲೆಯಲ್ಲಿ ಇಡೀ ನಗರದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ದೂರವಾಣಿ ವ್ಯವಸ್ಥೆ ಕೂಡಾ ಅಸ್ತವ್ಯಸ್ತಗೊಂಡಿದೆ. ಬೆಳೆಹಾನಿ ಬಗ್ಗೆ ವರದಿ ಸಿದ್ಧಪಡಿಸಿ ತಕ್ಷಣ ಪರಿಹಾರ ಒದಗಿಸುವಂತೆ ಮುಖ್ಯಮಂತ್ರಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಒಡಿಶಾದಲ್ಲಿ ಮುಂಜಾಗ್ರತಾ ಕ್ರಮವಾಗಿ 1,533 ಗರ್ಭಿಣಿ ಮಹಿಳೆಯರು ಸೇರಿದಂತೆ 46,075 ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.