ಪತ್ನಿ ಶೀಲ ಶಂಕಿಸಿ ಹತ್ಯೆಗೈದ ಟೆಕ್ಕಿ, ವಿವಾಹವಾದ ತಿಂಗಳಲ್ಲೇ ಘೋರ ಕೃತ್ಯ
ಪತ್ನಿಯ ಮೇಲೆ ಸಂಶಯಪಟ್ಟ ಪತಿಯೊಬ್ಬ ಆಕೆಯ ಕುತ್ತಿಗೆ ಸೀಳಿ ಕೊಲೆ ಮಾಡಿ ತನ್ನನ್ನೂ ಕೊಂದುಕೊಳ್ಳಲು ಮುಂದಾದ ಘಟನೆ ಹೈದರಾಬಾದ್‌ನ ಬಾಚುಪಲ್ಲಿಯಲ್ಲಿ ಜರುಗಿದೆ.
ಪದೇ ಪದೇ ಜಗಳವಾಡುತ್ತಿದ್ದ ದಂಪತಿಯ ನಡುವೆ ಶನಿವಾರ ಸಹ ಮಾತಿಗೆ ಮಾತು ಬೆಳೆದಿದೆ. ಸುಧಾಳ ಶೀಲದ ಬಗ್ಗೆ ಶಂಕೆ ಇದ್ದ ಕಿರಣ್ ಈ ವೇಳೆ ಆಕೆಯ ಕುತ್ತಿಗೆಯನ್ನು ಚಾಕುವಿನಿಂದ ಸೀಳಿದ್ದಾನೆ.
ಇದಾದ ಬಳಿಕ ಬಚ್ಚಲು ಮನೆಗೆ ತೆರಳಿದ ಕಿರಣ್ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ತನ್ನನ್ನೂ ಚಾಕುವಿನಿಂದ ಇರಿದುಕೊಂಡಿದ್ದಾನೆ.
ಕಾಮಾರೆಡ್ಡಿಯಲ್ಲಿ ವಾಸಿಸುವ ಸುಧಾರ ಹೆತ್ತವರು ಮಧ್ಯಾಹ್ನ 3:30ರ ವೇಳೆಗೆ ಅವರ ಮನೆಗೆ ಬಂದಿದ್ದಾರೆ. ಪದೇ ಪದೇ ಬಾಗಿಲು ತಟ್ಟಿದರೂ ಸಹ ಯಾರೂ ಬಾಗಿಲು ತೆರೆಯಲಿಲ್ಲ. ಸಂಜೆ 6 ಗಂಟೆಯ ವೇಳೆಗೆ ಪೊಲೀಸರಿಗೆ ವಿಷಯ ಮುಟ್ಟಿಸಿದ ಸುಧಾ ಹೆತ್ತವರು, ಬಾಗಿಲನ್ನು ಮುರಿದು ಮನೆಯೊಳಗೆ ಪ್ರವೇಶಿಸಿದ್ದಾರೆ.
ಈ ವೇಳೆ ರಕ್ತಮಯವಾದ ಸುಧಾಳ ದೇಹ ಪತ್ತೆಯಾಗಿದ್ದು, ಕುಮಾರ್ ಬಚ್ಚಲುಮನೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ. ಕೂಡಲೇ ಕುಮಾರ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ಪರಿಸ್ಥಿತಿ ಕ್ರಿಟಿಕಲ್ ಆಗಿದೆ ಎನ್ನಲಾಗಿದೆ.
ಐಪಿಸಿಯ 302 ಹಾಗೂ 309ರ ಸೆಕ್ಷನ್‌ಗಳ ಅಡಿಯಲ್ಲಿ ಕಿರಣ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಇಂಥದ್ದೇ ಪ್ರಕರಣವೊಂದು ಬೆಂಗಳೂರಿನಲ್ಲೂ ಜರುಗಿದೆ. 40 ವರ್ಷದ ಕಾಂತರಾಜು ಹೆಸರಿನ ವ್ಯಕ್ತಿಯೊಬ್ಬ 32 ವರ್ಷ ವಯಸ್ಸಿನ ರೂಪಾ ಎಂಬ ತನ್ನ ಮಡದಿಯನ್ನು ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿ ಚೂರಿಯಿಂದ ಇರಿದು ಸಾಯಿಸಿದ್ದಾನೆ.
ರೂಪಾ ತನ್ನ ಸಂಬಂಧಿಗಳಿಬ್ಬರೊಂದಿಗೆ ಸಲುಗೆಯಿಂದ ಇದ್ದಿದ್ದಲ್ಲದೇ ಇತ್ತೀಚೆಗೆ ಹಮ್ಮಿಕೊಂಡಿದ್ದ ಫ್ಯಾಮಿಲಿ ಪಾರ್ಟಿಯೊಂದರಲ್ಲಿ ಅವರೊಂದಿಗೆ ನೃತ್ಯ ಮಾಡಿದ್ದರ ವಿಚಾರವಾಗಿ ಸಿಟ್ಟುಗೊಂಡಿದ್ದ ಕಾಂತರಾಜು ಆಕೆಯೊಂದಿಗೆ ಜಗಳವಾಡಿದ್ದಾನೆ. ಮಾತಿಗೆ ಮಾತು ಬೆಳೆದು ಪರಿಸ್ಥಿತಿ ಕೈಮೀರಿದ ವೇಳೆ ಚೂರಿಯಿಂದ ಮಡದಿಯನ್ನು ಇರಿದಿದ್ದಾನೆ ಕಾಂತರಾಜು. ಶುಕ್ರವಾರ ರಾತ್ರಿ ಕಾಂತರಾಜುನನ್ನು ಪೊಲೀಸರು ಬಂಧಿಸಿದ್ದಾರೆ.