ಜಾರ್ಖಂಡ್ ಜಿಲ್ಲಾ ನ್ಯಾಯಾಧೀಶರನ್ನು ಉದ್ದೇಶಪೂರ್ವಕವಾಗಿ ಅಪಘಾತಕ್ಕೊಳಪಡಿಸಲಾಗಿತ್ತು: ನ್ಯಾಯಾಲಯಕ್ಕೆ ಸಿಬಿಐ ಹೇಳಿಕೆ
ರಾಂಚಿ: ಜಾರ್ಖಂಡ್ ನ ಜಿಲ್ಲಾ ನ್ಯಾಯಾಧೀಶರು ಬೆಳಗ್ಗಿನ ವಾಕಿಂಗ್ ಗೆಂದು ತೆರಳುತ್ತಿದ್ದ ವೇಳೆ ಆಟೋರಿಕ್ಷಾ ಢಿಕ್ಕಿಯಾಗಿದ್ದ ಕಾರಣ ಮೃತಪಟ್ಟಿದ್ದರು. ಜುಲೈನಲ್ಲಿ ಸಂಭವಿಸಿದ್ದ ಈ ಘಟನೆಯು ಉದ್ದೇಶಪೂರ್ವಕವಾಗಿ ನಡೆದಿತ್ತು ಎಂದು ಸಿಬಿಐ ಗುರುವಾರ ಜಾರ್ಖಂಡ್ ಹೈಕೋರ್ಟ್ ಗೆ ತಿಳಿಸಿದೆ ಎಂದು ವರದಿಯಾಗಿದೆ.
ಅಪರಾಧ ನಡೆದ ಸ್ಥಳದ ವಿಶ್ಲೇಷಣೆ ಮತ್ತು ಮರು ನಿರ್ಮಾಣ, ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಲಭ್ಯವಿರುವ ವಿಧಿವಿಜ್ಞಾನ ಸಾಕ್ಷ್ಯಗಳ ಪ್ರಕಾರ ಆರೋಪಿಯು ಕದ್ದ ಆಟೋರಿಕ್ಷಾವನ್ನು ಉದ್ದೇಶಪೂರ್ವಕವಾಗಿ ನ್ಯಾಯಾಧೀಶರ ಮೇಲೆ ಹಾಯಿಸಿ ಕೊಂದಿದ್ದಾನೆಂದು ಸಾಕ್ಷ್ಯೀಕರಿಸಿದೆ. ಸಿಬಿಐ ಜಾರ್ಖಂಡ್ ಹೈಕೋರ್ಟ್ ಗೆ ಪ್ರಕರಣದ ಕುರಿತ ಮಾಹಿತಿ ನೀಡುತ್ತಿತ್ತು.
ಈ ಕೊಲೆ ಪ್ರಕರಣದ ತನಿಖೆಯು ಅಂತಿಮ ಹಂತದಲ್ಲಿದೆ ಎಂದು ಸಿಬಿಐ ಹೇಳಿದೆ. ಸದ್ಯ ಈ ಪ್ರಕರಣವನ್ನು ಪೂರ್ಣಗೊಳಿಸಲು ಲಭ್ಯವಿರುವ ಭೌತಿಕ ಸಾಕ್ಷ್ಯಗಳೊಂದಿಗೆ ವಿಧಿವಿಜ್ಞಾನ ವರದಿಗಳನ್ನು ದೃಢೀಕರಿಸಲಾಗುತ್ತಿದೆ ಎಂದು ಸಿಬಿಐ ಹೇಳಿದೆ. ಸಾಕ್ಷ್ಯಾಧಾರಗಳನ್ನು ಅಧ್ಯಯನ ಮಾಡಲು ದೇಶದಾದ್ಯಂತ ನಾಲ್ಕು ಪ್ರತ್ಯೇಕ ವಿಧಿವಿಜ್ಞಾನ ತಂಡಗಳನ್ನು ತೊಡಗಿಸಿಕೊಂಡಿದೆ. ಗುಜರಾತ್‌ನಲ್ಲಿ ಇಬ್ಬರು ಆರೋಪಿಗಳ ಮೇಲೆ ನಡೆಸಿದ ಬ್ರೈನ್ ಮ್ಯಾಪಿಂಗ್ ಮತ್ತು ಸುಳ್ಳು ಪತ್ತೆ ಪರೀಕ್ಷೆಗಳ ವರದಿಗಳನ್ನು ಅಧ್ಯಯನ ಮಾಡುತ್ತಿದೆ ಎಂದು ಮೂಲಗಳು ತಿಳಿಸಿದ್ದಾಗಿ ndtv.com ವರದಿ ಮಾಡಿದೆ.
ಪ್ರಕರಣ ನಡೆದ ಒಂದು ದಿನದ ಬಳಿಕ ಚಾಲಕ ಲಖನ್ ವರ್ಮಾ ಮತ್ತು ಆತನ ಸಹಾಯಕ ರಾಹುಲ್ ವರ್ಮಾ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿತ್ತು. ಕೊಲೆಗೆ ಬಳಸಲ್ಪಟ್ಟ ವಾಹನವನ್ನು ಮಹಿಳೆಯೋರ್ವರ ಹೆಸರಿನಲ್ಲಿ ನೋಂದಾಯಿಸಲಾಗಿತ್ತು.