ಸ್ಪೇನ್ ನ ಕ್ಯಾನರಿ ದ್ವೀಪದಲ್ಲಿ ಜ್ವಾಲಾಮುಖಿ ಸ್ಫೋಟ: ಕನಿಷ್ಟ 8 ಮನೆ ನಾಶ; 5 ಸಾವಿರ ಜನರ ಸ್ಥಳಾಂತರ
ಮ್ಯಾಡ್ರಿಡ್, ಸೆ.20: ಸ್ಪೇನ್ ನ ಕ್ಯಾನರಿ ದ್ವೀಪದಲ್ಲಿ ರವಿವಾರ ಜ್ವಾಲಾಮುಖಿ ಸ್ಫೋಟಿಸಿ ಹೊರಚಿಮ್ಮಿದ ಲಾವಾರಸ ಪ್ರವಾಹದಂತೆ ಹರಿದು ಸಮೀಪದ ಕನಿಷ್ಟ 8 ಮನೆಯನ್ನು ನಾಶಗೊಳಿಸಿದ್ದು 5 ಸಾವಿರಕ್ಕೂ ಅಧಿಕ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಟ್ಲಾಂಟಿಕ್ ಮಹಾಸಾಗರದಲ್ಲಿರುವ ಕ್ಯಾನರಿ ದ್ವೀಪಸಮೂಹಕ್ಕೆ ಸೇರಿರುವ ಲಾ ಪ್ಲಾಮಾ ದ್ವೀಪವು ಸುಮಾರು 85 ಸಾವಿರ ಜನಸಂಖ್ಯೆಯನ್ನು ಹೊಂದಿದ್ದು ಜ್ವಾಲಾಮುಖಿ ಸಂಭವಿಸುವ ಸ್ಪೇನ್ನ 8 ದ್ವೀಪಗಳಲ್ಲಿ ಒಂದಾಗಿದೆ. 1971ರ ಬಳಿಕ ಪ್ರಥಮ ಬಾರಿಗೆ ಕ್ಯಾನರಿ ದ್ವೀಪಸಮೂಹದಲ್ಲಿ ಜ್ವಾಲಾಮುಖಿ ಚಿಮ್ಮಿದ್ದು ರವಿವಾರ ಮಧ್ಯಾಹ್ನ 3 ಗಂಟೆಯಿಂದ ಆರಂಭವಾದ ಜ್ವಾಲಾಮುಖಿ ತಡರಾತ್ರಿವರೆಗೂ ಮುಂದುವರಿದಿದೆ ಎಂದು ಕ್ಯಾನರಿ ದ್ವೀಪದ ಜ್ವಾಲಾಮುಖಿ ಶಾಸ್ತ್ರ ಸಂಸ್ಥೆ ವರದಿ ಮಾಡಿದೆ.
ಜ್ವಾಲಾಮುಖಿಗೂ ಮುನ್ನ ದ್ವೀಪದ ಪಶ್ಚಿಮದಲ್ಲಿ 4.2 ಕಂಪನಾಂಕದ ಭೂಕಂಪ ಸಂಭವಿಸಿದೆ. ಭೂಕಂಪದಿಂದ ಬಿರುಕು ಬಿಟ್ಟ ಭೂಮಿಯ ಎಡೆಯಿಂದ ಕಪ್ಪು ಬಣ್ಣದ ಬೆಂಕಿಯುಂಡೆಯಂತಹ ಲಾವಾರಸ ಹೊರಚಿಮ್ಮಿ ಪ್ರವಾಹದ ರೀತಿಯಲ್ಲಿ ಎಲ್ ಪಾಸೊದ ಗ್ರಾಮದತ್ತ ನುಗ್ಗಿದೆ. ತಕ್ಷಣದ ಅಪಾಯ ಎದುರಿಸುತ್ತಿದ್ದ 300 ಜನರನ್ನು ಸ್ಥಳಾಂತರಗೊಳಿಸಿದ್ದು ರಸ್ತೆ ಸಂಚಾರವನ್ನು ಮೊಟಕುಗೊಳಿಸಲಾಗಿದೆ. ಕುತೂಹಲಿಗಳು ಜ್ವಾಲಾಮುಖಿ ವೀಕ್ಷಿಸಲು ತೆರಳಿದರೆ ಪ್ರಾಣಕ್ಕೆ ಅಪಾಯವಿದೆ ಎಂದು ಕ್ಯಾನರಿ ದ್ವೀಪದ ಮೇಯರ್ ಸರ್ಗಿಯೊ ರಾಡ್ರಿಗಸ್ ಹೇಳಿದ್ದಾರೆ.
ಕನಿಷ್‘ 8 ಮನೆಗಳು ನಾಶವಾಗಿದ್ದು ಲಾವಾರಸವು ಸಮೀಪದ ನಗರಪಾಲಿಕೆಗಳಾದ ಎಲ್ ಪರಸಿಯೊ, ಅಲ್ಕಾಲ ಹಾಗೂ ಸುತ್ತಮುತ್ತಲ ಪ್ರದೇಶಗಳತ್ತ ಮುನ್ನುಗ್ಗುವ ಸಾಧ್ಯತೆಯಿದೆ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ. ಈ ಜ್ವಾಲಾಮುಖಿಯಿಂದ ಲಾವಾರಸ ಹೊರಚಿಮ್ಮುವಿಕೆ ವಾರಗಟ್ಟಲೆ ಅಥವಾ ತಿಂಗಳುಗಟ್ಟಲೆ ಮುಂದುವರಿಯಬಹುದು ಎಂದು ಸ್ಪೇನ್ನ ರಾಷ್ಟ್ರೀಯ ಭೂಗರ್ಭವಿಜ್ಞಾನ ಸಂಸ್ಥೆಯ ಮುಖ್ಯಸ್ಥ ಇತಾಹಿಝ ಡೊಮೊನಿಕ್ ಹೇಳಿದ್ದಾರೆ.