ಶಿಕ್ಷಕರ ಹುದ್ದೆಗೆ ಸರಿಸಮಾನ ವೇತನ: ಶಿಕ್ಷಣ ಸಚಿವ ನಾಗೇಶ್
ಬೆಂಗಳೂರು: ಭಡ್ತಿ ಹೊಂದಿದ ಉಪನ್ಯಾಸಕರಿಗೆ ಆರನೇ ವೇತನ ಆಯೋಗದ ಶಿಫಾರಸು ಅನ್ವಯ ಸರಿ ಸಮಾನ ವೇತನಕ್ಕಾಗಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.
ಗುರುವಾರ ವಿಧಾನ ಪರಿಷತ್ತಿನ ಕಲಾಪದಲ್ಲಿ ಶಿಕ್ಷಕರ ವೇತನ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗೆ ಹಾಗೂ ಪ್ರೌಢಶಾಲೆಯಿಂದ ಪದವಿಪೂರ್ವ ಕಾಲೇಜಿಗೆ ಭಡ್ತಿ ಹೊಂದಿದ ಉಪನ್ಯಾಸಕರಿಗೆ ಆರನೇ ವೇತನ ಆಯೋಗದ ಶಿಫಾರಸು ಅನ್ವಯ ಭಡ್ತಿ ಪಡೆಯದೇ ಇರುವ ಉಪನ್ಯಾಸಕರಿಗೆ ಕಾಲಮಿತಿಗೆ ತಕ್ಕಂತೆ ಭಡ್ತಿ ಮಂಜೂರು ಮಾಡುವ ಕುರಿತು ಚರ್ಚಿಸಲಾಗುವುದು ಎಂದರು.
ಇದಕ್ಕೂ ಮೊದಲು ವಿಧಾನ ಪರಿಷತ್ತಿನ ಬಿಜೆಪಿ ಹಿರಿಯ ಸದಸ್ಯ ಆಯನೂರು ಮಂಜುನಾಥ್, ಭಡ್ತಿ ವ್ಯಾಖ್ಯಾನ ಎಂದರೇನು, ಗೌರವ ಸಂಪಾದನೆಗೆ ವೇತನ ಕಡಿಮೆ ಮಾಡಿಕೊಳ್ಳುವುದಾ ಎಂದು ಪ್ರಶ್ನಿಸಿದರು.
ಬಳಿಕ ಉತ್ತರಿಸಿದ ಸಚಿವರು, ಮುಖ್ಯಮಂತ್ರಿ ಹಾಗೂ ಆರ್ಥಿಕ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸುವ ಪ್ರಯತ್ನ ನಡೆಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.