ಯುಎಪಿಎ:ಶೇ.95 ಪ್ರಕರಣಗಳಲ್ಲಿ ವಿಚಾರಣೆ, ಶೇ.85 ಪ್ರಕರಣಗಳಲ್ಲಿ ತನಿಖೆ ಬಾಕಿ: ಎನ್‌ ಸಿಆರ್‌ ಬಿ ವರದಿ

ಯುಎಪಿಎ:ಶೇ.95 ಪ್ರಕರಣಗಳಲ್ಲಿ ವಿಚಾರಣೆ, ಶೇ.85 ಪ್ರಕರಣಗಳಲ್ಲಿ ತನಿಖೆ ಬಾಕಿ: ಎನ್‌ ಸಿಆರ್‌ ಬಿ ವರದಿ

ಹೊಸದಿಲ್ಲಿ: ಅಕ್ರಮ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ)ಯಡಿ ದಾಖಲಾಗಿರುವ ಪ್ರಕರಣಗಳಲ್ಲಿ ದೋಷನಿರ್ಣಯ ದರವು 2019ರಲ್ಲಿ ಶೇ.29.2ರಷ್ಟಿದ್ದುದು 2020ರಲ್ಲಿ ಶೇ.21.1ಕ್ಕೆ ಇಳಿಕೆಯಾಗಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆ ಘಟಕ (ಎನ್‌ ಸಿ ಆರ್‌ ಬಿ)ವು ತನ್ನ ‘ಭಾರತದಲ್ಲಿ ಅಪರಾಧ 2020’ ವರದಿಯಲ್ಲಿ ಹೇಳಿದೆ. 2020ರಲ್ಲಿ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೈಕಿ ಜಮ್ಮು-ಕಾಶ್ಮೀರದಲ್ಲಿ ಅತ್ಯಧಿಕ ಸಂಖ್ಯೆ (287)ಯಲ್ಲಿ ಯುಎಪಿಎ ಪ್ರಕರಣಗಳು ದಾಖಲಾಗಿದ್ದರೆ,ಅಸ್ಸಾಂ(76),ಉತ್ತರ ಪ್ರದೇಶ(72) ಮತ್ತು ಜಾರ್ಖಂಡ್ (69) ನಂತರದ ಸ್ಥಾನಗಳಲ್ಲಿವೆ. ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಮ್ಮು-ಕಾಶ್ಮೀರ ಬಿಟ್ಟರೆ ದಿಲ್ಲಿಯಲ್ಲಿ ಮಾತ್ರ ಯುಎಪಿಎ ಅಡಿ ಪ್ರಕರಣಗಳು (6) ದಾಖಲಾಗಿವೆ.

 

2019ರಲ್ಲಿ ಜಮ್ಮು-ಕಾಶ್ಮೀರವು ಇನ್ನೂ ರಾಜ್ಯವಾಗಿದ್ದಾಗ ಎರಡನೇ ಗರಿಷ್ಠ ಸಂಖ್ಯೆಯಲ್ಲಿ (255) ಪ್ರಕರಣಗಳು ದಾಖಲಾಗಿದ್ದವು ಮತ್ತು ಮಣಿಪುರ 306 ಪ್ರಕರಣಗಳೊಂದಿಗೆ ಮೊದಲ ಸ್ಥಾನದಲ್ಲಿತ್ತು.

 

 2019ರಲ್ಲಿ ಯುಎಪಿಎ ಅಡಿ 1,226 ಪ್ರಕರಣಗಳು ದಾಖಲಾಗಿದ್ದರೆ,2020ರಲ್ಲಿ 796 ಪ್ರಕರಣಗಳು ದಾಖಲಾಗಿವೆ. 2018ರಲ್ಲಿ ತನಿಖೆ ಬಾಕಿಯಿದ್ದ ಪ್ರಕರಣಗಳೂ ಸೇರಿದಂತೆ 2019ರಲ್ಲಿ ಒಟ್ಟು 3,908 ಪ್ರಕರಣಗಳಲ್ಲಿ ತನಿಖೆ ಬಾಕಿಯಿದ್ದರೆ 2020ರಲ್ಲಿ ಇಂತಹ ಪ್ರಕರಣಗಳ ಸಂಖ್ಯೆ 4,021ಕ್ಕೆ ಏರಿಕೆಯಾಗಿದೆ. ತನಿಖೆ ಬಾಕಿಯಿರುವ ಪ್ರಕರಣಗಳ ಸಂಖ್ಯೆ ವರ್ಷಂಪ್ರತಿ ಹೆಚ್ಚುತ್ತಲೇ ಇದ್ದು,ತಮ್ಮ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆಯಾಗದೆ ಹೆಚ್ಚೆಚ್ಚು ಜನರು ಜೈಲುಗಳಲ್ಲಿ ಕೊಳೆಯುತ್ತಿದ್ದಾರೆ ಎನ್ನುವುದನ್ನು ಇದು ಸೂಚಿಸುತ್ತಿದೆ.

 

2019 ರಿಂದ ಬಾಕಿಯಿರುವ ಒಟ್ಟು 4021 ಪ್ರಕರಣಗಳಲ್ಲಿ 272ರಲ್ಲಿ ದೋಷಾರೋಪ ಪಟ್ಟಿಗಳು ಸಲ್ಲಿಕೆಯಾಗಿದ್ದರೆ,2020ರಲ್ಲಿ ಹೊಸದಾಗಿ ದಾಖಲಾಗಿದ್ದ ಪ್ರಕರಣಗಳ ಪೈಕಿ 126ರಲ್ಲಿ ದೋಷಾರೋಪ ಪಟ್ಟಿಗಳು ಸಲ್ಲಿಕೆಯಾಗಿವೆ.

 

2020ರ ಅಂತ್ಯಕ್ಕೆ ಇದ್ದಂತೆ ಒಟ್ಟು 4,827 ಪ್ರಕರಣಗಳಲ್ಲಿ ತನಿಖೆ ಬಾಕಿಯಿದ್ದವು. ಇದರಲ್ಲಿ 2019ರ 4,021 ಮತ್ತು 2020ರಲ್ಲಿ ದಾಖಲಾದ 796 ಮತ್ತು ತನಿಖೆಗಾಗಿ ಪುನಃ ತೆರೆಯಲಾಗಿರುವ 10 ಪ್ರಕರಣಗಳು ಸೇರಿವೆ.

 

297 ಪ್ರಕರಣಗಳಲ್ಲಿ ಅಂತಿಮ ವರದಿಯಲ್ಲಿ ಆರೋಪಿಗಳ ವಿರುದ್ಧ ಸಾಕಷ್ಟು ಸಾಕ್ಷಾಧಾರಗಳು ಇಲ್ಲ ಎಂದು ತಿಳಿಸಲಾಗಿದೆ. ವಿವಿಧ ನ್ಯಾಯಾಲಯಗಳಲ್ಲಿ 2019ರಿಂದ 2,244 ಪ್ರಕರಣಗಳು ವಿಚಾರಣೆಗೆ ಬಾಕಿಯಿದ್ದರೆ,2020ರಲ್ಲಿ 398 ಪ್ರಕರಣಗಳನ್ನು ವಿಚಾರಣೆಗಾಗಿ ಸಲ್ಲಿಸಲಾಗಿದೆ. ಇದರೊಂದಿಗೆ ಇಂತಹ ಪ್ರಕರಣಗಳ ಒಟ್ಟು ಸಂಖ್ಯೆ 2,642ಕ್ಕೆ ತಲುಪಿದೆ. 2019ರ ಅಂತ್ಯದಲ್ಲಿ ಒಟ್ಟು 2,361 ಪ್ರಕರಣಗಳು ವಿಚಾರಣೆಗೆ ಬಾಕಿಯಿದ್ದವು.

 

ಯುಎಪಿಎ ಅಡಿ 2020ರಲ್ಲಿ 1,321 ಜನರನ್ನು ಬಂಧಿಸಲಾಗಿದ್ದರೆ,2019ರಲ್ಲಿ ಈ ಸಂಖ್ಯೆ 1,948 ಆಗಿತ್ತು, ಕೋವಿಡ್-19 ಸಾಂಕ್ರಾಮಿಕವು ಪ್ರಕರಣಗಳು ಮತ್ತು ಬಂಧಿತರ ಸಂಖ್ಯೆಯಲ್ಲಿ ಇಳಿಕೆಗೆ ಕಾರಣವಾಗಿತ್ತು.

 

2019ರಲ್ಲಿ ನಾಲ್ಕು ಯುಎಪಿಎ ಪ್ರಕರಣಗಳನ್ನು ವಿಚಾರಣೆಯಿಲ್ಲದೆ ವಿಲೇವಾರಿ ಮಾಡಲಾಗಿದ್ದರೆ 2020ರಲ್ಲಿ ಇಂತಹ ಪ್ರಕರಣಗಳ ಸಂಖ್ಯೆ 14ಕ್ಕೆ ಏರಿಕೆಯಾಗಿತ್ತು.

 

2020ರಲ್ಲಿ 27 ಪ್ರಕರಣಗಳಲ್ಲಿ ದೋಷನಿರ್ಣಯಗೊಂಡಿದ್ದು,99 ಜನರು ಬಿಡುಗಡೆಗೊಂಡಿದ್ದರು. ಅಂದರೆ ವಿಚಾರಣೆ ಪೂರ್ಣಗೊಂಡ ಒಟ್ಟು 128 ಪ್ರಕರಣಗಳಲ್ಲಿ ಶೇ.21.1 ಪ್ರಕರಣಗಳಲ್ಲಿ ದೋಷ ನಿರ್ಣಯವಾಗಿದೆ. 2019ರಲ್ಲಿ ದೋಷನಿರ್ಣಯ ದರ ಶೇ.29.2ರಷ್ಟಿದ್ದು,ಈ ಪ್ರಕರಣಗಳಲ್ಲಿ 80 ಜನರು ಶಿಕ್ಷೆಗೆ ಗುರಿಯಾಗಿದ್ದರು ಮತ್ತು 116 ಜನರು ಬಿಡುಗಡೆಗೊಂಡಿದ್ದರು.

 

  ತನಿಖೆ ಮತ್ತು ವಿಚಾರಣೆ ಬಾಕಿಯಿರುವ ಪ್ರಕರಣಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದ್ದು ಜಾಮೀನು ಪಡೆಯುವುದನ್ನೂ ಕಠಿಣವಾಗಿಸಿರುವ ಯುಎಪಿಎ ಅಡಿಯ ಹೆಚ್ಚಿನ ಪ್ರಕರಣಗಳಲ್ಲಿ ತಮ್ಮ ವಿರುದ್ಧ ಆರೋಪವಿಲ್ಲದೆ ಜನರ ಜೈಲುವಾಸ ಮುಂದುವರಿದಿದೆ ಎನ್ನುವುದನ್ನು ಇದು ಸೂಚಿಸುತ್ತದೆ. ಪ್ರತಿವರ್ಷ ಹೊಸ ಪ್ರಕರಣಗಳು ದಾಖಲಾಗುತ್ತಲೇ ಇದ್ದು,ದಿಲ್ಲಿ ಉಚ್ಚ ನ್ಯಾಯಾಲಯವು ಬೆಟ್ಟು ಮಾಡಿರುವಂತೆ ತನಿಖಾ ಸಂಸ್ಥೆಗಳು ಒಂದರ ನಂತರ ಇನ್ನೊಂದರಂತೆ ಪೂರಕ ದೋಷಾರೋಪ ಪಟ್ಟಿಗಳನ್ನು ನ್ಯಾಯಾಲಯಗಳಲ್ಲಿ ಸಲ್ಲಿಸುತ್ತಲೇ ಇವೆ ಮತು ತನಿಖೆಯು ಗಣನೀಯವಾಗಿ ವಿಳಂಬಗೊಳ್ಳುತಿದೆ. ಈ ಪ್ರಕರಣಗಳಲ್ಲಿ ಕೈಬೆರಳೆಣಿಕೆಯ ಕೆಲವೇ ಅದೃಷ್ಟಶಾಲಿಗಳು ಹಲವಾರು ವರ್ಷಗಳ ಜೈಲುವಾಸ ಮತ್ತು ಕಷ್ಟಗಳ ಬಳಿಕ ಜಾಮೀನು ಪಡೆಯುತ್ತಾರೆ.

ಯುಎಪಿಎ ಹೇರಿಕೆಯನ್ನು ವಕೀಲ ಸಮುದಾಯ ಮತ್ತು ನಾಗರಿಕ ಸಮಾಜ ವ್ಯಾಪಕವಾಗಿ ಟೀಕಿಸಿವೆ ಮತ್ತು ಅದು ಈಗ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯುಕ್ತರ ಗಮನವನ್ನೂ ಸೆಳೆದಿದೆ.

Leave a Reply

Your email address will not be published. Required fields are marked *

You cannot copy content of this page

error: Content is protected !!