46 ವರ್ಷದಲ್ಲಿ ದಾಖಲೆಯ ಮಳೆಗೆ ಸಾಕ್ಷಿಯಾದ ದೆಹಲಿ: ವಿಮಾನ ನಿಲ್ದಾಣಕ್ಕೂ ನುಗ್ಗಿದ ನೀರು, ಹಳ್ಳದಂತಾದ ರಸ್ತೆಗಳು..
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶನಿವಾರ ದಾಖಲೆ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಬಹುತೇಕ ರಸ್ತೆಗಳಲ್ಲಿ ನೀರು ತುಂಬಿಕೊಂಡು ಸಂಚಾರಕ್ಕೆ ಅಡ್ಡಿ ಉಂಟಾಯಿತು. ವಿಮಾನ ನಿಲ್ದಾಣದ ಕೆಲ ಭಾಗಗಳಿಗೆ ನೀರು ನುಗ್ಗಿ, ಹಲವು ವಿಮಾನಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು.
ತಮಿಳುನಾಡು, ಕರ್ನಾಟಕ, ತೆಲಂಗಾಣ ಸಹಿತ ದೇಶದ ವಿವಿಧ ಭಾಗಗಳಲ್ಲಿ ಕೆಲ ದಿನಗಳಿಂದ ಮಳೆಯಾಗುತ್ತಿದ್ದು, ಇನ್ನೂ ಕೆಲವು ದಿನ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
ದೆಹಲಿಯಲ್ಲಿ ಪ್ರಸಕ್ತ ಮುಂಗಾರುನಲ್ಲಿ ಭಾರಿ ಪ್ರಮಾಣದಲ್ಲಿ ಅಸಹಜ ಮಳೆಯಾಗಿದೆ. 46 ವರ್ಷಗಳಲ್ಲೇ ಅತಿ ಹೆಚ್ಚಿನ ಮಳೆ 1,100 ಮಿಲಿಮೀಟರ್ ದಾಖಲಾಗಿದೆ. 1975ರ ನಂತರ ಇದೇ ಮೊದಲ ಬಾರಿಗೆ ದೆಹಲಿಯಲ್ಲಿ ಮಳೆ 1,000 ಎಂಎಂ ಗಡಿ ದಾಟಿದೆ. ವರ್ಷಧಾರೆಯಿಂದಾಗಿ ದೆಹಲಿಯ ಅನೇಕ ರಸ್ತೆಗಳು ಜಲಾವೃತವಾಗಿದ್ದು ಸಂಚಾರ ವ್ಯತ್ಯಯಗೊಂಡಿತು. ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (ಐಜಿಐ) ಮುಂದಿನ ಪ್ರಾಂಗಣ ಕೂಡ ಕೆಲಕಾಲ ನೀರಿನಲ್ಲಿ ಮುಳುಗಿತ್ತು. ನಿಲ್ದಾಣದ ಮುಂಭಾಗದಲ್ಲಿ ಸ್ವಲ ಸಮಯ ನೀರು ನಿಂತಿತ್ತು. ಅದನ್ನು ತೆರವು ಮಾಡಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಟ್ವೀಟ್ ಮಾಡಿದ್ದಾರೆ. ಕೆಲವು ವಿಮಾನಗಳು ಭಾಗಶಃ ನೀರಿನಲ್ಲಿ ನಿಂತಿದ್ದ ದೃಶ್ಯಗಳು ವೈರಲ್ ಆಗಿವೆ.
ಹವಾಮಾನ ವೈಪರೀತ್ಯದಿಂದಾಗಿ ವಿಮಾನಗಳ ಸಂಚಾರ ಅಸ್ತವ್ಯಸ್ತಗೊಂಡಿತು. ಶನಿವಾರ ದೆಹಲಿಯತ್ತ ಪಯಣಿಸಿದ್ದ ಐದು ದೇಶೀಯ ವಿಮಾನಗಳು ಹಾಗೂ ಒಂದು ಅಂತಾರಾಷ್ಟ್ರೀಯ ವಿಮಾನವನ್ನು ಪಕ್ಕದ ನಗರಗಳಲ್ಲಿ ಇಳಿಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ. ದೆಹಲಿಯಿಂದ ಹೊರಡಬೇಕಿದ್ದ ಮೂರು ಇಂಡಿಗೊ ವಿಮಾನಗಳನ್ನು ರದ್ದು ಪಡಿಸಲಾಯಿತು. ದೆಹಲಿಯಲ್ಲಿ ಮುಂದಿನ ಎರಡು ದಿನ ಸಾಧಾರಣ ಮಳೆಯಾಗಲಿದೆ. ಸೆಪ್ಟೆಂಬರ್ 17, 18ರ ವೇಳೆಗೆ ಮತ್ತೊಮ್ಮೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
7 ಬಾರಿ ಭರ್ಜರಿ ಮಳೆ: ದೆಹಲಿಯಲ್ಲಿ ಪ್ರಸಕ್ತ ಮುಂಗಾರು ಋತುವಿನಲ್ಲಿ 7 ಸಲ ಭಾರಿ ಮಳೆಯಾಗಿದೆ. ಇದುವರೆಗೆ ಬಿದ್ದ ಮಳೆಯಲ್ಲಿ ಈ 7 ಮಳೆಯ ಪಾಲು ಶೇಕಡ 60ರಷ್ಟಿದೆ ಎಂದು ಐಎಂಡಿ ತಿಳಿಸಿದೆ. ದೇಶದ ಹಲವು ಭಾಗಗಳಲ್ಲೂ ಭಾರಿ ಮಳೆಯಾಗಿದ್ದು, ಇದಕ್ಕೆ ತಾಪಮಾನ ಬದಲಾವಣೆಯೇ ಕಾರಣ ಎಂದು ಐಎಂಡಿ ತಜ್ಞ ಆರ್.ಕೆ. ಜೇನಾಮಣಿ ಅಭಿಪ್ರಾಯ ಪಟ್ಟಿದ್ದಾರೆ.