ಮಂಗಳೂರು ವಿಮಾನ ನಿಲ್ದಾಣದ ಹೆಸರು ಬದಲಾವಣೆ ; ಹೋರಾಟಕ್ಕೆ ಮಣಿದ ಅದಾನಿ ಸಂಸ್ಥೆ.. 

ಮಂಗಳೂರು ವಿಮಾನ ನಿಲ್ದಾಣದ ಹೆಸರು ಬದಲಾವಣೆ ; ಹೋರಾಟಕ್ಕೆ ಮಣಿದ ಅದಾನಿ ಸಂಸ್ಥೆ.. 

ಮಂಗಳೂರು : ಕಾನೂನು ಹೋರಾಟಕ್ಕೆ ಮಣಿದ ಅದಾನಿ ಸಂಸ್ಥೆಯು ಮಂಗಳೂರು ವಿಮಾನ ನಿಲ್ದಾಣದ ಅದಾನಿ ಏರ್​ಪೋರ್ಟ್ ಹೆಸರು ತೆಗೆದು ಹಾಕಿ ಮತ್ತೆ ಎಲ್ಲಾ ಬೋರ್ಡ್​ಗಳಲ್ಲೂ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಂತಾ ಬರೆದಿದೆ ಎಂದು ಸಾಮಾಜಿಕ ಕಾರ್ಯಕರ್ತ ದಿಲ್ ರಾಜ್ ಆಳ್ವ ತಿಳಿಸಿದರು.

ಖಾಸಗಿ ಹೋಟೆಲ್​ನಲ್ಲಿ ಮಾತನಾಡಿದ ಅವರು, ಮಂಗಳೂರು ವಿಮಾನ ನಿಲ್ದಾಣದ ಹೆಸರನ್ನು ಬದಲಾಯಿಸಿ ಅದಾನಿ ಏರ್​ಪೋರ್ಟ್ ಎಂದು ನಾಮಕರಣ ಮಾಡಿರುವುದರಿಂದ ಮುಂದೆ ಮಂಗಳೂರು ಎಂಬ ಪದವೇ ಮಾಯವಾಗುವ ಸಂಭವವಿದೆ.ಅಲ್ಲದೆ ಮುಂದಿನ ದಿನಗಳಲ್ಲಿ ಈ ವಿಮಾನ ನಿಲ್ದಾಣವನ್ನು ಅದಾನಿ ಸಂಸ್ಥೆಯೇ ನಿರ್ಮಿಸಿದೆ ಎಂಬ ತಪ್ಪು ಅಭಿಪ್ರಾಯ ಬಿಂಬಿತವಾಗುತ್ತದೆ. ಈ ಹಿನ್ನೆಲೆಯಲ್ಲಿ ಕಾನೂನು ಹೋರಾಟ ಮಾಡಬೇಕಾಯಿತು. ನಮ್ಮ ಪ್ರಯತ್ನಕ್ಕೆ ಯಶಸ್ಸು ದೊರಕಿದೆ. ಇದು ನಮಗೆ ಸಂತಸ ತಂದಿದೆ ಎಂದು ಹೇಳಿದರು.

 

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ವಹಣೆ ಮಾಡಲೆಂದು ಕೇಂದ್ರ ಸರಕಾರ ಅದಾನಿ ಸಂಸ್ಥೆಗೆ ಗುತ್ತಿಗೆ ನೀಡಿತ್ತು. ಆದರೆ, ವಿಮಾನ ನಿಲ್ದಾಣ ತಮ್ಮ ಸುಪರ್ದಿಗೆ ಬಂದ ತಕ್ಷಣ ಅದಾನಿ ಸಂಸ್ಥೆಯು ಅದಾನಿ ಏರ್​ಪೋರ್ಟ್ ಎಂದು ಮರು ನಾಮಕರಣ ಮಾಡಿತ್ತು. ಇದನ್ನು ವಿರೋಧಿಸಿ ಕಾನೂನು ಹೋರಾಟವನ್ನು ಮಾಡಲು ಆರ್​ಟಿಐ ಮೂಲಕ ಎಲ್ಲಾ ದಾಖಲೆಗಳನ್ನು ಕೇಳಿದ್ದೆ ಎಂದು ತಿಳಿಸಿದರು.

 

ಆದರೆ, ಇದಕ್ಕೆ ಅದಾನಿ ಸಂಸ್ಥೆ ಯಾವುದೇ ಪ್ರತಿಕ್ರಿಯೆ ನೀಡದಿದ್ದರೂ, ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರದಿಂದ ತನಗೊಂದು ಪತ್ರ ಬಂದಿತ್ತು. ಅದರಲ್ಲಿ ವಿಮಾನ ನಿಲ್ದಾಣದ ಅಧಿಕಾರಿಗಳು ‘ಯಾವುದೇ ಸಂಸ್ಥೆ ಗುತ್ತಿಗೆ ಪಡೆದಿದ್ದರೂ ಬ್ರ್ಯಾಂಡಿಂಗ್ ಮಾಡಲು ಅವಕಾಶವಿಲ್ಲ.

 

ಅದಾನಿ ಸಂಸ್ಥೆಯೊಂದಿಗೆ ಮಾಡಿರುವ ಒಪ್ಪಂದದಲ್ಲಿಯೂ ಬ್ರ್ಯಾಂಡಿಂಗ್ ಮಾಡುವ ಬಗ್ಗೆ, ಹೆಸರು ಬದಲಾವಣೆ ಮಾಡುವ ಬಗ್ಗೆ ಯಾವುದೇ ಉಲ್ಲೇಖ ಮಾಡಿಲ್ಲ. ಅದನ್ನು ನಾವು ಸ್ಪಷ್ಟವಾಗಿ ತಿಳಿಸಿದ್ದೇವೆ. ಈ ಬಗ್ಗೆ ನೋಟಿಸ್ ಕೂಡ ಜಾರಿಗೊಳಿಸಿದ್ದೇವೆ’ ಎಂದು ಹೇಳಿದ್ದರು.

 

ಅದಾನಿ ಸಂಸ್ಥೆಯು ಕಳೆದ ಒಂದು ತಿಂಗಳ ಹಿಂದೆ ಅದಾನಿ ಏರ್​ಪೋರ್ಟ್ ಎಂಬ ಹೆಸರನ್ನು ಅಧಿಕೃತ ಟ್ವಿಟರ್ ಖಾತೆ ಹಾಗೂ ಫೇಸ್​ಬುಕ್ ಖಾತೆಯಲ್ಲಿ ಅಳಿಸಿ ಹಾಕಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಬರೆದಿತ್ತು.

 

ನಿನ್ನೆ ವಿಮಾನ ನಿಲ್ದಾಣದ ಎಲ್ಲಾ ಬೋರ್ಡ್​ಗಳಲ್ಲಿದ್ದ ಅದಾನಿ ಏರ್​ಪೋರ್ಟ್ ಎಂಬ ಹೆಸರನ್ನು ತೆಗೆದು ಹಾಕಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಬರೆದಿದ್ದಾರೆ. ಇದು ಸಂತಸದ ವಿಚಾರ ಎಂದು ಹೇಳಿದರು.

ಆದರೆ, ಮಂಗಳೂರು ವಿಮಾನ ನಿಲ್ದಾಣಕ್ಕೆ ತುಳುನಾಡಿನ ಕಾರಣಿಕ ಪುರುಷರ, ತುಳುವ ನೆಲದ ಸಾಧಕರ ಹೆಸರು ಬರೆಯಲು ನಮ್ಮದೇನೂ ಅಭ್ಯಂತರವಿಲ್ಲ ಎಂದು ದಿಲ್ ರಾಜ್ ಆಳ್ವ ಈ ಸಂದರ್ಭ ಸ್ಪಷ್ಟಪಡಿಸಿದರು.

 

Leave a Reply

Your email address will not be published. Required fields are marked *

You cannot copy content of this page

error: Content is protected !!