ದೇಶಕ್ಕಾಗಿ ನಾವು ಮಾಡಿದ ಆಸ್ತಿ ಮಾರಿ ; ಕಾಂಗ್ರೆಸ್ 70 ವರ್ಷದಲ್ಲಿ ಏನು ಮಾಡಿದೆ ಎಂದು ಪ್ರಶ್ನಿಸುತ್ತಾರೆ: ಮಲ್ಲಿಕಾರ್ಜುನ್ ಖರ್ಗೆ ವ್ಯಂಗ್ಯ
ಮಂಗಳೂರು: ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ರಚಿಸಿದ ಸಾರ್ವಜನಿಕ ಉದ್ದಿಮೆಗಳನ್ನು ಮಾರಾಟ ಮಾಡಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಪಕ್ಷ 70 ವರ್ಷದಲ್ಲಿ ಏನು ಮಾಡಿದೆ ಎಂದು ಪ್ರಶ್ನಿಸುತ್ತಿದ್ದಾರೆ ಎಂದು ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯವಾಡಿದರು.
ಮಂಗಳೂರಿನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದ ವೇಳೆ 366 ಪಬ್ಲಿಕ್ ಸೆಕ್ಟರ್, ಐಐಟಿ, ಮೆಡಿಕಲ್, ಇಂಜಿನಿಯರಿಂಗ್ ಸಂಸ್ಥೆ ಗಳನ್ನು ಸ್ಥಾಪಿಸಿದೆ. ಇದನ್ನು ಕೇಂದ್ರ ಬಿಜೆಪಿ ಸರಕಾರ ಮಾರಾಟ ಮಾಡುತ್ತಿದೆ. ಇದನ್ನೆಲ್ಲ ಮಾರುತ್ತಲೇ ಕಾಂಗ್ರೆಸ್ 70 ವರ್ಷದಲ್ಲಿ ಏನು ಮಾಡಿದೆ ಎಂದು ಪ್ರಶ್ನಿಸುತ್ತಾರೆ. ಇದಕ್ಕೆ ಕಲಿತ ಜನರು, ಪ್ರಯೋಜನ ಪಡೆದವರು ಉತ್ತರ ಕೊಡಬೇಕು ಎಂದರು.ಕಾಂಗ್ರೆಸ್ ಪಕ್ಷ 70 ವರ್ಷ ಆಳ್ವಿಕೆ ಮಾಡಿಲ್ಲ:ಕಾಂಗ್ರೆಸ್ ಪಕ್ಷ 70 ವರ್ಷ ಆಳ್ವಿಕೆ ಮಾಡಿಲ್ಲ. ದೇವೆಗೌಡ, ವಾಜಪೇಯಿ, ಚಂದ್ರಶೇಖರ್, ವಿ.ಪಿ.ಸಿಂಗ್, ಗುಜ್ರಾಲ್, ಮೊರಾರ್ಜಿ ದೇಸಾಯಿ, ಚರಣ್ ಸಿಂಗ್ ಮೊದಲಾದ ಕಾಂಗ್ರಸೇತರರು ಅಧಿಕಾರ ಮಾಡಿದ್ದಾರೆ. ಕಾಂಗ್ರೆಸ್ ಆಳ್ವಿಕೆ ಮಾಡಿದ್ದು 55 ವರ್ಷ. ಆ ಸಂದರ್ಭದಲ್ಲಿ ಕಾಂಗ್ರೆಸ್ ದೇಶಕ್ಕಾಗಿ ಆಸ್ತಿಯನ್ನು ಮಾಡಿದೆ. ಈಗ ಅವರ ಹೆಸರನ್ನು ಬದಲಾವಣೆ ಮಾಡುತ್ತಿದ್ದಾರೆ. ಹೆಸರು ಬದಲಾವಣೆ ಮಾಡುವ ಬದಲು ಕೆಲಸ ಮಾಡಿ ಹೆಸರು ಇಟ್ಟುಕೊಳ್ಳಿ ಎಂದು ಕಿಡಿಕಾರಿದರು.ನಮ್ಮ ಅಧಿಕಾರವಧಿಯಲ್ಲಿ ರೈಲ್ವೆ ಪ್ಲಾಟ್ ಫಾರ್ಮ್ ಟಿಕೆಟ್ಗೆ ಒಂದು ರೂಪಾಯಿ ಹೆಚ್ಚಿಸಿದರೆ ಜನ ಬೈಯುತ್ತಿದ್ದರು. ಈಗ ಸರಕಾರ ರೈಲ್ವೆಯನ್ನು ಮಾರಾಟ ಮಾಡಲು ಹೊರಟಿದೆ. ಒಂದು ಕಿಲೋಮೀಟರ್ ಗೆ 5 ಪೈಸೆ ಹೆಚ್ಚಿಸಿದಾಗ ಗಲಾಟೆ ಮಾಡುತ್ತಿದ್ದರು. ಈಗ ಗಲಾಟೆ ಮಾಡುವ ಬದಲು ಹೊಗಳುತ್ತಿದ್ದಾರೆ ಎಂದರು.
ಆಯಿಲ್ ಬಾಂಡ್ ವಾಜಪೇಯಿ ಕಾಲದಲ್ಲಿ ಆದದ್ದು!ಈಗ ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಹೆಚ್ಚಿಸಿ ಕಾಂಗ್ರೆಸ್ ಆಯಿಲ್ ಬಾಂಡ್ ಮಾಡಿದ ಪರಿಣಾಮ ಎಂದು ಹೇಳುತ್ತಿದ್ದಾರೆ. ಆದರೆ, ಆಯಿಲ್ ಬಾಂಡ್ ಆರಂಭಿಸಿದ್ದು ವಾಜಪೇಯಿ ಸರ್ಕಾರ. ಆಯಿಲ್ ಬಾಂಡ್ ಸಾಲ 1 ಲಕ್ಷ 34 ಸಾವಿರ ಕೋಟಿ ಇದೆ. ಬಿಜೆಪಿ ಸರಕಾರ 7 ವರ್ಷದಲ್ಲಿ 25 ಲಕ್ಷ ಕೋಟಿಯನ್ನು ಎಕ್ಷೈಸ್ ಡ್ಯೂಟಿ, ಜಿಎಸ್ಟಿಯಲ್ಲಿ ಸಂಗ್ರಹಿಸಿದೆ. ಇದರಲ್ಲಿ ಅದು ಆಯಿಲ್ ಬಾಂಡ್ ಸಾಲ ತೀರಿಸಿದ್ದು, 3 ಸಾವಿರದ 500 ಕೋಟಿ ರೂ ಮಾತ್ರ. ತೆರಿಗೆ ಸಂಗ್ರಹಿಸಿದ ಶೇ.1 ರಷ್ಟನ್ನು ಆಯಿಲ್ ಬಾಂಡ್ ಸಾಲ ತೀರಿಸಲು ಹಾಕಿದ್ದರೆ ಆಯಿಲ್ ಬಾಂಡ್ ಸಾಲ ಮುಕ್ತಾಯವಾಗುತ್ತಿತ್ತು ಎಂದರು.ಪೆಗಾಸಸ್ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕು:ಪೆಗಾಸಸ್ ಸಾಫ್ಟ್ವೇರ್ ಖರೀದಿ ಮಾಡಿ ವಿಪಕ್ಷಗಳು, ಪತ್ರಕರ್ತರು, ಸರಕಾರದ ವಿರೋಧಿಗಳು ಮಾತನಾಡುತ್ತಿರುವ ಬಗ್ಗೆ ಕದ್ದಾಲಿಕೆ ಮಾಡಲಾಗುತ್ತಿದೆ. ಈ ಬಗ್ಗೆ ಸಂಸತ್ ಅಧಿವೇಶನದಲ್ಲಿ ಚರ್ಚೆಯಾಗಬೇಕು. ಜನರ ಮೂಲ ಹಕ್ಕು, ಮಾತನಾಡುವ ಹಕ್ಕನ್ನು ಕಸಿಯಲಾಗುತ್ತಿದ್ದು ಇದಕ್ಕಾಗಿ 14 ಪಕ್ಷಗಳಿಂದ ಚರ್ಚೆಗೆ ನೋಟಿಸ್ ಕೊಡಲಾಗಿದೆ. ಈ ಬಗ್ಗೆ ಅಧಿವೇಶನದಲ್ಲಿ ಚರ್ಚೆಗೆ ಅವಕಾಶ ನೀಡಬೇಕು ಎಂದು ಇದೇ ವೇಳೆ ಮಲ್ಲಿಕಾರ್ಜುನ್ ಖರ್ಗೆ ಒತ್ತಾಯಿಸಿದರು.