ಪೊಲೀಸರು ಜನರಿಗೆ ಅವಹೇಳನಕಾರಿ ಪದಬಳಕೆ ಮಾಡುವುದನ್ನು ಸಹಿಸುವುದಿಲ್ಲ, ಗೌರವದಿಂದ ವರ್ತಿಸಿ: ಕೇರಳ ಹೈಕೋರ್ಟ್‌

ಪೊಲೀಸರು ಜನರಿಗೆ ಅವಹೇಳನಕಾರಿ ಪದಬಳಕೆ ಮಾಡುವುದನ್ನು ಸಹಿಸುವುದಿಲ್ಲ, ಗೌರವದಿಂದ ವರ್ತಿಸಿ: ಕೇರಳ ಹೈಕೋರ್ಟ್‌

ತಿರುವನಂತಪುರಂ: ಪೊಲೀಸರು ನಾಗರಿಕರನ್ನು ಅಗೌರವದಿಂದ ಕಾಣುವ ಕುರಿತಾದ ಆರೋಪಗಳ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿ ಹೈಕೋರ್ಟ್‌ ಗೆ ವರದಿಯಾಗುತ್ತಿದೆ ಎಂದ ಕೇರಳ ಹೈಕೋರ್ಟ್‌ ಈ ಕುರಿತು ತನ್ನ ತೀರ್ಪಿನಲ್ಲಿ ಕೆಲ ಸಾಮಾನ್ಯ ನಿರ್ದೇಶಗಳನ್ನು ನೀಡಿದೆ.

 

ನಾಗರಿಕರನ್ನು ಉದ್ದೇಶಿಸಿ ಪೊಲೀಸರು ಅವಹೇಳನಕಾರಿ ಪದಬಳಕೆ ಮಾಡುವುದನ್ನು ಸಹಿಸಲಾಗುವುದಿಲ್ಲ ಅಥವಾ ಅನುಮತಿಸಲಾಗುವುದಿಲ್ಲ ಎಂದು ಆದೇಶ ನೀಡಿದ ಹೈಕೋರ್ಟ್‌, ಇದನ್ನು ಖಚಿತಪಡಿಸಿಕೊಳ್ಳಲು ತೆಗೆದುಕೊಂಡ ಕ್ರಮಗಳೊಂದಿಗೆ ವರದಿಯನ್ನು ಸಲ್ಲಿಸುವಂತೆ ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ಸೂಚಿಸಿತು.

ಜೆ.ಎಸ್‌ ಅನಿಲ್‌ ಎಂಬ ವ್ಯಕ್ತಿಯು “ಪೊಲೀಸರು ತಮ್ಮ ಅಪ್ರಾಪ್ತ ವಯಸ್ಸಿನ ಮಗಳನ್ನು ಮೌಖಿಕವಾಗಿ ನಿಂದನೆ ಮಾಡುವ ಮಟ್ಟಿಗೆ ಹೋಗಿದ್ದು, ನಮಗೆ ಕಿರುಕುಳ ನೀಡುತ್ತಿದ್ದಾರೆ” ಎಂದು ಆರೋಪಿಸಿ ಸಲ್ಲಿಸಿದ್ದ ಅರ್ಜಿಯನ್ನು ವಿಲೇವಾರಿ ಮಾಡುವ ಸಂದರ್ಭದಲ್ಲಿ ನ್ಯಾಮೂರ್ತಿ ದೇವನ್‌ ರಾಮಚಂದ್ರನ್‌ ಆದೇಶ ಹೊರಡಿಸಿದರು.

 

“ಪೊಲೀಸ್‌ ಅಧಿಕಾರಿಗಳು ನಾಗರಿಕರನ್ನುದ್ದೇಶಿಸಿ ಅಸಹ್ಯ ಪದಬಳಕೆ ಮಾಡುವುದರ ಕುರಿತು ನಾನು ಹೆಚ್ಚೇನೂ ವಿವರಿಸಿ ಹೇಳಬೇಕಾದ ಅಗತ್ಯವಿಲ್ಲ. ಈ ಪದಗಳು ಸುಸಂಸ್ಕೃತ ಸಮಾಜಕ್ಕೆ ಅಸಹ್ಯವಾಗಿದೆ. ಇದು ವಸಾಹತಿಶಾಹಿ ಅಧೀನ ತಂತ್ರಗಳ ಅವಶೇಷ ಮಾತ್ರ. 21ನೇ ಶತಮಾನದ ಅಗತ್ಯತೆಗಳಿಗೆ ಅನುಗುಣವಾಗಿ ಸಾಗುವ ಈ ಸ್ವತಂತ್ರ ದೇಶದಲ್ಲಿ ಇಂತಹವುಗಳಿಗೆ ಯಾವುದೇ ಸ್ಥಾನವಿಲ್ಲ. ಪೊಲೀಸ್‌ ಪಡೆಯ ಯಾವುದೇ ಸದಸ್ಯರು ಇಂತಹ ಪದ ಬಳಕೆ ಮಾಡುವುದು ದೇಶದ ಸಾಂವಿಧಾನಿಕ, ನೈತಿಕತೆ ಮತ್ತು ಆತ್ಮಸಾಕ್ಷಿಗೆ ವಿರುದ್ಧವಾಗಿದೆ ಹಾಗೂ ಪ್ರಜಾಪ್ರಭುತ್ವ ನೈತಿಕತೆಗೆ ವಿರುದ್ಧವಾಗಿದೆ. ಅವರು ನಾಗರಿಕರನ್ನು ಗೌರವಿಸಬೇಕು” ಎಂದು ಅವರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!