ಮದಲೂರು ಕೆರೆಗೆ ಹೇಮವತಿ ನೀರಿನ ಅಲೋಕೇಷನ್ ಇದೆ- ಸಂಸದ  ಜಿ.ಎಸ್. ಬಸವರಾಜು  

ಮದಲೂರು ಕೆರೆಗೆ ಹೇಮವತಿ ನೀರಿನ ಅಲೋಕೇಷನ್ ಇದೆ- ಸಂಸದ  ಜಿ.ಎಸ್. ಬಸವರಾಜು

 

 

ತುಮಕೂರು:ಶಿರಾ ತಾಲ್ಲೂಕಿಗೆ .89 ಟಿಎಂಸಿಎಫ್‌ಟಿಯಷ್ಟು ನೀರು ನಿಗಧಿಯಾಗಿದ್ದು, ಇದರಲ್ಲಿ ಮೊದಲೂರು ಕೆರೆಗೆ .5 ಟಿಎಂಸಿಎಫ್‌ಟಿ ನೀರು ಹರಿಸಿಕೊಳ್ಳಬಹುದಾಗಿದೆ. ಇದನ್ನು ಎಸ್.ಎಂ.ಕೃಷ್ಣ ಮುಖ್ಯಮಂತ್ರಿಗಳಾಗಿದ್ದ ಕಾಲದಲ್ಲಿ ವೈ.ಕೆ.ರಾಮಯ್ಯ ಸಚಿವರಾಗಿದ್ದ ವೇಳೆಯಲ್ಲಿ ನಿಗಧಿಪಡಿಸಲಾಗಿದ್ದು, ಈಗ ಅಧಿಕಾರಿಗಳು ಜಿಲ್ಲಾ ಸಚಿವರಿಗೆ ತಪ್ಪು ಮಾಹಿತಿ ನೀಡಿರುವ ಸಾಧ್ಯತೆ ಇದೆ ಎಂದ ಸಂಸದ ಜಿ.ಎಸ್. ಬಸವರಾಜು ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ಶಿರಾ ತಾಲ್ಲೂಕಿಗೆ ನೀರು ಹರಿಸುವ ವಿಚಾರವಾಗಿ ವೈ.ಕೆ.ರಾಮಯ್ಯನವರು ತೀವ್ರವಾಗಿ ವಿರೋಧಿಸಿದ್ದನ್ನು ನಾನು ಒಪ್ಪಲಿಲ್ಲ, ಶಿರಾ ತಾಲ್ಲೂಕು ಸಹ ಕರ್ನಾಟಕ ರಾಜ್ಯದಲ್ಲೇ ಇದೆ. ಅದೇನು ಪಾಕಿಸ್ತಾನದಲ್ಲಿಲ್ಲ, ಕುಡಿಯುವ ನೀರಿಗಾಗಿ ಹರಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದೆ ಎಂದು ತಿಳಿಸಿದರು.

ಶಿರಾ ತಾಲ್ಲೂಕಿಗೆ ಕುಡಿಯುವ ನೀರಿನ ಉದ್ಧೇಶಕ್ಕೆ ನೀರು ಹರಿಸಲು ನಾಲೆ ಅಭಿವೃದ್ಧಿ ಕೆರೆಗಳ ಪುನಶ್ಚೇತನಕ್ಕೆ ಸರ್ಕಾರ ನೀಡಿದ್ದ ಹಣವನ್ನು ಟಿ.ಬಿ.ಜಯಚಂದ್ರ ಅವರು ನಾಲೆಯುದ್ದಕ್ಕೂ ಅಗತ್ಯವಿರುವ ಕಡೆ ಹೆಚ್ಚು ಚೆಕ್ ಡ್ಯಾಂಗಳನ್ನು ನಿರ್ಮಿಸಲು ಬಳಸಿಕೊಂಡಿದ್ದು, ಈ ಭಾಗಕ್ಕೆ ನೀರು ಹರಿಸಿದರೆ ನಿಗಧಿತ ಪ್ರಮಾಣಕ್ಕಿಂತ ಹೆಚ್ಚು ನೀರು ಬೇಕಾಗಬಹುದು. ಇದು ಜಯಚಂದ್ರ ಅವರ ದುರಾಸೆ ಎಂದು ಟೀಕಿಸಿದರು.

ಕರ್ನಾಟಕ ರಾಜ್ಯದ ಸಮಗ್ರ ನೀರಾವರಿ ಯೋಜನೆಗಳ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಮನವರಿಕೆ ಮಾಡಿಕೊಟ್ಟಿದ್ದು, ಇದಕ್ಕೆ ಸಕಾರಾತ್ಮಕವಾಗಿ ಸ್ಪಂಧಿಸಿರುವ ಅವರು, ಈ ಯೋಜನೆ ಕುರಿತಂತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ,ಪಶ್ಚಿಮಾಭಿಮುಖವಾಗಿ ಹರಿದು ವ್ಯರ್ಥವಾಗಿ ಸಮುದ್ರ ಸೇರುತ್ತಿರುವ ನೀರನ್ನು ಪೂರ್ವಕ್ಕೆ ತಿರುಗಿಸಿ, ಇದನ್ನು ನೀರಾವರಿ ಯೋಜನೆಗೆ ಬಳಸಿಕೊಳ್ಳಬಹುದಾಗಿದ್ದು, ನೇತ್ರಾವತಿ, ಕುಮಾರಧಾರ, ವರದಾ, ಕಾಳಿ, ಶರಾವತಿ, ಅಘನಾಶಿನಿ, ಬೇಡ್ತಿ ಇತ್ಯಾದಿ 60ಕ್ಕೂ ಹೆಚ್ಚು ನದಿಗಳಿಂದ 1998 ಟಿಎಂಸಿ ನೀರನ್ನು ಅತ್ಯಂತ ಬರಗಾಲದಲ್ಲೂ ಹರಿಸಬಹುದಾಗಿದೆ ಎಂದರು.

ಜಿಲ್ಲೆಯ ಎಲ್ಲಾ ಗ್ರಾಮಗಳ ಪ್ರತಿ ಮನೆ, ಮನೆಗೂ ಕುಡಿಯುವ ನೀರಿನ ನಲ್ಲಿ ಸಂಪರ್ಕ ಮಾಡಲು ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಪ್ರತಿಯೊಂದು ಗ್ರಾಮದ ‘ವಿಲೇಜ್‌ಆಕ್ಷನ್ ಪ್ಲಾನ್’ ಮಾಡಲು ಜಿಲ್ಲೆಯ 330 ಗ್ರಾಮ ಪಂಚಾಯತ್‌ಗಳಿಗೂ ಈಗಾಗಲೇ ಸೂಚನೆ ನೀಡಲಾಗಿದ್ದು, ಇದೇ ಮಾದರಿಯಲ್ಲಿ ಜಿಲ್ಲೆಯ 11 ನಗರ ಸ್ಥಳೀಯ ಸಂಸ್ಥೆಗಳಿಗೂ ಸೂಚಿಸಲಾಗಿದೆ ಎಂದು ಸಂಸದ ಜಿ.ಎಸ್. ಬಸವರಾಜು ಹೇಳಿದರು.

ಎಲ್ಲಾ 341 ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯ ಗ್ರಾಮಗಳ ‘ವಾಟರ್‌ಆಡಿಟ್-ವಾಟರ್ ಬಡ್ಜೆಟ್- ವಾಟರ್ ಸ್ಟಾçಟಜಿ’ ಮಾಹಿತಿ ಸಹಿತ ಮಾಡಿ ನಕ್ಷೆಗಳನ್ನು ಸಾರ್ವಜನಿಕವಾಗಿ ಪ್ರಕಟಿಸಲು ಸೂಚಿಸಲಾಗಿದೆ. ನಾನು ಜಿಲ್ಲೆಯ ಹಲವಾರು ಸ್ಥಳೀಯ ಸಂಸ್ಥೆಗಳಿಗೆ ಭೇಟಿ ನೀಡಿ ತಪಾಸಣೆ ಮಾಡಲು ನಿರ್ಧರಿಸಿದ್ದೇನೆ.

ಯಾವ ಸ್ಥಳೀಯ ಸಂಸ್ಥೆ ಜಿಐಎಸ್ ಆಧಾರಿತ ನಕ್ಷೆ ಅಥವಾ ಕೈಬರಹದ ನಕ್ಷೆಗಳನ್ನು ಪ್ರಕಟಿಸಿಲ್ಲವೋ ಅಂಥಹ ಸ್ಥಳೀಯ ಸಂಸ್ಥೆಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಉನ್ನತ ಅಧಿಕಾರಿಗಳಿಗೆ ಶಿಫಾರಸ್ಸು ಮಾಡಲಾಗುವುದು ತಿಳಿಸಿದರು.

 

ಸುದ್ದಿಗೋಷ್ಠಿಯಲ್ಲಿ ಅಭಿವೃದ್ಧಿ ರೆವಲ್ಯೂಷನ್ ಫೋರಂ ಅಧ್ಯಕ್ಷ ಕುಂದರನಹಳ್ಳಿ ರಮೇಶ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ಎಸ್.ನಾಗೇಶ್, ಬಿಜೆಪಿ ರೈತಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಶಿವಪ್ರಸಾದ್, ಶಿರಡಿ ಸಾಯಿಬಾಬಾ ದೇವಸ್ಥಾನದ ಕಾರ್ಯದರ್ಶಿ ಗುರುಸಿದ್ಧಪ್ಪ, ಬಿಜೆಪಿ ವಕ್ತಾರ ಕೊಪ್ಪಲ್ ನಾಗರಾಜ್ ಮುಂತಾದವರು ಹಾಜರಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!