ದೇಶದಲ್ಲಿ ಕಾಂಗ್ರೆಸ್ ಪಕ್ಷದ ಸ್ಥಿತಿ ಶೋಚನೀಯವಾಗಿದೆ_ರಾಜ್ಯಸಭಾ ಸದಸ್ಯ ದುಷ್ಯಂತ ಕುಮಾರ್ ಗೌತಮ್
ದೇಶದಲ್ಲಿ ಕಾಂಗ್ರೆಸ್ ಪಕ್ಷದ ಸ್ಥಿತಿ ಶೋಚನೀಯವಾಗಿದೆ ಎಂದು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯಸಭಾ ಸದಸ್ಯ ದುಷ್ಯಂತ್ ಕುಮಾರ್ ಗೌತಮ್ ಆರೋಪಿಸಿದರು. ಅವರು ನಗರದ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಪರಮ ಪೂಜ್ಯ ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳ ಗದ್ದುಗೆಯ ದರ್ಶನ ಪಡೆದರು.
ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳ ಆಶೀರ್ವಾದ ಪಡೆದು ಸುದ್ಧಿಗಾರರೊಂದಿಗೆ ಮಾತನಾಡಿ ಕಾಂಗ್ರೆಸ್ ಪಕ್ಷ ನೂತನವಾಗಿ ಆಯ್ಕೆಯಾದ ಸಚಿವರನ್ನು ಸದಸನಕ್ಕೆ ಪರಿಚಯಿಸುವುದಕ್ಕೆ ಅವಕಾಶ ನೀಡದೆ ಸದನದಲ್ಲಿ ಗದ್ದಲವೆಬ್ಬಿಸಿ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಗಾಳಿಗೆ ತೂರಿದ್ದನ್ನು ಇಡೀ ದೇಶ ಕಂಡಿದೆ. ಇದರಿಂದ ಪ್ರಧಾನಿ ಮೋದಿಯವರು ನೂತನ ಸಚಿವರುಗಳಿಗೆ ಇಡೀ ದೇಶದ ಜನರ ಆಶೀರ್ವಾದ ಪಡೆಯುವಂತೆ ಸೂಚಿಸಿ ಜನಾಶೀರ್ವಾದ ಯಾತ್ರೆಯನ್ನು ಕೈಗೊಳ್ಳುವಂತೆ ಸೂಚಿಸಿದರು.
ಅದರಂತೆಯೇ ದೇಶದಾದ್ಯಂತ ನೂತನ ಸಚಿವರು ಜನರ ಬಳಿಗೆ ತೆರಳಿ ಅವರ ಆಶೀರ್ವಾದ ಪಡೆದರು. ಅದೊಂದು ಐತಿಹಾಸಿಕ ಕಾರ್ಯಕ್ರಮವಾಗಿದ್ದು, ದೇಶದಾದ್ಯಂತ ಉತ್ತಮಪ್ರತಿಕ್ರಿಯೆ ದೊರೆಯಿತು.
ತಾವು ರಾಜ್ಯಕ್ಕೆ ಆಗಮಿಸಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ತಾವು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದು, ದೇಶವ್ಯಾಪಿ ಪಕ್ಷಸಂಘಟನೆ ಹಾಗೂ ವಿವಿಧ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಬಂದಿದ್ದು, ಕರ್ನಾಟಕದಲ್ಲಿ ಪಕ್ಷ ಸದೃಢವಾಗಿದ್ದು, ಉತ್ತಮವಾದ ಬೆಳವಣಿಗೆಯನ್ನು ಕಂಡಿದೆ. ಯಡಿಯೂರಪ್ಪನವರ ನೇತೃತ್ವದ ಹಿಂದಿನ ಸರ್ಕಾರ ಹಾಗೂ ಪ್ರಸ್ತುತ ಬೊಮ್ಮಾಯಿಯವರ ಸರ್ಕಾರ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಜನರ ಆಶೋತ್ತರಗಳಿಗೆ ಸ್ಪಂದಿಸುತ್ತಾ ಜನಮನ್ನಣೆ ಗಳಿಸಿದೆ ಎಂದು ತಿಳಿಸಿದರು.
ತಾವು ಸಿದ್ದಗಂಗಾ ಮಠಕ್ಕೆ ಪ್ರಥಮ ಬಾರಿಗೆ ಆಗಮಿಸಿದ್ದು, ತಾವೂ ಹಾಗೂ ತಮ್ಮ ಪಕ್ಷ ಮಠ ಮಾನ್ಯಗಳು ಸಾಧು ಸಂತರ ಬಗ್ಗೆ ಅಪಾರವಾದ ಭಕ್ತಿ ಗೌರವಗಳನ್ನು ಹೊಂದಿದ್ದು, ನಾಡಿನ ಮಕ್ಕಳಿಗೆ ಅನ್ನ ಅಕ್ಷರ ಆಶ್ರಯ ನೀಡುತ್ತಿರುವ ಶ್ರೀಮಠಕ್ಕೆ ಬಂದಿದ್ದು ಧನ್ಯತೆಯ ಭಾವ ಮೂಡಿಸಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಾಸಕ ಬಿ.ಸುರೇಶ್ ಗೌಡ, ನಗರ ಶಾಸಕ ಜ್ಯೋತಿಗಣೇಶ್, ರಾಜ್ಯ ಭಾ.ಜ.ಪ. ಉಪಾಧ್ಯಕ್ಷ ಎಂ.ಬಿ.ನಂದೀಶ್, ರವಿಶಂಕರ್ ಹೆಬ್ನಾಕ, ನಾಗರಾಜು ಮುಂತಾದವರು ಉಪಸ್ಥಿತರಿದ್ದರು.