ಕೊರೋನ ಸಾಂಕ್ರಾಮಿಕದಿಂದಾಗಿ ರೈಲ್ವೇಸ್ ಗೆ 36,000 ಕೋಟಿ ರೂ.ನಷ್ಟ: ರಾವ್ ಸಾಹೇಬ್ ದನ್ವೆ
ಮುಂಬೈ, : ಕೊರೋನ ಸಾಂಕ್ರಾಮಿಕದ ಅವಧಿಯಲ್ಲಿ ರೈಲ್ವೇಗೆ 36,000 ಕೋಟಿ ರೂ. ನಷ್ಟ ಸಂಭವಿಸಿದೆ. ರೈಲ್ವೇ ಇಲಾಖೆಗೆ ಆದಾಯ ಬರುವುದು ಸರಕು ಸಾಗಣೆ ರೈಲುಗಳಿಂದ ಮಾತ್ರ ಎಂದು ಕೇಂದ್ರ ರೈಲ್ವೇ ಇಲಾಖೆಯ ಸಹಾಯಕ ಸಚಿವ ರಾವ್ ಸಾಹೇಬ್ ದನ್ವೆ ಹೇಳಿದ್ದಾರೆ.
ಮಹಾರಾಷ್ಟ್ರದ ಜಲ್ನಾ ರೈಲು ನಿಲ್ದಾಣದಲ್ಲಿ ನಿರ್ಮಿಸಲಾಗುವ ರೈಲ್ವೇ ಸುರಂಗ ಮಾರ್ಗದ ಶಂಕುಸ್ಥಾಪನೆ ಕಾರ್ಯಕ್ರಮದ ಬಳಿಕ ಮಾಧ್ಯಮದ ಜತೆ ಅವರು ಮಾತನಾಡುತ್ತಿದ್ದರು. ಪ್ರಯಾಣಿಕ ರೈಲು ವಿಭಾಗ ಯಾವಾಗಲೂ ನಷ್ಟದಲ್ಲಿಯೇ ಇರುತ್ತದೆ. ರೈಲು ಟಿಕೆಟ್ ದರ ಹೆಚ್ಚಿಸಿದರೆ ಪ್ರಯಾಣಿಕರ ಮೇಲೆ ಹೆಚ್ಚಿನ ಹೊರೆಬೀಳುತ್ತದೆ. ಸರಕು ಸಾಗಣೆ ರೈಲುಗಳು ಸೋಂಕಿನ ಸಂದರ್ಭ ಜನರಿಗೆ ಅಗತ್ಯದ ಸರಕು ಸಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದು ದನ್ವೆ ಹೇಳಿದರು.
ಇದೀಗ ನಡೆಯುತ್ತಿರುವ ಮುಂಬೈ-ನಾಗ್ಪುರ ಎಕ್ಸ್ಪ್ರೆಸ್ ಮಾರ್ಗದ ಜತೆಗೇ ಬುಲೆಟ್ ಟ್ರೈನ್ ಯೋಜನೆಯನ್ನೂ ಕಾರ್ಯಗತಗೊಳಿಸಲಾಗುವುದು. ನವಿ ಮುಂಬೈಯನ್ನು ದಿಲ್ಲಿಗೆ ಸಂಪರ್ಕಿಸುವ ವೆಸ್ಟರ್ನ್ ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ ಯೋಜನೆಯನ್ನೂ ಕೈಗೆತ್ತಿಕೊಳ್ಳಲಾಗಿದೆ ಎಂದ ಅವರು, ನಾಂದೆಡ್ ಮತ್ತು ಮನ್ಮದ್ ನಿಲ್ದಾಣಗಳ ನಡುವೆ ದ್ವಿಪಥ ಹಳಿ ನಿರ್ಮಿಸಲಾಗುುದು ಎಂದು ಭರವಸೆ ನೀಡಿದರು.
ಜಲ್ನಾದಲ್ಲಿ ಮಾನಸಿಕ ಅಸ್ವಸ್ಥರ ಚಿಕಿತ್ಸೆಗಾಗಿ ಆಸ್ಪತ್ರೆ ನಿರ್ಮಾಣ ಯೋಜನೆಗೆ ರಾಜ್ಯ ಸರಕಾರ ಅನುಮೋದನೆ ನೀಡಿದೆ ಎಂದು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೋಪೆ ಹೇಳಿದರು.