ಹಿಂದೂ’ ಪದವನ್ನು ಹೈಜಾಕ್ ಮಾಡಲು ಬಿಜೆಪಿಗೆ ಬಿಡುವುದಿಲ್ಲ: ಮಾಜಿ ಸಿಎಂ ಹರೀಶ್ ರಾವತ್
ಡೆಹ್ರಾಡೂನ್: ‘ಹಿಂದೂ’ ಪದವನ್ನು ಹೈಜಾಕ್ ಮಾಡಲು ಬಿಜೆಪಿಗೆ ಬಿಡುವುದಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಹೇಳಿದ್ದಾರೆ.
‘‘ಬಿಜೆಪಿ ಹಿಂದೂ ಧರ್ಮದ ಮೌಲ್ಯಗಳನ್ನು ಕೈಬಿಟ್ಟಿದೆ. ಹಿಂದೂ ಧರ್ಮವನ್ನು ಕೇವಲ ಹಿಂದುತ್ವಕ್ಕೆ ಸೀಮಿತಗೊಳಿಸಿದೆ. ನಾವು ಮೌಲ್ಯದ ಅನುಸರಣೆಯಲ್ಲಿ ಹಿಂದೂಗಳು. ನಾವು ಸನಾತನ ಧರ್ಮ ನಂಬುತ್ತೇವೆ. ಬಿಜೆಪಿ ಹಿಂದೂ ಧರ್ಮವನ್ನು ಹೈಜಾಕ್ ಮಾಡಲು ನಾವು ಅವಕಾಶ ನೀಡುವುದಿಲ್ಲ’’ ಎಂದು ರಾವತ್ ಶನಿವಾರ ಹೇಳಿದರು.
‘‘ಹಿಂದೂವಾಗಿ ನಾವು ವಸುದೈವ ಕುಟುಂಬಕಮ್, ಸರ್ವ ಧರ್ಮ ಸಮಾನತೆಯಲ್ಲಿ ನಂಬಿಕೆ ಇರಿಸಿದ್ದೇವೆ. ಆದರೆ, ಬಿಜೆಪಿ ಎಲ್ಲ ಧರ್ಮಗಳ ನಡುವೆ ಸಂಘರ್ಷದ ಬಗ್ಗೆ ನಂಬಿಕೆ ಇರಿಸಿದೆ’’ ಎಂದು ಎಐಸಿಸಿಯ ಪ್ರಧಾನ ಕಾರ್ಯದರ್ಶಿ ಹಾಗೂ ಪಕ್ಷದ ಉತ್ತರಾಖಂಡದ ಪ್ರಚಾರ ಸಮಿತಿಯ ಅಧ್ಯಕ್ಷ ರಾವತ್ ಹೇಳಿದರು.
ಕೇಂದ್ರ ಹಾಗೂ ರಾಜ್ಯದಲ್ಲಿರುವ ಬಿಜೆಪಿ ಸರಕಾರದ ವಿಫಲತೆಯನ್ನು ರಾಜ್ಯದ ಜನರಿಗೆ ಮನದಟ್ಟು ಮಾಡಲು ಮುಂದಿನ ತಿಂಗಳು ‘ಪರಿವರ್ತನೆ ಯಾತ್ರೆ’ ಆರಂಭಿಸಲಾಗುವುದು ಎಂದು ರಾವತ್ ಘೋಷಿಸಿದರು.