ಭಾರತದ ಅಭಿವೃದ್ಧಿ ಪ್ರಮಾಣ ಅಂದಾಜನ್ನು ಶೇ 9.6ರಿಂದ ಶೇ 9.4ಕ್ಕೆ ಇಳಿಸಿದ ಇಂಡಿಯಾ ರೇಟಿಂಗ್ಸ್
ಹೊಸದಿಲ್ಲಿ: ರೇಟಿಂಗ್ ಏಜನ್ಸಿ- ಇಂಡಿಯಾ ರೇಟಿಂಗ್ಸ್ ಆರ್ಥಿಕ ವರ್ಷ 2021-22ಗೆ ಭಾರತದ ಅಂದಾಜು ಅಭಿವೃದ್ಧಿ ಪ್ರಮಾಣವನ್ನು ಈ ಹಿಂದೆ ಅಂದಾಜಿಸಿದ್ದ ಶೇ 9.6ರಿಂದ ಶೇ9.4ಕ್ಕೆ ಇಳಿಸಿದೆ.
ಎರಡನೇ ಕೋವಿಡ್ ಅಲೆಯ ನಂತರ ಭಾರತದ ಆರ್ಥಿಕತೆ ವೇಗವಾಗಿ ಚೇತರಿಕೆ ಕಂಡಿದ್ದರೂ ದೇಶದಲ್ಲಿ ಲಸಿಕೆ ಅಭಿಯಾನ ನಿರೀಕ್ಷಿತ ಪ್ರಗತಿ ಕಂಡಿಲ್ಲ ಎಂದು ಇಂಡಿಯಾ ರೇಟಿಂಗ್ಸ್ ಹೇಳಿದೆ.
“ಲಸಿಕೆ ಅಭಿಯಾನದ ಈಗಿನ ವೇಗವನ್ನು ಪರಿಗಣಿಸಿದಾಗ ಡಿಸೆಂಬರ್ 31,2021ರೊಳಗಾಗಿ ಸಂಪೂರ್ಣ ಜನಸಂಖ್ಯೆಗೆ ಲಸಿಕೆ ನೀಡುವ ಗುರಿ ತಲುಪಲು ಸಾಧ್ಯವಿಲ್ಲ ಎಂಬುದು ನಿಶ್ಚಿತ,” ಎಂದು ಇಂಡಿಯಾ ರೇಟಿಂಗ್ಸ್ ಮುಖ್ಯ ಆರ್ಥಿಕ ಸಲಹೆಗಾರ ಸುನೀಲ್ ಕುಮಾರ್ ಸಿನ್ಹಾ ಹೇಳಿದ್ದಾರೆ.
ಎರಡನೇ ಕೋವಿಡ್ ಅಲೆಯಿಂದಾಗಿ ಗ್ರಾಮೀಣ ಆದಾಯವೂ ಕಡಿಮೆಯಾಗಿದೆ ಹಾಗೂ ಕುಟುಂಬಗಳು ಮಾಡುವ ಖರ್ಚು ಕೂಡ ಈ ವರ್ಷ ಕಡಿಮೆಯಾಗುವ ಸಾಧ್ಯತೆಯಿದೆ.
ಆಗಸ್ಟ್ 5ರಂದು ರಿಸರ್ವ್ ಬ್ಯಾಂಕ್ ಕೂಡ ಭಾರತದ ಅಂದಾಜು ಹಣದುಬ್ಬರವನ್ನು ಈ ಆರ್ಥಿಕ ವರ್ಷಕ್ಕೆ ಈ ಹಿಂದೆ ಘೋಷಿಸಿದ್ದ ಶೇ5.1ಕ್ಕಿಂತ ಶೇ5.7ಕ್ಕೆ ಏರಿಕೆ ಮಾಡಿತ್ತು.
ಆರ್ಥಿಕ ವರ್ಷ 2020-21ರಲ್ಲಿ ಭಾರತದ ಜಿಡಿಪಿ ಕೂಡ ದಾಖಲೆ ಶೇ7.3ರಷ್ಟು ಕುಸಿತ ಕಂಡಿತ್ತು. ಕಳೆದ ತಿಂಗಳು ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ ಕೂಡ ಭಾರತದ ಅಭಿವೃದ್ಧಿ ಅಂದಾಜನ್ನು ಶೇ12.5ರಿಂದ ಶೇ9.5ಕ್ಕೆ ಇಳಿಸಿತ್ತು. ಜೂನ್ ಕೊನೆಯ ವಾರದಲ್ಲಿ ಎಸ್&ಪಿ ಗ್ಲೋಬಲ್ ರೇಟಿಂಗ್ಸ್ ಕೂಡ ಭಾರತದ ಅಂದಾಜು ಅಭಿವೃದ್ಧಿಯನ್ನು 2021-22ಗೆ ಈ ಹಿಂದೆ ಅಂದಾಜಿಸಿದ್ದ ಶೇ11ರಿಂದ ಶೇ9.5ಕ್ಕೆ ಇಳಿಸಿತ್ತು.