ಆದಾಯ ನಿಯಂತ್ರಣ, ಮರುಹಂಚಿಕೆ: ಚೀನಾದ ಶ್ರೀಮಂತ ಪ್ರಜೆಗಳಿಗೆ ಅಧ್ಯಕ್ಷರ ಸೂಚನೆ

ಆದಾಯ ನಿಯಂತ್ರಣ, ಮರುಹಂಚಿಕೆ: ಚೀನಾದ ಶ್ರೀಮಂತ ಪ್ರಜೆಗಳಿಗೆ ಅಧ್ಯಕ್ಷರ ಸೂಚನೆ

ಬೀಜಿಂಗ್: ಆದಾಯ ನಿಯಂತ್ರಣ ಮತ್ತು ಮರುಹಂಚಿಕೆ ಸೇರಿದಂತೆ ಸಮಾನ ಅಭಿವೃದ್ಧಿಯ ರೂಪರೇಖೆಯ ಪ್ರಸ್ತಾವನೆಯ ಬಗ್ಗೆ ಮಂಗಳವಾರ ಅಧ್ಯಕ್ಷ ಕ್ಸಿ ಜಿಂಪಿಂಗ್ ಚೀನಾದ ಶ್ರೀಮಂತ ಪ್ರಜೆಗಳಿಗೆ ಸೂಚನೆ ನೀಡಿದ್ದಾರೆ ಎಂದು ಸರಕಾರಿ ಮಾಧ್ಯಮ ಕ್ಸಿನ್‌ಹುವಾ ವರದಿ ಮಾಡಿದೆ

 

ಕ್ಷಿ 2012ರಲ್ಲಿ ಅಧ್ಯಕ್ಷತೆ ವಹಿಸಿದಂದಿನಿಂದ ಬಡತನ ನಿರ್ಮೂಲನೆಗೆ ಮತ್ತು ಉದಾರವಾದಿ ಸಮೃದ್ಧ ಸಮಾಜ ನಿರ್ಮಾಣಕ್ಕೆ ಆಡಳಿತಾರೂಢ ಪಕ್ಷ ಮೊದಲ ಆದ್ಯತೆ ನೀಡಲು ನಿರ್ಧರಿಸಿತ್ತು. ಚೀನಾದಲ್ಲಿ ಆದಾಯ ಅಸಮಾನತೆ ವ್ಯಾಪಕವಾಗಿದ್ದು ಶ್ರೀಮಂತರ ಆದಾಯ ಬಡವರಿಗಿಂತ 10 ಪಟ್ಟು ಹೆಚ್ಚಿದೆ ಮತ್ತು 2015ರಿಂದಲೂ ಈ ಸ್ಥಿತಿ ಹಾಗೆಯೇ ಉಳಿದಿದೆ. ಮಂಗಳವಾರ ನಡೆದ ಕಮ್ಯುನಿಸ್ಟ್ ಪಕ್ಷದ ಆರ್ಥಿಕ ಮತ್ತು ಹಣಕಾಸು ವ್ಯವಹಾರಗಳ ಕೇಂದ್ರ ಸಮಿತಿಯ ಸಭೆಯಲ್ಲಿ ಸಮಾಜದ ಮೇಲಿನ ಹಂತದವರನ್ನು ಗುರಿಯಾಗಿಸಿ ರೂಪಿಸಿದ ಹೊಸ ಕಾರ್ಯತಂತ್ರಗಳ ಬಗ್ಗೆ ವಿವರವಾಗಿ ಚರ್ಚಿಸಲಾಗಿದೆ.

 

ನಿಬಂಧನೆಗಳನ್ನು ಬಲಗೊಳಿಸಿ ಅಧಿಕ ಆದಾಯವನ್ನು ಹೊಂದಾಣಿಕೆ ಮಾಡುವ, ಸಕ್ರಮ ಆದಾಯವನ್ನು ರಕ್ಷಿಸುವ, ಮಿತಿ ಮೀರಿದ ಆದಾಯವನ್ನು ಯುಕ್ತ ರೀತಿಯಲ್ಲಿ ಹೊಂದಾಣಿಕೆ ಮಾಡುವ ಮತ್ತು ಅಧಿಕ ಆದಾಯದ ವರ್ಗದವರು ಮತ್ತು ಉದ್ಯಮಿಗಳು ಸಮಾಜಕ್ಕೆ ಇನ್ನಷ್ಟು ವಾಪಾಸು ನೀಡುವುದಕ್ಕೆ ಆದ್ಯತೆ ನೀಡುವುದಾಗಿ ಸಭೆಯಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳು ಸಂಕಲ್ಪ ಮಾಡಿದರು ಎಂದು ವರದಿ ತಿಳಿಸಿದೆ. ಜೊತೆಗೆ, ಮಧ್ಯಮ ವರ್ಗದವರ ವ್ಯಾಪ್ತಿಯನ್ನು ವಿಸ್ತರಿಸುವುದು, ಕಡಿಮೆ ಆದಾಯದ ವರ್ಗದವರ ಆದಾಯ ಹೆಚ್ಚಿಸುವುದು ಮತ್ತು ಅಕ್ರಮ ಆದಾಯವನ್ನು ಪ್ರತಿಬಂಧಿಸುವ ಮೂಲಕ ಸಾಮಾಜಿಕ ನ್ಯಾಯವನ್ನು ಪ್ರೋತ್ಸಾಹಿಸಲೂ ಅಧಿಕಾರಿಗಳು ಸಂಕಲ್ಪಿಸಿದ್ದಾರೆ. ‘ಕೆಲವು ಜನರು ಶ್ರೀಮಂತರಾಗಲು ಬಿಡಿ’ ಎಂಬ ಡೆಂಗ್ ಕ್ಸಿಯಾಪಿಂಗ್ ಅವರ ಪ್ರಸಿದ್ಧ ವಾಕ್ಯದಂತೆ, ಹೆಚ್ಚಿನ ಜನತೆ ಶ್ರೀಮಂತರಾಗುವ ಅವಕಾಶವಿರುವ ಪರಿಸ್ಥಿತಿ ನಿರ್ಮಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ವರದಿ ಹೇಳಿದೆ.

ಉನ್ನತ ಶಿಕ್ಷಣ ಪಡೆದು ಆದಾಯದ ಏಣಿಯ ಮೇಲೇರುವ ಅವಕಾಶವನ್ನು ಜನತೆಗೆ ಒದಗಿಸಲು, ವೈದ್ಯಕೀಯ ವ್ಯವಸ್ಥೆ ಸಹಿತ ಸಾರ್ವಜನಿಕರಿಗೆ ನೀಡುವ ಸೇವೆ ಎಲ್ಲರಿಗೂ ಸಮಾನವಾಗಿ ಲಭಿಸುವಂತೆ ಮಾಡಲು, ಹಿರಿಯ ನಾಗರಿಕರ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತೆ ಜನತೆಗೆ ಕರೆ ನೀಡಲಾಗಿದೆ. ಕಳೆದ ಕೆಲ ವರ್ಷಗಳಿಂದ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಬಡತನ ಕಡಿಮೆಗೊಳಿಸಲು ಚೀನಾ ವ್ಯಾಪಕ ಪ್ರಯತ್ನ ನಡೆಸಿದೆ. ಹಲವರನ್ನು ಕೋಟ್ಯಾಧಿಪತಿಗಳ ಪಟ್ಟಿಗೆ ಸೇರಿಸಿದ ತಂತ್ರಜ್ಞಾನ ಉದ್ದಿಮೆಯ ವಿರುದ್ಧ ಇತ್ತೀಚೆಗೆ ಕಠಿಣ ಕ್ರಮ ಕೈಗೊಂಡಿರುವುದು ಸೆಲೆಬ್ರಿಟಿಗಳಿಂದ ಟೀಕೆಗೆ ಒಳಗಾಗಿತ್ತು. ಆರ್ಥಿಕತೆಯ ಅಪಾಯಗಳನ್ನು ನಿಯಂತ್ರಿಸುವ ಅಗತ್ಯವನ್ನು ಅಧಿಕಾರಿಗಳು ಒತ್ತಿಹೇಳಿದ್ದಾರೆ. ಸ್ಥಿರ ಆರ್ಥಿಕ ಪ್ರಗತಿ ಮತ್ತು ಆರ್ಥಿಕತೆ ಅಪಾಯ ತಡೆಯುವ ಉಪಕ್ರಮಗಳ ನಡುವೆ ಸಮತೋಲನ ಕಾಯ್ದುಕೊಳ್ಳುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಮಾಧ್ಯಮ ವರದಿ ಮಾಡಿದೆ.

Leave a Reply

Your email address will not be published. Required fields are marked *

You cannot copy content of this page

error: Content is protected !!