ಮಂಡ್ಯ: ದಿಶಾ ಸಭೆಯಲ್ಲಿ ಸಂಸದೆ ಸುಮಲತಾ ಅಂಬರೀಶ್ – ಶಾಸಕ ರವೀಂದ್ರ ಮಧ್ಯೆ ವಾಕ್ಸಮರ

ಮಂಡ್ಯ: ದಿಶಾ ಸಭೆಯಲ್ಲಿ ಸಂಸದೆ ಸುಮಲತಾ ಅಂಬರೀಶ್ – ಶಾಸಕ ರವೀಂದ್ರ ಮಧ್ಯೆ ವಾಕ್ಸಮರ

ಮಂಡ್ಯ: ಸಂಸದೆ ಸುಮಲತಾ ಅಂಬರೀಶ್ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ, ಬುಧವಾರ ಜಿ.ಪಂ ಸಭಾಂಗಣದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಉಸ್ತುವಾರಿ ಸಮನ್ವಯ ಸಮಿತಿ (ದಿಶಾ) ಸಭೆಯಲ್ಲೂ ವಾಗ್ದಾಳಿ ನಡೆಸಿದರು.

 

ಸುಮಲತಾ ಅವರ ಅಧ್ಯಕ್ಷತೆಯಲ್ಲಿ ಸಭೆ ಆರಂಭವಾಗುತ್ತಿದ್ದಂತೆ ಮಾತು ಆರಂಭಿಸಿದ ಶಾಸಕ ರವೀಂದ್ರ ಶ್ರೀಕಂಠಯ್ಯ, ಕೆಆರ್‍ಎಸ್ ಬಳಿ ಸಭೆ ಕರೆದಿರುವ ಸಂಬಂಧ ಹಾಗೂ ತಮ್ಮ ಆಪ್ತ ಕಾರ್ಯದರ್ಶಿ ಲೆಟರ್‍ಹೆಡ್ ದುರ್ಬಳಕೆ ಮಾಡಿಕೊಂಡಿರುವ ಕುರಿತು ಸ್ಪಷ್ಟನೆ ನೀಡಿ ನಂತರ, ಸಭೆ ನಡೆಸಿ ಎಂದು ಸಂಸದೆ ಸುಮಲತಾ ಅವರನ್ನು ಒತ್ತಾಯಿಸಿದರು.

 

ಕೆಆರ್‍ಎಸ್ ಅಧಿಕಾರಿಗಳ ಸಭೆ ಕರೆಯುವ ಅಧಿಕಾರ ಸಂಸದರಿಗಿಲ್ಲ. ಆದರೆ, ತಾವು ತಮ್ಮ ವ್ಯಾಪ್ತಿ ಮೀರಿ ಸಭೆ ಕರೆದಿದ್ದೀರಿ. ಅದೂ ಅಲ್ಲದೆ, ನಿಮ್ಮ ಆಪ್ತ ಕಾರ್ಯದರ್ಶಿ ನಿಮ್ಮ ಲೆಟರ್‍ಹೆಡ್‍ನಲ್ಲಿ ಸಭೆ ಕರೆಯಲು ಕಾವೇರಿ ಪ್ರಾಧಿಕಾರದ ಅಧ್ಯಕ್ಷರಿಗೆ ಕೋರಿದ್ದಾರೆ. ನಿಮ್ಮ ಲೆಟರ್‍ಹೆಡ್ ದುರ್ಬಳಕೆ ಆಗುತ್ತಿದೆ ಎಂದು ರವೀಂದ್ರ ಆರೋಪಿಸಿದರು.

 

ಅಕ್ರಮ ಗಣಿಗಾರಿಕೆ ಬಗ್ಗೆ ಮಾತನಾಡುತ್ತೀರಿ. ಅದರೆ, ನಿಮ್ಮ ಸುತ್ತಮುತ್ತ ಅಕ್ರಮ ವ್ಯಕ್ತಿಗಳೇ ತುಂಬಿದ್ದಾರೆ. ನಿಮ್ಮ ಲೆಟರ್‍ಹೆಡ್ ದುರ್ಬಳಕೆ ಆಗುತ್ತಿದೆ. ಇದಕ್ಕೆ ಉತ್ತರ ಕೊಡಬೇಕು. ಜತೆಗೆ ಜಿಲ್ಲೆಯಲ್ಲಿ ನೀವು ಯಾವ ಅಭಿವೃದ್ಧಿ ಕೆಲಸ ಮಾಡಿದ್ದೀರಿ ಎಂಬುದನ್ನು ತಿಳಿಸಬೇಕು ಎಂದು ರವೀಂದ್ರ ಅವರು ಪಟ್ಟುಹಿಡಿದರು. ಇದಕ್ಕೆ ಸುರೇಶ್‍ಗೌಡ ಸೇರಿದಂತೆ ಜೆಡಿಎಸ್ ಶಾಸಕರು ದನಿಗೂಡಿಸಿದರು.

 

ಕೋವಿಡ್ ವಿಷಯದಲ್ಲಿ ಆಕ್ಸಿಜನ್ ಸಿಲಿಂಡರ್ ಕೊಡುಗೆ ಬಿಟ್ಟರೆ ನಿಮ್ಮಿಂದ ಬೇರೆ ಯಾವ ನೆರವು ಬಂದಿಲ್ಲ. ಎರಡೂವರೆ ವರ್ಷದಲ್ಲಿ ಒಂದು ಸಣ್ಣ ಮೋರಿ ಕಾಮಗಾರಿಯನ್ನು ಮಾಡಿಸಿಲ್ಲ. ಕೇವಲ ಪ್ರಚಾರ ಮಾಡುತ್ತಾ ಜನರನ್ನು ದಿಕ್ಕುತಪ್ಪಿಸುತ್ತೀದ್ದೀರಿ ಎಂದು ಅವರು ಟೀಕಸಿದರು.

 

ಸಂಸದೆಯಾಗಿ ಸಭೆಯನ್ನು ನಡೆಸುತ್ತಿದ್ದೇನೆ. ನಿಮ್ಮ ಪ್ರಶ್ನೆಗೆ ಉತ್ತರ ಕೊಡುವ ಅಗತ್ಯವಿಲ್ಲ. ನೀವು ಬೇಕಾದರೆ ಸಂಬಂಧಿಸಿದವರನ್ನು ಕೇಳಿ ಸ್ಪಷ್ಟನೆ ಪಡೆದುಕೊಳ್ಳಿ. ಇದು ರಾಜಕೀಯ ಸಭೆ ಅಲ್ಲ. ಲೆಟರ್‍ಹೆಡ್ ದುರ್ಬಳಕೆಯಾಗಿದ್ದರೆ ದೂರ ಕೊಡಿ. ಸುಮ್ಮನೆ ಸಭೆಗೆ ಅಡ್ಡಪಡಿಸುವುದು ಸರಿಯಲ್ಲ ಎಂದು ಸಂಸದೆ ಸುಮಲತಾ ಎದುರೇಟು ನೀಡಿದರು.

 

ಜಿಪಂ ಸಿಇಒ ದಿವ್ಯಪ್ರಭು, ಕೆಆರ್‍ಎಸ್ ಜಲಾಶಯ ಅಭಿಯಂತರ ವಿಜಯಕುಮಾರ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅಶ್ವಿನಿ ಅವರನ್ನೂ ತರಾಟೆಗೆ ತೆಗೆದುಕೊಂಡ ರವೀಂದ್ರ ಶ್ರೀಕಂಠಯ್ಯ, ಅಧಿಕಾರ ವ್ಯಾಪ್ತಿ ಮೀರಿ ಸಂಸದರು ಸಭೆ ನಡೆಸಲು ಅನುಮತಿ ನೀಡಿರುವು ಬಗ್ಗೆ ತಮ್ಮ ಪ್ರಶ್ನೆಗೆ ಲಿಖಿತವಾಗಿ ಉತ್ತರ ನೀಡಬೇಕು ಎಂದು ತಾಕೀತು ಮಾಡಿದರು.

 

ದಿಶಾ ಸಭೆಗೆ ಸಂಸದರು ಅಧ್ಯಕ್ಷರಾಗಿರುತ್ತಾರೆ. ಸಂಸದರು ಸಭೆ ಕರೆಯುವಂತೆ ಕೇಳಿದಾಗ ನಾನು ಸಭೆ ಕರೆದಿದ್ದೇನೆ. ಕೋವಿಡ್ ಹಿನ್ನೆಲೆಯಲ್ಲಿ ಪ್ರಗತಿ ಪರಿಶೀಲನೆಗೆ ಕೇಂದ್ರ ಸೂಚಿಸಿದೆ. ಹೀಗಾಗಿ ಸಭೆ ಕರೆದಿದ್ದೇನೆ ಎಂದು ಸಿಇಓ ದಿವ್ಯಪ್ರಭು ಸ್ಪಷ್ಟಪಡಿಸಿದರು.

ಸಂಸದೆ ಸುಮಲತಾ ಅವರು ಅಕ್ರಮ ಗಣಿಗಾರಿಕೆ ವಿರುದ್ಧ ಧನಿ ಎತ್ತಿದ ಹಿನ್ನೆಲೆಯಲ್ಲಿ ಅಕ್ರಮ ಸೇರಿದಂತೆ ಸಕ್ರಮ ಗಣಿಗಾರಿಕೆಯನ್ನೂ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿ ಪದ್ಮಜಾ ಸ್ಥಗಿತಗೊಳಿಸಿದ್ದಾರೆ. ಇದರಿಂದ ಅಭಿವೃದ್ಧಿ ಕಾಮಗಾರಿಗಳಿಗೆ ತೊಂದರೆಯಾಗಿದೆ ಎಂದು ಶಾಸಕರಾದ ರವೀಂದ್ರ ಶ್ರೀಕಂಠಯ್ಯ, ಸಿ.ಎಸ್.ಪುಟ್ಟರಾಜು, ಕೆ.ಸುರೇಶ್‍ಗೌಡ ಕಿಡಿಕಾರಿದರು.

 

ಶಾಸಕ ಎಂ.ಶ್ರೀನಿವಾಸ್, ವಿಧಾನಪರಿಷತ್ ಸದಸ್ಯರಾದ ಕೆ.ಟಿ.ಶ್ರೀಕಂಠೇಗೌಡ, ಎನ್.ಅಪ್ಪಾಜಿಗೌಡ, ಇತರೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!