ಮೇಕೆದಾಟು ಯೋಜನೆ’ ರಾಜಕೀಯ ದುರ್ಬಳಕೆ ಸಲ್ಲದು: ಬಿಜೆಪಿ ಮುಖಂಡ ಸಿ.ಟಿ.ರವಿ

ಮೇಕೆದಾಟು ಯೋಜನೆ’ ರಾಜಕೀಯ ದುರ್ಬಳಕೆ ಸಲ್ಲದು: ಬಿಜೆಪಿ ಮುಖಂಡ ಸಿ.ಟಿ.ರವಿ

ಬೆಂಗಳೂರು, : ಮೇಕೆದಾಟು ಯೋಜನೆಯನ್ನು ವಾಸ್ತವಿಕ ನೆಲೆಯಲ್ಲಿ ನೋಡಬೇಕು. ರಾಜಕೀಯವಾಗಿ ಯಾವುದೇ ಪಕ್ಷ ಇದರ ದುರ್ಬಳಕೆ ಮಾಡಬಾರದು. ಎರಡು ದೇಶಗಳ ನೀರಿನ ಹಂಚಿಕೆ ಸುಗಮವಾಗಿ ನಡೆಯುತ್ತದೆ. ಎರಡು ರಾಜ್ಯಗಳ ನಡುವಿನ ನೀರಿನ ಹಂಚಿಕೆ, ಅದರಲ್ಲೂ ಕುಡಿಯುವ ನೀರಿನ ಹಂಚಿಕೆಯ ಸಮಸ್ಯೆ ಪರಿಹಾರ ಕಷ್ಟವೇನಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದರು.

 

ಗುರುವಾರ ನಗರದ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದ ಹೊರಗಿನಿಂದ ಬಂದ ಶೇ.72ರಷ್ಟು ಜನ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಶೇ.70ಕ್ಕಿಂತ ಹೆಚ್ಚು ಜನ ಮಹಾರಾಷ್ಟ್ರದಿಂದ ಹೊರಗಿನವರು ಮುಂಬೈಯಲ್ಲೂ ವಾಸವಿದ್ದಾರೆ. ಚೆನ್ನೈಯಲ್ಲಿ ಶೇ.50ಕ್ಕೂ ಹೆಚ್ಚು ಹೊರರಾಜ್ಯಗಳ ಜನರು ನೆಲೆಸಿದ್ದಾರೆ. ಕುಡಿಯುವ ನೀರಿನ ವಿಚಾರವನ್ನು ಎರಡು ರಾಜ್ಯಗಳ ನಡುವಿನ ಸಂಘರ್ಷ ಎಂಬಂತೆ ಭಾವನಾತ್ಮಕವಾಗಿ ನೋಡಬಾರದು. ಅದನ್ನು ವಾಸ್ತವಿಕ ನೆಲೆಯಲ್ಲಿ ನೋಡಬೇಕು ಎಂದು ಅಭಿಪ್ರಾಯಪಟ್ಟರು.

 

ಕುಡಿಯುವ ನೀರು ಎಲ್ಲರಿಗೂ ಅವಶ್ಯಕ. ಈ ವಿಷಯದಲ್ಲಿ ರಾಜಕಾರಣ ಸಲ್ಲದು. ಬೆಂಗಳೂರಿನಲ್ಲಿ ಶೇ.15 ರಿಂದ 16 ಮಂದಿ ತಮಿಳುನಾಡಿನಿಂದ ಬಂದವರು ಇದ್ದಾರೆ. ಅವರಿಗೆ ಕುಡಿಯುವ ನೀರು ಕೊಡುವುದಿಲ್ಲ ಎನ್ನಲಾದೀತೆ? ಈ ನೆಲೆಗಟ್ಟಿನಲ್ಲಿ ವಿಷಯ ಮನವರಿಕೆ ಮಾಡಬೇಕು. ಕುಡಿಯುವ ನೀರಿನ ವಿಚಾರದಲ್ಲಿ ಬೆಂಕಿ ಹಚ್ಚುವ ರಾಜಕಾರಣಕ್ಕೆ ಅವಕಾಶವಿಲ್ಲ. ಇದು ಸೌಹಾರ್ದಯುತವಾಗಿ ಬಗೆಹರಿಯಬೇಕಾದ ವಿಚಾರ ಎಂದು ಅವರು ನುಡಿದರು.

 

ಕಾವೇರಿ ನೀರಿನ ಹಂಚಿಕೆಗೆ ಸಂಬಂಧಿಸಿ ಹಲವು ತೀರ್ಪುಗಳು ಬಂದಿವೆ. ಆ ತೀರ್ಪಿನ ವ್ಯಾಪ್ತಿಯಲ್ಲಿ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳು ತಮ್ಮ ಪಾಲನ್ನು ಉಪಯೋಗಿಸಲು ಯಾವುದೇ ಅಡ್ಡಿ ಇಲ್ಲ. ಆ ತೀರ್ಪನ್ನು ಮೀರಿದರೆ ವ್ಯಾಜ್ಯ ಆಗುತ್ತದೆ. ಕರ್ನಾಟಕವು ತೀರ್ಪಿನನ್ವಯ ಯೋಜನೆ ರೂಪಿಸಿದರೆ ಅದರಿಂದ ಏನೂ ಸಮಸ್ಯೆ ಆಗಲಾರದು. ಈ ಮಾತನ್ನು ತಮಿಳುನಾಡಿನಲ್ಲೂ ಹೇಳುತ್ತೇನೆ ಎಂದು ಸಿ.ಟಿ.ರವಿ ತಿಳಿಸಿದರು.

Leave a Reply

Your email address will not be published. Required fields are marked *

You cannot copy content of this page

error: Content is protected !!