- ರಾಜ್ಯದಲ್ಲಿ ‘ಇ-ವಿಧಾನ್’ ಜಾರಿ ಮಾಡಲಾಗಿಲ್ಲ; ಸ್ಪೀಕರ್ ಕಾಗೇರಿ ಬೇಸರ
ಬೆಂಗಳೂರು: ವಿಧಾನ ಸಭಾಧ್ಯಕ್ಷನಾಗಿ 2 ವರ್ಷಗಳು ಕಳೆದರೂ ‘ಇ-ವಿಧಾನ್’ ವ್ಯವಸ್ಥೆಯನ್ನು ಜಾರಿ ಮಾಡಲು ಸಾಧ್ಯವಾಗಿಲ್ಲ ಎಂದು ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಬಹಿರಂಗ ಸಭೆಯಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು
ಸ್ಪೀಕರ್ ಸ್ಥಾನ ಸ್ವೀಕರಿಸಿದಾಗಿನಿಂದ ಹಲವು ಕಠಿಣ ನಿಲುವುಗಳನ್ನು ಜಾರಿಗೆ ತಂದಿದ್ದೇನೆ. ಕನಿಷ್ಠ 60 ದಿನ ಅಧಿವೇಶನ ನಡೆಸುವಂತೆ ಸೂಚಿಸಿದ್ದೇನೆ. ಸದನದಲ್ಲಿ ಸದಸ್ಯರನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ. ಆದರೆ ವಿಧಾನಸಭೆಯಲ್ಲಿ ಇ-ವಿಧಾನ್ ಜಾರಿ ಮಾಡಲು ಇನ್ನೂ ಸಾಧ್ಯವಾಗಿಲ್ಲ ಎಂದು ಬೇಸರವಿದೆ ಎಂದು ಹೇಳಿದ್ದಾರೆ.
ಈ ಕುರಿತು ಹಿಂದಿನ ಹಲವು ಸಭಾಧ್ಯಕ್ಷರು ಪ್ರಯತ್ನಪಟ್ಟಿದ್ದಾರೆ. ನಾನೂ ಕೂಡ ಸಾಕಷ್ಟು ಪ್ರಯತ್ನ ಪಟ್ಟರೂ ಸರ್ಕಾರದ ಅಧಿಕಾರಶಾಹಿ ಧೋರಣೆಯಿಂದಾಗಿ ಇ- ವಿಧಾನ್ ಇನ್ನೂ ಜಾರಿಯಾಗಿಲ್ಲ. ಸರ್ಕಾರದ ನಿಲುವಿನಿಂದಾಗಿ ಈ ವ್ಯವಸ್ಥೆಯನ್ನು ಜಾರಿಮಾಡಲಾಗುತ್ತಿಲ್ಲ. ಕೇರಳ, ಹಿಮಾಚಲ ಪ್ರದೇಶದಂತಹ ಸಣ್ಣ ರಾಜ್ಯಗಳಲ್ಲಿ ಇ-ವಿಧಾನ್ ಜಾರಿಯಲ್ಲಿದೆ. ಆದರೆ ಐಟಿ ಕ್ಯಾಪಿಟಲ್ ಎಂಬ ಹೆಗ್ಗಳಿಕೆಯಿರುವ ಕರ್ನಾಟಕದಲ್ಲಿ ಮಾತ್ರ ಇನ್ನೂ ಈ ವ್ಯವಸ್ಥೆಯಿಲ್ಲ. ಈ ಕುರಿತು ಸರ್ಕಾರದ ನಿಲುವು ಬದಲಾಗಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.