ನೆರೆ ಸಂತ್ರಸ್ತರ ಮೂಲಭೂತ ಪೂರೈಕೆಗೆ ವಿಶೇಷ ಗಮನ; ಸಿಎಂ ಬೊಮ್ಮಾಯಿ
ಯಲ್ಲಾಪುರ: ಅತಿವೃಷ್ಟಿಯ ನಿರ್ವಹಣೆಗೆ ಸರ್ಕಾರದಲ್ಲಿ ಎನ್.ಡಿ.ಆರ್.ಎಫ್ ನ ನಿಧಿ ಸಾಕಷ್ಟಿದೆ. ಸದ್ಯ ಪ್ರಕೃತಿ ವಿಕೋಪ ನಿರ್ವಹಣೆಯ ಜತೆಗೆ ನೆರೆ ಸಂತ್ರಸ್ತರಿಗೆ ಮೂಲಭೂತ ಅವಶ್ಯಕತೆಗಳನ್ನು ಪೂರೈಸುವ ಬಗೆಗೆ ವಿಶೇಷ ಗಮನ ಹರಿಸಲಾಗುವುದೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಪಟ್ಟಣದ ಸರ್ಕಾರಿ ಆಸ್ಪತ್ರೆಯ ಬಳಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿ, ಹಲವೆಡೆ ಊರುಗಳೇ ನೆರೆಯ ಹೊಡೆತಕ್ಕೆ ಸಿಲುಕಿವೆ. ಗುಡ್ಡಗಳು ಕುಸಿದು ಮನೆಗಳೇ ನೆಲಸಮವಾಗಿವೆ. ದಾರಿಗಳು ಹಾಳಾಗಿದ್ದು, ನಲುಗಿ ಹೋದ ಸಂತ್ರಸ್ತರಿಗೆ ಮತ್ತೆ ಬದುಕು ಕಟ್ಟಿಕೊಡುವ ಕಾರ್ಯ ಆಗಬೇಕಾಗಿದೆ ಎಂದರು.
ಪ್ರವಾಹ ನಿರ್ವಹಣೆಗೆ ವಿಶೇಷ ಅನುದಾನಕ್ಕಾಗಿ ಕೇಂದ್ರದ ಬಳಿ ಆಗ್ರಹಿಸುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಬೊಮ್ಮಾಯಿ, ಸದ್ಯ ಎನ್.ಡಿ.ಆರ್.ಎಫ್ ನಿಧಿಯಡಿ ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ಕ್ರಮ ಕೈಗೊಳ್ಳಲಾಗುವುದು. ಪ್ರವಾಹದಿಂದ ಉಂಟಾದ ಹಾನಿಯ ಸಮೀಕ್ಷೆ ನಡೆಸಿ, ನಂತರ ಹೆಚ್ಚಿನ ಅನುದಾನ ಕೇಳಲಾಗುವುದು ಎಂದರು. ಶಾಸಕ ಶಿವರಾಮ ಹೆಬ್ಬಾರ್, ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ವಾ.ಕ.ರ.ಸಾ ನಿಗಮದ ಅಧ್ಯಕ್ಷ ವಿ.ಎಸ್.ಪಾಟೀಲ ಇತರರಿದ್ದರು.