ಬೆಂಗಳೂರು; ಕರ್ನಾಟಕದ ನೂತನ ರಾಜ್ಯಪಾಲರಾಗಿ ಥಾವರ್ ಚಂದ್ ಗೆಹ್ಲೋಟ್ ಪ್ರಮಾಣ ವಚನ ಸ್ವೀಕಾರ ಮಾಡಿದರು.ಭಾನುವಾರ ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ 73 ವರ್ಷದ ಥಾವರ್ ಚಂದ್ ಗೆಹ್ಲೋಟ್ ಕರ್ನಾಟಕದ 19ನೇ ರಾಜ್ಯಪಾಲರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಥಾವರ್ ಚಂದ್ ಗೆಹ್ಲೋಟ್‌ಗೆ ಪ್ರಮಾಣ ವಚನವನ್ನು ಬೋಧಿಸಿದರು.
2014ರ ಸೆಪ್ಟೆಂಬರ್‌ನಿಂದ ವಜುಭಾಯಿ ವಾಲಾ ಕರ್ನಾಟಕದ ರಾಜ್ಯಪಾಲರಾಗಿದ್ದರು. ವಜುಭಾಯಿ ವಾಲಾರ 5 ವರ್ಷದ ಅವಧಿ ಪೂರ್ಣಗೊಂಡಿದ್ದರೂ ನೂತನ ರಾಜ್ಯಪಾಲರ ನೇಮಕವಾಗಿರಲಿಲ್ಲ. ಆದ್ದರಿಂದ
ಬಿಜೆಪಿ ಹಿರಿಯ ನಾಯಕ ಥಾವರ್ ಚಂದ್ ಗೆಹ್ಲೋಟ್‌ರನ್ನು ಕರ್ನಾಟಕದ ರಾಜ್ಯಪಾಲರಾಗಿ ಜುಲೈ 6ರಂದು ನೇಮಕ ಮಾಡಿ ರಾಷ್ಟ್ರಪತಿಗಳು ಆದೇಶ ಹೊರಡಿಸಿದ್ದರು.
ಮಧ್ಯಪ್ರದೇಶ ಮೂಲದ ಥಾವರ್ ಚಂದ್ ಗೆಹ್ಲೋಟ್ ರಾಜ್ಯಸಭಾ ಸದಸ್ಯರಾಗಿದ್ದರು. ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಅವರು ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಸಚಿವರಾಗಿದ್ದರು. ರಾಜ್ಯಪಾಲರಾಗಿ ಆಯ್ಕೆಯಾದ ಬಳಿಕ ರಾಜ್ಯಸಭಾ ಸದಸ್ಯತ್ವ ಮತ್ತು ಕೇಂದ್ರ ಸಚಿವ ಸ್ಥಾನಕ್ಕೆ ಥಾವರ್ ಚಂದ್ ಗೆಹ್ಲೋಟ್ ರಾಜೀನಾಮೆ ನೀಡಿದ್ದರು. ಕಾರ್ಯಕ್ರಮದಲ್ಲಿ ನಿರ್ಗಮಿತ ರಾಜ್ಯಪಾಲ ವಜುಭಾಯಿ ವಾಲಾ, ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಡಿಸಿಎಂ ಗೋವಿಂದ ಕಾರಜೋಳ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವರಾದ ಬಸವರಾಜ ಬೊಮ್ಮಾಯಿ, ಕೆ.ಸುಧಾಕರ್, ಆರ್.ಅಶೋಕ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.
ವರದಿ-ಕುಮಾರ ನಾಯ್ಕ.ಭಟ್ಕಳ