ತುಮಕೂರು ನಗರದ ಸಿದ್ಧಗಂಗಾ ಮಠದಲ್ಲಿ ನಗರದ ಗೀವ್ ಬ್ಯಾಕ್, ರೆಡ್ ಕ್ರಾಸ್ ಮತ್ತು ರೋಟರಿ ಸಂಸ್ಥೆಯ ವತಿಯಿಂದ ಸೀಡ್ ಬಾಲ್ ನೆಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಸಿದ್ಧಗಂಗಾ ಮಠಾಧೀಶರಾದ ಶ್ರೀ ಶ್ರೀ ಸಿದ್ಧಲಿಂಗ ಸ್ವಾಮೀಜಿ ಚಾಲನೆ ನೀಡಿದರು.
ನಗರದಲ್ಲಿ ಲಾಕ್ ಡೌನ್ ಸಮಯದಲ್ಲಿ ಗೀವ್ ಬ್ಯಾಕ್, ರೋಟರಿ ಹಾಗೂ ರೆಡ್ ಕ್ರಾಸ್ ಸಂಸ್ಥೆಗಳು ಬಡವರಿಗೆ ಅಶಕ್ತರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಅನೇಕ ಕಾರ್ಯಗಳನ್ನು ಮಾಡಿದ್ದು, ಇದೀಗ ಪರಿಸರ ಕಾಳಜಿ ಹೊತ್ತ ಸೀಡ್ ಬಾಲ್ ಗಳನ್ನು ನೆಡುವ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಸಿದ್ಧಲಿಂಗ ಸ್ವಾಮೀಜಿ ಈ ಸ್ವಯಂ ಸೇವಾ ಸಂಸ್ಥೆಗಳು ಲಾಕ್’ಡೌನ್ ಪ್ರಾರಂಭವಾದಾಗಿನಿಂದ ಹಸಿದ ಜನರಿಗೆ ಅನ್ನ ಆಹಾರಗಳನ್ನು ನೀಡುತ್ತಾ ರೋಗಿಗಳಿಗೆ ಔಷಧೋಪಚಾರಗಳನ್ನು ಮಾಡುತ್ತಾ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಆರ್ಥಿಕ ಸೌಲಭ್ಯಗಳನ್ನು ಒದಗಿಸುತ್ತಾ ಬಂದಿದೆ. ಇದೀಗ ಒಂದು ಹೆಜ್ಜೆ ಮುಂದೆಹೋಗಿ ಪ್ರಕೃತಿಗೆ ಕೊಡುಗೆಯನ್ನು ಕೊಡಲು ಹೊರಟಿದೆ. ಮನುಷ್ಯ ಪ್ರಕೃತಿಯಿಂದ ಎಲ್ಲವನ್ನೂ ಪಡೆಯುತ್ತಾನೆ ಹಾಗೆಯೇ ಪ್ರಕೃತಿಗೆ ಏನನ್ನೂ ಪ್ರತಿಯಾಗಿ ನೀಡುವುದಿಲ್ಲ. ಆದರೆ ಈ ಸಂಘ ಸಂಸ್ಥೆಗಳು, ಪ್ರಕೃತಿ ಕೊಟ್ಟ ಕೊಡುಗೆಯನ್ನು ಪ್ರಕೃತಿಗೆ ಹಿಂದಿರುಗಿಸುವ ಕೆಲಸ ಮಾಡುತ್ತಿದ್ದು, ತಮಗೆ ಇದು ಅತ್ಯಂತ ಸಂತಸಕರವಾದ ವಿಷಯ ಎಂದು ತಿಳಿಸಿದರು.
ಇದೇ ವೇಳೆ ಮಾತನಾಡಿದ ಗೀವ್ ಬ್ಯಾಕ್ ಸಂಸ್ಥೆಯ ಸದಸ್ಯರಾದ ರಕ್ಷಿತ್ ರವರು ತಮ್ಮ ಸಂಸ್ಥೆಯ ವತಿಯಿಂದ ಸಿದ್ಧಗಂಗಾಮಠ, ದೇವರಾಯನದುರ್ಗ, ನಾಮದ ಚಿಲುಮೆ, ರಾಮದೇವರ ಬೆಟ್ಟ ಹಾಗೂ ದುರ್ಗದಹಳ್ಳಿ ಕಾಡಿನ ಪ್ರದೇಶದಲ್ಲಿ ಸೀಡ್ ಬಾಲ್ ಗಳನ್ನು ಭೂಮಿಯಲ್ಲಿ ಉಳುವ ಕೆಲಸವನ್ನು ಮಾಡಿದ್ದು, ಈಗ ಮಳೆ ಬರುವ ಕಾಲವಾದ್ದರಿಂದ ಮಳೆ ಬಂದಾಗ ತಾವು ಹಾಕಿರುವ ಸೀಡ್ ಬಾಲ್ ಗಳಿಂದ ಸಸ್ಯಗಳು ರೂಪಣೆಗೊಂಡು ನಾಷವಾಗಿರುವ ಸಸ್ಯ ಸಂಪತ್ತನ್ನು ಮತ್ತೆ ಪಡೆಯಲು ಪ್ರಯತ್ನಿಸಬಹುದಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಮಾತನಾಡಿದ ಸಂಘಟನೆಯ ಮುಖಂಡರಾದ ಚೇತನ್ ಸ್ವಾಭಾವಿಕವಾಗಿ ಬೆಳೆದಿರುವ ಅರಣ್ಯಪ್ರದೇಶದಲ್ಲಿ ವೈಜ್ಞಾನಿಕವಾಗಿ ತಯಾರಿಸಲಾದ ಸೀಡ್ ಬಾಲ್ ಗಳನ್ನು ನೆಡುವುದರಿಂದ ಮತ್ತಷ್ಟು ಮರಗಳನ್ನು ಬೆಳೆಸಲು ನೆರವಾಗುತ್ತದೆ. ಇದರಲ್ಲಿ ಮಕ್ಕಳನ್ನು ಬಳಸಿಕೊಂಡಿರುವುದರಿಂದ ಅವರಲ್ಲಿ ಪರಿಸರ ಜಾಗೃತಿಯನ್ನು ಮೂಡಿಸಲು ಹಾಗೂ ಅದರ ಅವಶ್ಯಕತೆಯನ್ನು ತಿಳಿಸಲು ಸಹಕಾರಿಯಾಗುತ್ತದೆ ಎಂದರು.
- ಈ ಸಂದರ್ಭದಲ್ಲಿ ಗಿವ್ ಬ್ಯಾಕ್ ರೋಟರಿ ಹಾಗೂ ರೆಡ್ ಕ್ರಾಸ್ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.