ಮಧುಗಿರಿ: ಪಾವಗಡ – ಮಳವಳ್ಳಿ ನಡುವಿನ ಕೆಶಿಪ್ ರಸ್ತೆ ಸೇತುವೆಗಳಲ್ಲಿ ಗಿಡಗಂಟೆಗಳು ಬೆಳೆದು ಕೊಂಡು ಮಳೆ ನೀರು ಸರಾಗವಾಗಿ ಹರಿಯದೆ ಸೇತುವೆ ಅಪಾಯದ ಸ್ಥಿತಿಗೆ ತಲುಪುವಂತಾಗುತ್ತಿವೆ.
ಮಧುಗಿರಿಯಿಂದ ಪಾವಗಡ ರಸ್ತೆಯ ಅರೇನಹಳ್ಳಿ ಬಳಿ ಇರುವ ವೃದ್ಧಾಶ್ರಮ ಸಮೀಪ ಮತ್ತು ದೊಡ್ಲಾ ಹಾಲು ಸಂಗ್ರಹಣ ಕೇಂದ್ರದ ಸಮೀಪದ ಸೇತುವೆ ಎರಡೂ ಬದಿಯಲ್ಲಿ ಗಿಡ ಗಂಟೆಗಳು ಜತೆಗೆ ಎತ್ತಿನಹೊಳೆ ಕಾಮಗಾರಿ ಯೋಜನೆಯ ಆಪೂರ್ಣ ವಾಗಿರುವುದರಿಂದ ನೀರು ಸರಾಗವಾಗಿ ಹರಿಯದೆ ಸೇತುವೆ ಕೆಳಭಾಗದಲ್ಲಿ ನೀರು ನಿಂತು ಕೊಳಚೆ ಪ್ರದೇಶವಾಗಿ ಮಾರ್ಪಟ್ಟಿದೆ.
ಇನ್ನೂ ಎತ್ತಿನ ಹೊಳೆ ಕಾಮಗಾರಿಯನ್ನು ನಿರ್ವಹಿಸುತ್ತಿರುವವರು ಜಮೀನುಗಳಲ್ಲಿ ಹಾಗೂ ಕೆ ಶಿಫ್ ರಸ್ತೆಯ ಸಮೀಪ ತೆಗೆದಿರುವ ಬೃಹದಾಕಾರದ ಗುಂಡಿಗಳನ್ನು ಸರಿಯಾಗಿ ಮುಚ್ಚಿಲ್ಲ ಭಿತ್ತನೆ ಸಮಯವಾಗಿದ್ದು ಜಮೀನುಗಳಲ್ಲಿಯೂ ಗುಂಡಿಗಳು, ದೊಡ್ಡ ದೊಡ್ಡ ಕಲ್ಲುಗಳನ್ನು ಎಲ್ಲೆಂದರಲ್ಲಿ ಬಿಟ್ಟು ಹೋಗಿದ್ದು ವ್ಯವಸಾಯಕ್ಕೂ ತೊಂದರೆಯಾಗುತ್ತಿದ್ದೂ ಈ ಬಗ್ಗೆ ಎತ್ತಿನ ಹೊಳೆ ಯೋಜನೆಯ ಕೆಲ ಅಧಿಕಾರಿಗಳು ರೈತರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಸುಮಾರು 534 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಕೆಶಿಪ್ ರಸ್ತೆ ಬಹುತೇಕ ಎಲ್ಲಾ ಸೇತುವೆಗಳ ಪರಿಸ್ಥಿತಿ ಇದೆ ಅಗಿದೆ ಎಂಬ ಅನುಮಾನಗಳು ಮೂಡುತ್ತಿವೆ.
ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಗ್ರಾಮದಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ ಮತ್ತು ಶಾಸಕರಾಗಿದ್ದ ಕೆ.ಎನ್.ರಾಜಣ್ಣ ನವರ ಅಧ್ಯಕ್ಷತೆಯಲ್ಲಿ ಈ ಬೃಹತ್ ಯೋಜನೆಗೆ ಚಾಲನೆ ನೀಡಲಾಗಿತ್ತು. ಪ್ರಸ್ತುತ ಈ ರಸ್ತೆಯಲ್ಲಿ ಸಾಕಷ್ಟು ವಾಹನಗಳು ಸಂಚರಿಸುತ್ತಿರುವುದರಿಂದ ಏನಾದರೂ ಅವಘಡವಾದರೆ ಯಾರು ಹೊಣೆ ಎಂಬ ಮಾತುಗಳು ವಾಹನಗಳ ಸವಾರರಿಂದ ಕೇಳಿ ಬರುತ್ತಿವೆ.