ದೇವನಹಳ್ಳಿ: ಕೋವಿಡ್ ಸಂಕಷ್ಟ ಪರಿಸ್ಥಿತಿಯಲ್ಲಿ ಕೊರೋನದಿಂದ ಅಕಾಲಿಕವಾಗಿ ಮೃತಪಟ್ಟವರ ಅಂತ್ಯಸಂಸ್ಕಾರ ಯಾವುದೇ ಅಡೆ ತಡೆಯಿಲ್ಲ ಶಾಸ್ತ್ರೋಪ್ತವಾಗಿ ನಡೆಯಬೇಕು ಎಂಬ ಆಶಯದಿಂದ ಸರಕಾರ ರಾಜ್ಯದ ಹಲವೆಡೆ ಸ್ಮಶಾನಗಳನ್ನು ನಿರ್ಮಾಣ ಮಾಡುತ್ತಿವೆ. ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್ ಸಹ ಈ ನಿಟ್ಟಿನಲ್ಲಿ ಸಾಕಷ್ಟು ಒತ್ತು ನೀಡಿದ್ದಾರೆ.
ಆದರೆ ಸರಕಾರದ ಆಶಯಕ್ಕೆ ತಣ್ಣೀರೆರಚಿದಂತಿದೆ ಬೂದಿಗೆರೆ ಗ್ರಾಮದ ಸ್ಮಶಾಣದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಮಾಡಲು ಹೊರಟಿರುವ ಬೂದಿಗೆರೆ ಗ್ರಾಮ ಪಂಚಾಯ್ತಿ ಮತ್ತು ಕಂದಾಯ ಇಲಾಖೆಯ ನಿರ್ಣಯ.
ಅಂದಹಾಗೆ ಬೂದಿಗೆರೆ ಗ್ರಾಪಂ ವ್ಯಾಪ್ತಿಯ ಬೂದಿಗೆರೆ ಅಮಾನಿಕೆರೆ ಸರ್ವೇ ನಂಬರ್ 35 ರಲ್ಲಿ 21 ಗುಂಟೆ ಜಮೀನಿನಲ್ಲಿ ಅನಾದಿ ಕಾಲದಿಂದಲೂ ಗ್ರಾಮಸ್ಥರು ಮೃತರ ಅಂತ್ಯ ಸಂಸ್ಕಾರ ನಡೆಸಿಕೊಂಡು ಬರುತ್ತಿದ್ದು, ಇಂದಿಗೂ ಇಲ್ಲಿ ಸಾಕಷ್ಟು ಸಮಾಧಿಗಳನ್ನು ಕಾಣಬಹುದಾಗಿದೆ. ಕೆಲವೊಂದು ಸಮಾಧಿಗಳು ಗ್ರಾಪಂ ಸ್ವಚ್ಚತೆ ನಡೆಸುವಾಗ ನಾಶ ಮಾಡಿದ್ದು, ಮೃತರ ಸಂಬಂಧಿಕರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ.
ಈ ಜಮೀನಿನಲ್ಲಿ ಸಾಕಷ್ಟು ಸಮಾಧಿಗಳಿದ್ದರೂ ಸಹ ಕಂದಾಯ ಇಲಾಖೆ ಮತ್ತು ಗ್ರಾಪಂ ಯಾವ ರೀತಿ ಘನ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಲು ಜಮೀನು ಮಂಜೂರು ಮಾಡಿದರು ಎಂಬುದು ಯಕ್ಷ ಪ್ರಶ್ನೆಯಾಗಿದೆ.
ಕಾರಣ ಕೂಡಲೇ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಮಂಜೂರು ಮಾಡಿರುವ ಆದೇಶವನ್ನು ಕೂಡಲೇ ಹಿಂಪಡೆದು, ಈ ಸ್ಥಳವನ್ನು ಸ್ಮಶಾನಕ್ಕಾಗಿ ಮೀಸಲಿರಸಬೇಕಿದೆ. ಜಿಲ್ಲಾ ಉಸ್ತುವಾರಿ ಸಚಿವರು ಸಹ ಈ ನಿಟ್ಟಿನಲ್ಲಿ ಗಮನಹರಿಸಿ ಸಮಾಧಿಗಳಿರುವ ಜಾಗವನ್ನು ಸ್ಮಶಾನಕ್ಕಾಗಿಯೇ ಮೀಸಲಿರಲು ಆದೇಶಿಸಬೇಕು ಎಂಬುದು ಬೂದಿಗೆರೆ ಗ್ರಾಮಸ್ಥರ ಮನವಿಯಾಗಿದೆ.
ಬಾಕ್ಸ್
ಬೇಸಾಯಕ್ಕೆ ಕಂಟಕ ಈ ಘಟಕ..?
ಇನ್ನು ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡಲು ಮಂಜೂರು ಮಾಡಿರುವ ಜಮೀನಿನ ಸುತ್ತಲು ಕೃಷಿ ಜಮೀನುಗಳಿದ್ದು, ಇಂದಿಗೂ ಈ ಜಮೀನುಗಳಲ್ಲಿ ಹಣ್ಣು, ತರಕಾರಿ ಮತ್ತು ಹೂಗಳನ್ನು ಬೆಳೆಯಲಾಗುತ್ತಿದೆ. ಘಟಕ ಸ್ಥಾಪನೆಯಾದರೆ ಕೃಷಿ ಮಾಡಲು ಅಡಚಣೆ ಉಂಟಾಗಲಿದೆ. ಜೊತೆಗೆ ನಾಯಿಗಳ ಕಾಟ ಹೆಚ್ಚಾಗಿ ತೋಟಗಾರಿಕೆ ಮಾಡಲು ತೊಡಕಾಗಲಿದೆ.
ಬೂದಿಗೆರೆ ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ಚಿನ್ನಸ್ವಾಮಿ, ಯುವ ಮುಖಂಡ ನಾಗರಾಜ್, ಬೂದಿಗೆರೆ ಬಲಿಜ ಸಂಘದ ಉಪಾಧ್ಯಕ್ಷ ಸಿ.ಮುನಿರಾಜು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಶ್ರೀನಿವಾಸ್ ಮತ್ತು ದೇವನಹಳ್ಳಿ ತಾಲೂಕು ದಂಡಾಧಿಕಾರಿ ಅನಿಲ್ ಅರೋಳಿಕರ್ ಗೆ ಸ್ಮಶಾನದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡದಿರಲು ಮನವಿ ನೀಡಿದರು. ಈ ಜಮೀನನ್ನು ಸ್ಮಶಾನಕ್ಕೆ ಕಾಯ್ದಿರಿಸಲು ಮನವಿ ಮಾಡಿಕೊಂಡರು.
ಗುರುಮೂರ್ತಿ ಬೂದಿಗೆರೆ
8861100990