ಕೊರೊನಾ ದೇಶದೆಲ್ಲೆಡೆ ವ್ಯಾಪಕವಾಗಿ ಹರಡುತ್ತಿದೆ. ಈ ನಿಟ್ಟಿನಲ್ಲಿ ಬೆದರಿದ ಪಾವಗಡ ತಾಲೂಕಿನ ಕೆ. ರಾಮಪುರ ಗ್ರಾಮಸ್ಥರು ಪ್ರಕೃತಿಯ ಮೊರೆ ಹೋಗಿದ್ದಾರೆ. ಗ್ರಾಮದಲ್ಲಿರುವ ಗ್ರಾಮ ರಕ್ಷಣಾ ಕಲ್ಲಿಗೆ ಪೂಜೆ ಸಲ್ಲಿಸಿ ರೋಗ ಬಾರದಂತೆ ತಡೆಯಲು ಪ್ರಾರ್ಥಿಸಿಕೊಂಡಿದ್ದಾರೆ.
ಕೊರೊನಾ ಸೋಂಕು ಹರಡುವಿಕೆ ಜಿಲ್ಲೆಯ ಪಾವಗಡ ತಾಲೂಕಿನಲ್ಲಿ ವ್ಯಾಪಕವಾಗಿದೆ. ತಾಲೂಕಿನ ಕೆಲ ಗ್ರಾಮಗಳಲ್ಲಿ ಸೋಂಕು ಹರಡಬಾರದು. ಒಂದು ವೇಳೆ ಪ್ರವೇಶಿಸಿದರೂ ಯಾವುದೇ ರೀತಿಯ ಸಾವು-ನೋವು ಉಂಟಾಗಬಾರದು ಎಂದು ಆಶಿಸಿ ಗ್ರಾಮಸ್ಥರು ಪ್ರಕೃತಿ ಮೊರೆ ಹೋಗಿದ್ದಾರೆ.
ಮೌಢ್ಯಾಚರಣೆಯ ಮೊರೆ ಹೋದ ರಾಮಪುರ ಗ್ರಾಮಸ್ಥರುಪಾವಗಡ ತಾಲೂಕಿನ ಕೆ. ರಾಮಪುರ ಗ್ರಾಮದಲ್ಲಿ ಈ ಹಿಂದೆ ಮಾರಣಾಂತಿಕ ರೋಗಗಳು ಹಾಗೂ ಪ್ರಾಕೃತಿಕ ವಿಕೋಪಗಳು ಎದುರಾದ ಸಂದರ್ಭದಲ್ಲಿ ಯಾವುದೇ ರೀತಿಯ ಸಾವು-ನೋವು ಉಂಟಾಗದಂತೆ ಪೂಜೆ ಸಲ್ಲಿಸಲು ಆರಂಭಿಸಿದ್ದಾರೆ. ಗ್ರಾಮದ ಸಮೀಪ ಹನುಮನ ಬೆಟ್ಟದಲ್ಲಿನ ಗ್ರಾಮ ರಕ್ಷಣಾ ಕಲ್ಲಿಗೆ 101 ಬಿಂದಿಗೆ ನೀರು, 101 ನಿಂಬೆಕಾಯಿ ಹಾಕಿ ಗ್ರಾಮಕ್ಕೆ ಯಾವುದೇ ರೀತಿಯ ಮಾರಣಾಂತಿಕ ರೋಗಗಳು ಬಾರದಂತೆ ಮತ್ತು ಒಬ್ಬರಿಂದ ಒಬ್ಬರಿಗೆ ಹರಡುವ ಕೊರೊನಾ ಸೋಂಕು ತಡೆಗಟ್ಟುವಂತೆ ಆಶಿಸಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.ಇಂದಿಗೂ ಕೂಡ ಗ್ರಾಮೀಣ ಪ್ರದೇಶದಲ್ಲಿ ಇಂತಹ ಪಿಡುಗಿನ ಸಂದರ್ಭದಲ್ಲಿ ಮೌಢ್ಯಾಚರಣೆ ಮುಂದುವರೆದಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಬಹು ಹಿಂದಿನಿಂದಲೂ ಈ ಗ್ರಾಮದಲ್ಲಿ ಮಲೇರಿಯಾ, ಕಾಲರಾ ಮತ್ತೆ ಕಾಣಿಸಿಕೊಂಡ ಸಂದರ್ಭದಲ್ಲಿ ಗ್ರಾಮಸ್ಥರು ಇಂತಹ ಮೌಢ್ಯಾಚರಣೆ ಮೊರೆ ಹೋಗಿದ್ದರು. ಆ ಸಂದರ್ಭದಲ್ಲಿ ಗ್ರಾಮದಲ್ಲಿ ಯಾವುದೇ ರೀತಿಯ ಸಾಂಕ್ರಾಮಿಕ ರೋಗಗಳು ಹರಡಿರಲಿಲ್ಲ ಎಂಬುದು ಹಿರಿಯರ ವಾದವಾಗಿದೆ.ಇದಲ್ಲದೆ ತೋಟ, ಹೊಲ ಗದ್ದೆಗಳಿಗೆ ರೋಗರುಜಿನಗಳು ತಗುಲಿದ ಸಂದರ್ಭದಲ್ಲಿ ಈ ರೀತಿ ಪ್ರಕೃತಿ ದೇವತೆಗಳ ಪೂಜೆ ಮಾಡಲಾಗುತ್ತಿತ್ತು. ಹನುಮನ ಬೆಟ್ಟದ ಅಕ್ಕಮ್ಮ ಗಾರ್ಲುದೇವಿಯ ದೋಣಿಯಲ್ಲಿನ ನೀರು ತಂದು ಮನೆಗಳಿಗೆ ಚೆಲ್ಲಿದರೆ ರೋಗರುಜಿನಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆ ಗ್ರಾಮಸ್ಥರಲ್ಲಿ ಮನೆ ಮಾಡಿದೆ.