ಚಿಕ್ಕಮಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬಿಯರ್ ಬಾಟ್ಲಿ ತುಂಬಿಕೊಂಡು ಹೋಗುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾಗಿ ಪಲ್ಟಿಯಾಗಿರುವ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಎಂಸಿಹಳ್ಳಿ ಬಳಿ ನಡೆದಿದೆ.ಲಾರಿ ಪಲ್ಟಿಯಾಗಿ ರಸ್ತೆಗೆ ಬಿದ್ದಾಗ ಬಿಯರ್ ಎಂದು ತಿಳಿಯುತ್ತಿದ್ದಂತೆ ಜನ ಲಾರಿ ಏನಾಗಿದೆ, ಒಳಗಡೆ ಇರೋರು ಏನಾಗಿದ್ದಾರೆ ಅನ್ನೋದನ್ನ ನೋಡಲಿಲ್ಲ. ಮೊದಲು ಮಾಡಿದ್ದೇ ಎದ್ವೋ-ಬಿದ್ವೋ ಅಂತ ಲಾರಿ ಮೇಲೇರಿ ಕೈಗೆ ಸಿಕ್ಕಷ್ಟು ಬಿಯರ್ ಬಾಟ್ಲಿಗಳನ್ನು ಮನೆಗೆ ಹೊತ್ತೊಯ್ದರು. ದಿನಂಪ್ರತಿ ಕೊರೊನಾ ಸಾವಿರಾರು ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಆದರೆ ಜನ ಮಾತ್ರ ಯಾವ ಕೊರೊನಾ, ಎಲ್ಲಿಯಾ ಕೊರೊನಾ. ನಮಗೆ ಎಲ್ಲಿ ಲಾಕ್‍ಡೌನ್ ಆಗುತ್ತೋ ಅನ್ನೋ ಭಯ ಕಾಡ್ತಿದೆ. ಎಣ್ಣೆ ಸಿಗುತ್ತೋ ಇಲ್ವೋ. ಒಂದು ವೇಳೆ ಸಿಕ್ಕರೂ ಕೂಡ ಡಬಲ್ ದುಡ್ಡು ಕೊಡಬೇಕು.ಈಗಲೇ ತೆಗೆದುಕೊಂಡು ಹೋದರೆ ಒಂದು ವಾರ ಕುಡಿಯಬಹುದು ಎಂದು ಗುಂಪು-ಗುಂಪಾಗಿ ಲಾರಿ ಮೇಲೆ ಏರಿ ಎಣ್ಣೆ ಬಾಟ್ಲಿಗಳನ್ನ ಹೊತ್ತೊಯ್ದಿದ್ದಾರೆ. ಈ ವೇಳೆ ಎಣ್ಣೆಗಾಗಿ ಮದ್ಯಪ್ರಿಯರು ಲಾರಿ ಮೇಲೆ ಮುಗಿಬಿದಿದ್ದು, ಅವರನ್ನು ನಿಯಂತ್ರಿಸುವಲ್ಲಿ ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಲಾಠಿ ಬೀಸಿದರೂ ಜನ ಹೆದರದಂತಹ ಸ್ಥಿತಿ ನಿರ್ಮಾಣವಾಗಿತ್ತು. ಕೆಲವರು ಲಾಠಿ ಏಟನ್ನೂ ತಿಂದಿದ್ದಾರೆ.ಒಂದೆಡೆ ನೂಕುನುಗ್ಗಲು, ಮತ್ತೊಂದೆಡೆ ಪೊಲೀಸರು. ಈ ಮಧ್ಯೆ ಕೂಡ ಲಾರಿ ಮೇಲೆ ಹತ್ತಲು ಆಗದವರು ದೂರದಲ್ಲಿ ನಿಂತು ಲೋ… ನಂಗ್ ಎರಡು ಬಾಟಲಿ ತಾರೋ ಎಂದು ಕೂಗಾಡುತ್ತಿದ್ದ ದೃಶ್ಯ ಕೂಡ ಸಾಮಾನ್ಯವಾಗಿತ್ತು. ಪಲ್ಟಿಯಾದ ಲಾರಿಯಲ್ಲಿ ಇದ್ದ ಬಿಯರ್ ಗಳನ್ನು ಸಂಗ್ರಹಿಸಲು ಊರಿನ ಜನರು, ಸ್ನೇಹಿತರ ಮಧ್ಯವೇ ಪೈಪೋಟಿ ಕೂಡ ಏರ್ಪಟ್ಟಿತ್ತು. ಒಬ್ಬೊಬ್ಬರ ಕೈಯಲ್ಲಿ ನಾಲ್ಕೈದು ಬಾಟ್ಲಿ ಬಿಯರ್ ಹಿಡಿದು ಮನೆ-ಹೊಲದ ಕಡೆ ಮುಖ ಹೋಗಿದ್ದಾರೆ.