ತುಮಕೂರು: ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇವೆ. ಹಾಗಾಗಿ ಪರಿಸ್ಥಿತಿ ಕೈಮೀರುವ ಮೊದಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾಧ್ಯಕ್ಷ ತಾಜುದ್ದೀನ್ ಶರೀಫ್ ಒತ್ತಾಯಿಸಿದ್ದಾರೆ
ಕೋವಿಡ್ ಪ್ರಕರಣಗಳ ತ್ವರಿತ ಪತ್ತೆಗೆ ಹೋಬಳಿಗೊಂದು ತಪಾಸಣೆ ಕೇಂದ್ರ ಸ್ಥಾಪಿಸಬೇಕು. ಪ್ರತಿ ತಾಲ್ಲೂಕು ಕೇಂದ್ರದಲ್ಲಿ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಬೇಕು. ಲ್ಯಾಬ್ ಹಾಗೂ ಕೋವಿಡ್ ಕೇರ್ ಸೆಂಟರ್ಗಳಲ್ಲಿ ಮೂಲಸೌಕರ್ಯ ಹಾಗೂ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ
ಪ್ರತಿ ಲ್ಯಾಬ್ ಮತ್ತು ಕೋವಿಡ್ ಕೇರ್ ಸೆಂಟರ್ಗೆ ನೋಡಲ್ ಅಧಿಕಾರಿ ನೇಮಕ ಮಾಡಬೇಕು. ಕೋವಿಡ್-19 ಆಸ್ಪತ್ರೆಯಲ್ಲಿ ಬೆಡ್, ವೆಂಟಿಲೇಟರ್, ಐಸಿಯು ಬೆಡ್ಗಳ ಸಂಖ್ಯೆ ಹೆಚ್ಚಿಸಬೇಕು. ಅದಕ್ಕೆ ತಕ್ಕಂತೆ ವೈದ್ಯರು, ಅರೆ ವೈದ್ಯಕೀಯ ಹಾಗೂ ಇತರ ಸಿಬ್ಬಂದಿಯ ವ್ಯವಸ್ಥೆ ಮಾಡಬೇಕು. ಜಿಲ್ಲಾ ಕೋವಿಡ್-19 ಆಸ್ಪತ್ರೆಯಲ್ಲಿ ಕೇವಲ ರೋಗಲಕ್ಷಣ ಇರುವ ಮತ್ತು ಗಂಭೀರ ಪ್ರಕರಣಗಳನ್ನು ಮಾತ್ರ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ
ಕೋವಿಡ್-19 ಸಮರ್ಪಕ ನಿರ್ವಹಣೆಗೆ ಗ್ರಾಮ ಪಂಚಾಯಿತಿ ಮಟ್ಟದ ಟಾಸ್ಕ್ಫೋರ್ಸ್ಗಳನ್ನು ಸಕ್ರಿಯಗೊಳಿಸಬೇಕು. ಕರ್ನಾಟಕ ಪೌರ ನಿಗಮ ಕಾಯ್ದೆಯನ್ವಯ ಸ್ಥಾಪಿಸಲಾಗುವ ವಾರ್ಡ್ ಕಮಿಟಿಗಳನ್ನು ಕ್ರಿಯಾಶೀಲಗೊಳಿಸಿ ಪ್ರತಿಯೊಂದು ವಾರ್ಡ್ಗೆ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಿಸಬೇಕು ಎಂದು ಒತ್ತಾಯಿಸಿದ್ದಾರೆ.
ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚಿನ ವೆಂಟಿಲೇಟರ್ಗಳ ವ್ಯವಸ್ಥೆ ಮಾಡಬೇಕು. ಕೊರೊನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನರ ಜೀವ ರಕ್ಷಣೆ ಉದ್ದೇಶಕ್ಕೆ ಶೀಘ್ರವೇ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರ ಸಭೆ ಕರೆದು ಹೆಚ್ಚಿನ ವೆಂಟಿಲೇಟರ್ಗಳ ವ್ಯವಸ್ಥೆ ಮಾಡಬೇಕು’ ಎಂದು ಒತ್ತಾಯಿಸಿದರು.
ಸೋಂಕು ಹರಡುವಿಕೆ ತಡೆಗೆ ಹಾಗೂ ಸೋಂಕಿತರ ಸಾವಿನ ಸಂಖ್ಯೆ ತಗ್ಗಿಸಲು ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದರು.
ಬೆಂಗಳೂರಿನಲ್ಲೂ ಕೋವಿಡ್ ಪರಿಸ್ಥಿತಿ ಕೈ ಮೀರಿ ಹೋಗಿದ್ದು, ಅಲ್ಲಿನ ಆಸ್ಪತ್ರೆಗಳಲ್ಲಿ ಹಾಸಿಗೆ ಕೊರತೆ ಎದುರಾಗಿದೆ. ಖಾಸಗಿ ಆಸ್ಪತ್ರೆಗಳು ಚಿಕಿತ್ಸೆಯ ನೆಪದಲ್ಲಿ ಬಡ ಜನರನ್ನು ಸುಲಿಗೆ ಮಾಡುತ್ತಿವೆ.