ಇಡ್ಲಿ ಯಾರಿಗೆ ಗೊತ್ತಿಲ್ಲ ಹೇಳಿ, ಯಾರಿಗೆ ಇಷ್ಟವಾಗುವುದಿಲ್ಲ ಹೇಳಿ. ಕರ್ನಾಟಕದ ಪ್ರತಿ ಹಳ್ಳಿಯಲ್ಲೂ ಸಹ ಬೆಳಿಗ್ಗೆ ಇಡ್ಲಿ ಸಿಗದ ಹೋಟಲ್ ಇಲ್ಲವೇ ಇಲ್ಲ ಎನ್ನಬಹುದು.
ಎಣ್ಣೆ ಒಂದಿಂಚು ಸೋಕಿಸದೆ ಹಬೆಯಲ್ಲಿ ಬೇಯಿಸುವ ಆರೋಗ್ಯಕರ ಇಡ್ಲಿಯಂತೂ ಎಲ್ಲಾ ವಯೋಮಾನದವರಿಗೂ ಇಷ್ಟ.
ಇಡ್ಲಿ-ಚಟ್ನಿ-ಸಾಂಬಾರ್… ಅಕ್ಕಿ ಇಡ್ಲಿಯೊಂದಿಗೆ ಕೆಲವಡೆ ಉದ್ದಿನ ವಡೆ ಮತ್ತೆ ಕೆಲವೆಡೆ ಕಡ್ಲೆಬೇಳೆ ವಡೆ ಮತ್ತೆ ಕೆಲವೆಡೆ ತಟ್ಟೆ ಇಡ್ಲಿಯೊಂದಿಗೆ ಮೆಣಸಿನಕಾಯಿ ಬೋಂಡ ಇದ್ದೇ ಇರುತ್ತದೆ.
ಹುಳಿಯಾರಿನಲ್ಲಂತೂ ಇಡ್ಲಿಗೆ ಪ್ರಸಿದ್ಧಿಯಾಗಿರುವ ಅನೇಕ ಹೋಟೆಲ್ ಗಳಿವೆ. ಈ ಭಾಗದಲ್ಲಿ ಗುಂಡಿಡ್ಲಿಗಿಂತ ತಟ್ಟೆ ಇಡ್ಲಿ ಹಾಗೂ ಮೆಣಸಿನಕಾಯಿ ಬೋಂಡ ಬಲು ಫೇಮಸ್..
ವಿಶ್ವ ಇಡ್ನಿ ದಿನದ ಅಂಗವಾಗಿ ಇಂದು ಹುಳಿಯಾರು ಸಮೀಪದ ಕೆಂಕೆರೆಯಲ್ಲಿನ ಒಂದು ಹಳೆಕಾಲದ ಇಡ್ಲಿ ಹೋಟೆಲ್ ಪರಿಚಯ ಮಾಡಿಕೊಡುವೆ…
ಹುಳಿಯಾರಿನಿಂದ ಮೂರು ಕಿಲೋಮೀಟರ್ ದೂರವಿರುವ ಕೆಂಕೆರೆ ಬಸ್ ನಿಲ್ದಾಣದಲ್ಲಿ ಇಳಿದು ಊರಿನ ಕಡೆಯಿರುವ ಆರ್ಚ್ ಒಳಗೆ ಹೋದರೆ ಬಲಭಾಗದಲ್ಲಿ ಕಾಣಿಸುವುದೇ ಈ ಇಡ್ಲಿ ಹೋಟೆಲ್.. ಹೋಟೆಲ್ ಅಂದರೆ ಏನೇನೋ ಕಲ್ಪನೆ ಬೇಡ, ಗ್ರಾಮೀಣ ಭಾಗದ ಹೋಟೆಲ್ಗಳು ಇರುವುದೇ ಹೀಗೆ.
ಊರು ಆಧುನಿಕತೆಗೆ ಮುಖ ಮಾಡಿಕೊಂಡಿದ್ದರು ಸಹ ಹೋಟೆಲ್ ಮಾತ್ರ ಗ್ರಾಮೀಣ ಸೊಗಡಿನಲ್ಲಿ ಹಳ್ಳಿಯ ಹೋಟಲಾಗಿಯೇ ಉಳಿದುಕೊಂಡಿದೆ.
ಈ ಹೋಟೆಲ್ ಗೆ ಬೋರ್ಡ್ ಇಲ್ಲ. ಆದರೆ ಕರೆಯುವುದು ಮಾತ್ರ ಲಲಿತಮ್ಮ ಹೋಟೆಲ್( ಕಡ್ಲೇಉಂಡೆರ ಹೋಟೆಲ್)ಎಂದೆ..
ಈ ಹೋಟೆಲ್ ಒಳಹೊಕ್ಕರೆ ನಿಮಗೆ ಬೆಂಚು, ಟೇಬಲ್ಲು, ಕುರ್ಚಿ ಕಾಣಸಿಗುವುದಿಲ್ಲ. ಇಲ್ಲೇನಿದ್ದರೂ ನೆಲದ ಮೇಲೆಯೆ ಕುಳಿತು ತಿಂಡಿ ತಿನ್ನುವುದು ಮುಂಚಿನಿಂದಲೂ ನಡೆದುಬಂದಿರುವ ಪದ್ಧತಿ. ಸೌದೆ,ಹೆಡೆ ಮೊಟ್ಟೆ ಹಾಕಿ ಇಡ್ಲಿ ಸ್ಟ್ಯಾಂಡಿನಲ್ಲಿ ಇಡ್ಲಿ ಬೆಯಿಸುತ್ತಿದ್ದರೆ ಅದರ ಘಮ ಘಮ ಪರಿಮಳಕ್ಕೆ ಬಾಯಿಯಲ್ಲಿ ನೀರೂರುವುದು ಖಚಿತ..
ಇಡ್ಲಿ ಜೊತೆಗೆ ಚಟ್ನಿ ಹಾಗೂ ಪಲ್ಯ, ಮೆಣಸಿನಕಾಯಿ ಬೋಂಡಾ ದೊರೆಯುತ್ತದೆ..
ರೇಟು ಸಹ ಕಡಿಮೆ. ಇಡ್ಲಿ ಒಂದಕ್ಕೆ 10 ರೂಪಾಯಿ…ಬೆಳಿಗ್ಗೆ 6:30ಕ್ಕೆ ಹೋದರೆ ಹೊಗೆಯಾಡುವ ಇಡ್ಲಿ ರೆಡಿ ಇರುತ್ತದೆ. 11ಗಂಟೆಯವರೆಗೆ ಹೋಟೆಲ್ ತೆಗೆದಿರುತ್ತದೆ.
ಹಳ್ಳಿ ರುಚಿ ಇಡ್ಲಿ ಸವಿಯಬೇಕೆಂದರೆ ಒಮ್ಮೆ ಇಲ್ಲಿಗೆ ಭೇಟಿ ಕೊಡಿ…