ನವದೆಹಲಿ: ದೇಶದಲ್ಲಿ ಕೊರೊನಾ ವೈರಸ್ ಪ್ರಕರಣ ಹೆಚ್ಚುತ್ತಿರುವುದರಿಂದ ಹೋಳಿ ಹಬ್ಬ ಸೇರಿದಂತೆ ವಿವಿಧ ಸಾರ್ವಜನಿಕ ಆಚರಣೆಗೆ ನಿರ್ಬಂಧ ಹೇರುವಂತೆ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ.
ಕೇಂದ್ರ ವಿಪತ್ತು ನಿರ್ವಹಣಾ ಕಾಯ್ದೆಯ ಸೆಕ್ಷನ್ 22ರ ಅಡಿಯಲ್ಲಿ ಹೊರಡಿಸಿರುವ ಸುತ್ತೋಲೆಯಲ್ಲಿ ಈ ಸೂಚನೆ ನೀಡಿದೆ. ಸೋಮವಾರ (ಮಾರ್ಚ್ 29) ಹೋಳಿ ಹಬ್ಬ ನಡೆಯಲಿದ್ದು, ಮಹಾರಾಷ್ಟ್ರ, ದೆಹಲಿ, ಗುಜರಾತ್, ಒಡಿಶಾ, ಉತ್ತರ ಪ್ರದೇಶ, ಮಧ್ಯಪ್ರದೇಶ, ಛತ್ತೀಸ್’ಘಡ, ಚಂಡೀಗಢ, ಹರಿಯಾಣ ರಾಜ್ಯಗಳಲ್ಲಿ ಸಾರ್ವಜನಿಕ ಹೋಳಿ ಹಬ್ಬಕ್ಕೆ ನಿರ್ಬಂಧ ಹೇರಿದೆ.
ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಸಕ್ರಿಯ ಕೊರೋನಾ ಸೋಂಕಿತರಿದ್ದಾರೆ. ಈ ಹಿನ್ನೆಲೆಯಲ್ಲಿ ಬೃಹನ್ಮುಂಬಯಿ ಮುನ್ಸಿಪಲ್ ಕಾರ್ಪೊರೇಷನ್ ಮಾರ್ಚ್ 28 ಮತ್ತು 29 ರಂದು ಹೋಳಿ ಆಚರಣೆಗೆ ಅನುಮತಿ ನೀಡುವುದಿಲ್ಲ ಎಂದು ತಿಳಿಸಿದೆ.
ಹರಿಯಾಣ ರಾಜ್ಯ ಸರ್ಕಾರ ಹೋಳಿ ಆಚರಣೆಯನ್ನು ನಿಷೇಧಿಸಿದ್ದು, ಗೃಹ ಸಚಿವ ಅನಿಲ್ ವಿಜ್ ಅವರು ಈ ಸಂಬಂಧ ಟ್ವೀಟ್ ಮಾಡಿದ್ದಾರೆ.
ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರವು ಹೋಳಿ ಆಚರಿಸಬಾರದು ಎಂದು ಆದೇಶ ಹೊರಡಿಸಿದೆ. ಇದನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅಧಿಕಾರಿಗಳಿಗೆ ದೆಹಲಿ ಮುಖ್ಯ ಕಾರ್ಯದರ್ಶಿ ವಿಜಯ್ ದೇವ್ ಆದೇಶ ನೀಡಿದ್ದಾರೆ.
ಸಾರ್ವಜನಿಕ ಹೋಳಿ ಆಚರಣೆಯನ್ನು ನಿಷೇಧಿಸಿ ಗುಜರಾತ್ ಸರ್ಕಾರ ಆದೇಶ ಹೊರಡಿಸಿದೆ. ಆದರೆ, ಮಾರ್ಚ್ 28ರಂದು ಹೋಳಿಕಾ ದಹನ್’ಗೆ ಅನುಮತಿ ನೀಡಿದೆ.
ಒಡಿಶಾ ಸರ್ಕಾರ ಸಾರ್ವಜನಿಕ ಸ್ಥಳಗಳಲ್ಲಿ ಹೋಳಿ ಆಚರಣೆಯನ್ನು ನಿಷೇಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಕ್ನೋದಲ್ಲಿ ಹೋಳಿ ಹಬ್ಬ, ಮಳೆ ನೃತ್ಯ ಕೂಟ, ಇತರ ಮುಕ್ತ ನೃತ್ಯ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಹೇಳಿದ್ದಾರೆ.
ಮಧ್ಯಪ್ರದೇಶದ ಇಂದೋರ್, ಭೋಪಾಲ್ ಮತ್ತು ಜಬಲ್ಪುರಗಳಲ್ಲಿ ಲಾಕ್ ಡೌನ್ ಘೋಷಿಸಲಾಗಿದ್ದು, ಹೋಳಿಗೆ ನಿಷೇಧ ಹೇರಲಾಗಿದೆ. ಚಂಡೀಗಢದ ಅಧಿಕಾರಿಗಳು ಹೋಳಿ ಹಬ್ಬ ರದ್ದುಗೊಳಿಸಿ ಆದೇಶ ಹೊರಡಿಸಿದ್ದಾರೆ.