ಬೆಂಗಳೂರು : ಕರ್ನಾಟಕ ಸರ್ಕಾರದಲ್ಲಿ 2.50 ಲಕ್ಷ ಹುದ್ದೆಗಳು ಕಳೆದ 14 – 15 ವರ್ಷಗಳಿಂದ ಖಾಲಿಯಿದ್ದು, ಈ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳದೇ ಕೇವಲ ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳುವ ಮೂಲಕ ಸಂಪೂರ್ಣವಾಗಿ ಒಂದು ಪೀಳಿಗೆಗೆ ಮೀಸಲಾತಿಯನ್ನು ನಿರಾಕರಿಸಲಾಗಿದೆ ಎಂದು ವಿಧಾನಸಭೆಯಲ್ಲಿ ಇಂದು ಗಂಭೀರವಾದ ಆರೋಪ ಮಾಡಲಾಯಿತು. ಆಯವ್ಯಯ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಹೊರ ಗುತ್ತಿಗೆಯ ನೇಮಕಾತಿ ದಲಿತ ಹಾಗೂ ಹಿಂದುಳಿದವರಿಗೆ ಮೀಸಲಾತಿಯನ್ನು ನಿರಾಕರಿಸಿರುವ ಕುತಂತ್ರದ ಒಂದು ಬಹುದೊಡ್ಡ ಷಡ್ಯಂತ್ರ ಎಂದು ತಿಳಿಸಿ ಜಿಲ್ಲಾವಾರು ಖಾಲಿ ಹುದ್ದೆಗಳ ಪಟ್ಟಿಯನ್ನು ಸದನದಲ್ಲಿ ವಿವರವಾಗಿ ತಿಳಿಸಲಾಯಿತು ರಾಜ್ಯದ ಪ್ರತಿ ಜಿಲ್ಲೆಯಲ್ಲಿ 10 ರಿಂದ 12 ಸಾವಿರ ಹುದ್ದೆಗಳೊಂದಿಗೆ ಸಂಪೂರ್ಣ ರಾಜ್ಯದಲ್ಲಿ ಒಟ್ಟು 2.50 ಲಕ್ಷ ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳ ಭರ್ತಿಗೆ ಹಣಕಾಸು ಇಲಾಖೆಗೆ ಕಡತ ಕಳುಹಿಸಿದರೆ ಆ ಕಡತಗಳಲ್ಲಿ ಹೊರಗುತ್ತಿಗೆ ನೇಮಕಾತಿ ಮಾಡಿಕೊಳ್ಳುವಂತೆ ಸೂಚಿಸಲಾಗುತ್ತದೆ. ಇದರಿಂದ ಸರ್ಕಾರವು ಬಹುದೊಡ್ಡ ಮಟ್ಟದಲ್ಲಿ ಮೀಸಲಾತಿ ನಿರಾಕರಣೆಯ ಷಡ್ಯಂತ್ರ ರೂಪಿಸಲಾಗಿದೆ ಎಂದು ಸದನದ ಗಮನಕ್ಕೆ ತರಲಾಯಿತು.
ರಾಜ್ಯ ಸರ್ಕಾರದ ವಿವಿಧ ಇಲಾಖೆಯ 17.500 ಕೋಟಿ ರೂಪಾಯಿ ಅಷ್ಟು ಹಣ ಮುಖ್ಯ ವಾಹಿನಿಯ ಹೊರಗೆ ಪಾರ್ಕ್ ಮಾಡಲಾಗಿದೆ ಎಂಬ ಇನ್ನೊಂದು ಗಂಭೀರವಾದ ಆರೋಪವನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಹಲವಾರು ದಾಖಲೆಗಳನ್ನು ಸಹ ಸದನದಲ್ಲಿ ಮಂಡಿಸಲಾಯಿತು. ನಾನು ಸಚಿವನಾಗಿದ್ದಾಗ ಮುಖ್ಯ ವಾಹಿನಿಯ ಹೊರಗಡೆ ಸಿಂಡಿಕೇಟ್ ಬ್ಯಾಂಕಿನ ಡಮ್ಮಿ ಖಾತೆಗಳಲ್ಲಿ 602 ಕೋಟಿ ರೂಪಾಯಿಗಳನ್ನು ಸರ್ಕಾರದಲ್ಲಿ ಯಾರಿಗೂ ಗೊತ್ತಾಗದಂತೆ ತೆಗೆದಿರಿಸಲಾಗಿತ್ತು. ಆ ಹಣವನ್ನು ರಾಜ್ಯದ ಬೊಕ್ಕಸಕ್ಕೆ ಮರಳಿ ತರಲು ಹರ ಸಾಹಸ ಮಾಡಬೇಕಾಯಿತು ಎಂದು ಹೇಳಿ ಈ ಹಣದ ಮೇಲಿನ 223 ಕೋಟಿ ರೂಪಾಯಿಗಳ ಬಡ್ಡಿಯನ್ನು ಸಿಂಡಿಕೇಟ್ ಬ್ಯಾಂಕ್ ಇನ್ನು ಪಾವತಿಸಿಲ್ಲ ಎಂದು ವಿವರಿಸಿ. ಹಣಕಾಸು ಇಲಾಖೆಯ ಮೇಲೆ ಗಂಭೀರವಾದ ಆರೋಪಗಳು ಬಂದಾಗ ಸರ್ಕಾರದ ಮಟ್ಟದಲ್ಲಿ ಯಾವುದೇ ಸ್ಪಂದನೆ ಸಿಗುವುದಿಲ್ಲ ಮುಖ್ಯಮಂತ್ರಿಗಳು ಉತ್ತರ ನೀಡುವ ಸಂದರ್ಭದಲ್ಲಿ ಪಿಡಿ ಖಾತೆಗಳಲ್ಲಿ ಮತ್ತು ಮುಖ್ಯ ವಾಹಿನಿಯ ಹೊರಗಡೆ ಲಭ್ಯವಿರುವ ಸರ್ಕಾರದ ಹಣದ ಬಗ್ಗೆ ಶ್ವೇತ ಪತ್ರ ಹೊರಡಿಸಬೇಕು ಮತ್ತು ಒಬಿರಾಯನ ಕಾಲದ ಕರ್ನಾಟಕ ಆರ್ಥಿಕ ಸಂಹಿತೆಗೆ ತಕ್ಷಣ ತಿದ್ದುಪಡಿ ತರಬೇಕೆಂದು ಒತ್ತಾಯಿಸಲಾಯಿತು.
ರೈತರ ಬೆಳೆಗಳ ಬೆಲೆ ಸತತವಾಗಿ ಕಡಿಮೆ ಆಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿ ಬೆಂಬಲ ಬೆಲೆ ದರದಲ್ಲಿ ಖರೀದಿ ಪ್ರಕ್ರಿಯೆ ನಡೆಯಿಸುವ ಕ್ರಮ ಜರುಗಿಸಬೇಕು. ಇದರಿಂದ ರೈತನು ಬೆಳೆದ ಬೆಳೆಗಳ ಬೆಲೆ ಕನಿಷ್ಟ ಶೇ.30ರಷ್ಟು ಕಡಿಮೆಯಾಗಿದೆ ಎಂದು ಸದನದ ಗಮನಕ್ಕೆ ತರಲಾಯಿತು.