ಕ್ರಿಮಿನಲ್ ಗಳಿಗೆ ಇಲಾಖೆಯ ಮಾಹಿತಿ ಸೋರಿಕೆ , ಐವರು ಪೊಲೀಸ್ ಸಿಬ್ಬಂದಿಗಳ ಅಮಾನತು, ಹಿರಿಯ ಅಧಿಕಾರಿಗಳಿಗೂ ಅಮಾನತು ತೂಗುಗತ್ತಿ….??
ತುಮಕೂರು : ತುಮಕೂರು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೆ.ವಿ.ಅಶೋಕ್ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಿದ್ದಾರೆ, ಒಂದೇ ದಿನ ಐವರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಕ್ರಿಮಿನಲ್‌ಗಳಿಗೆ ಪೊಲೀಸ್ ಇಲಾಖೆಯ ಮಾಹಿತಿ ಸೋರಿಕೆ ಮಾಡುತ್ತಿದ್ದರು ಎಂಬ ಆರೋಪದ ಮೇರೆಗೆ ಅಮಾನತು ಮಾಡಲಾಗಿದೆ.
ಅಮಾನತ್ತದ ಪೊಲೀಸ್ ಸಿಬ್ಬಂದಿಗಳು
ಕ್ಯಾತಸಂದ್ರ ಠಾಣೆಯ ಸಿಬ್ಬಂದಿ ಮಂಜು, ಅಹೋಬಲ ನರಸಿಂಹಮೂರ್ತಿ, ಜಯನಗರ ಠಾಣೆ ಸಿಬ್ಬಂದಿ ಮನು ಎಸ್.ಗೌಡ, ಟ್ರಾಫಿಕ್ ಪೊಲೀಸ್ ಠಾಣೆ ರಾಮಕೃಷ್ಣ ಹಾಗೂ ಎಸ್‌ಪಿ ಕಚೇರಿಯ ಸುರೇಶ್ ಅಮಾನತುಗೊಂಡ ಸಿಬ್ಬಂದಿ.
ತುಮಕೂರಿನ ಸ್ಥಳೀಯ ದಿನಪತ್ರಿಕೆಯ ಸಂಪಾದಕರೊಬ್ಬರ ಹತ್ಯೆಗೆ ಸುಪಾರಿ ಕೊಟ್ಟು ಜೈಲು ಪಾಲಾಗಿರುವ ಆರೋಪಿಗಳಾದ ಮಂಜುನಾಥ್ ರೆಡ್ಡಿ, ನವೀನ್, ನರಸಿಂಹ ಮೂರ್ತಿಗೆ ಈ ಐವರು ಮಾಹಿತಿ ಸೋರಿಕೆ ಮಾಡುತ್ತಿದ್ದರು.
ಈ ಆರೋಪಿಗಳಿಗೆ ಠಾಣೆಯ ಪ್ರಕರಣಗಳ ಬಗ್ಗೆ ಮಾಹಿತಿ ನೀಡುತ್ತಿದ್ದರು. ಈ ಮೂವರು ಆರೋಪಿಗಳ ವಿರುದ್ಧ ದಂಡಿನಶಿವರ ಹಾಗೂ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮೂವರ ವಿರುದ್ಧ ಕೊಲೆಗೆ ಸಂಚು, ಹಲ್ಲೆ ಆರೋಪದ ಮೇಲೆ ಕೇಸ್ ದಾಖಲಾಗಿತ್ತು. ವಾಟ್ಸ್ ಆ್ಯಪ್ ಮೂಲಕ ಆರೋಪಿಗಳಿಗೆ ಮಾಹಿತಿಯನ್ನು ರವಾನಿಸುತ್ತಿದ್ದರು. ಪ್ರಕರಣವೊಂದರಲ್ಲಿ ಮಂಜುನಾಥ್ ರೆಡ್ಡಿ ಮೊಬೈಲ್ ವಶಕ್ಕೆ ಪಡೆದು ಪರಿಶೀಲನೆ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಇನ್ನು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ ವಿ ರವರು ಐವರು ಸಿಬ್ಬಂದಿಗಳನ್ನು ಅಮಾನತು ಮಾಡುವ ಮೂಲಕ ಪ್ರಕರಣದ ತನಿಕೆಯಲ್ಲಿ ದಿಟ್ಟ ಹೆಜ್ಜೆ ಇಟ್ಟಿದ್ದು ಮುಂದಿನ ದಿನದಲ್ಲಿ ಮತ್ತಷ್ಟು ಹಿರಿಯ ಪೊಲೀಸ್ ಅಧಿಕಾರಿಗಳಿಗೂ ಪ್ರಕರಣ ಕಂಟಕವಾಗಲಿದೆ ಎನ್ನುವ ಮಾತು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ.