ಪಠ್ಯ ಪುಸ್ತಕ ಕೊಳ್ಳಲು ಸರ್ಕಾರ ಒತ್ತಾಯಿಸಿದರೆ ಉಗ್ರ ಪ್ರತಿಭಟನೆ ನಡೆಸಲಾಗುವುದು – ಲೋಕೇಶ್ ತಾಳಿಕಟ್ಟೆ
ತುಮಕೂರು – ಕರ್ನಾಟಕ ರಾಜ್ಯದಲ್ಲಿ ಖಾಸಗಿ, ಅನುದಾನ ರಹಿತ ಮತ್ತು ಅನುದಾನಿತ ಶಾಲೆಗಳಿಗೆ ರಾಜ್ಯ ಸರ್ಕಾರ ಮತ್ತು ಶಿಕ್ಷಣ ಇಲಾಖೆಯಿಂದ ರಚಿಸಲ್ಪಟ್ಟ ಪಠ್ಯಪುಸ್ತಕ ಸಂಘದ ವತಿಯಿಂದ ಮಾರಾಟ ಮಾಡಲಾಗುತ್ತಿದ್ದು, ಅವರಿಂದಲೇ ಪಠ್ಯಪುಸ್ತಕಗಳನ್ನು ಖರೀದಿಸಬೇಕು ಎಂಬ ಒತ್ತಡವನ್ನು ಕಳೆದ ಮೂರು ವರ್ಷಗಳಿಂದ ಹೇರಲಾಗಿದೆ, ಆದರೆ ಈ ಒತ್ತಡ ಹೇರಿಕೆಯಿಂದ ನಮ್ಮಗಳಿಗೆ ಸಾಕಷ್ಟು ತೊಂದರೆಗಳಾಗುತ್ತಿದೆ ಎಂದು ರೂಪ್ಸಾ ಅಧ್ಯಕ್ಷರು ಹಾಗೂ ಆಗ್ನೇಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆರವರು ಆಗ್ರಹಿಸಿದ್ದಾರೆ.
ಪಠ್ಯಪುಸ್ತಕ ಸಂಘವು ಪ್ರತೀ ವರ್ಷ ಪಠ್ಯಪುಸ್ತಕಗಳ ಬೆಲೆಯನ್ನು ಶೇ 30 ರಿಂದ 40 ರಷ್ಟು ಹೆಚ್ಚು ಮಾಡಿಕೊಂಡು ಬರುತ್ತಿದೆ, ಇದರಿಂದ ನಮ್ಮಗಳಿಗೆ ಸಾಕಷ್ಟು ಹೊರೆಯಾಗಿರುವುದಲ್ಲದೇ, ಪೋಷಕರಿಗೂ ಸಹ ಇದರ ಹೊರೆ ಬೀಳುತ್ತಿದೆ ಎಂದರು. ಪುಸ್ತಕಗಳ ಬೆಲೆ ಜಾಸ್ತಿಯಾಗುತ್ತಿದೆಯಲ್ಲದೇ, ಅದರ ಗುಣಮಟ್ಟವು ಸಹ ಕಡಿಮೆಯಾಗಿದೆ ಎಂದರು, ಜೊತೆಗೆ ಪಠ್ಯ ಪುಸ್ತಕಗಳಲ್ಲಿರುವ ವಿಷಯಗಳು ಸಹ ವಿವಾದಕ್ಕೆ ಆಸ್ಪದ ನೀಡುತ್ತಿವೆ ಇದು ಸಹ ನಮ್ಮಗಳಿಗೆ ಬೇಸರವನ್ನು ತಂದಿದೆ ಅದರೊಂದಿಗೆ ಪಠ್ಯಪುಸ್ತಕಗಳ ವಿತರಣೆಯಲ್ಲಿಯೂ ಸಹ ಸಾಕಷ್ಟು ವಿಳಂಭ ಮಾಡಲಾಗುತ್ತಿದೆ ಇದರಿಂದ ನಾವುಗಳು ಶಾಲೆಗಳನ್ನು ಪ್ರಾರಂಭ ಮಾಡಿ 15, 20 ದಿನ ಕೆಲವೊಮ್ಮೆ ಒಂದು ತಿಂಗಳು ಕಳೆದರೂ ಸಹ ನಮ್ಮಗಳ ಕೈಗಳಿಗೆ ಪಠ್ಯ ಪುಸ್ತಕಗಳು ಸೇರುವುದಿಲ್ಲ, ಇದರಿಂದ ಶಿಕ್ಷಕರಿಗೆ ಬೋಧನೆ ಮಾಡುವುದರಲ್ಲಿ ಬಹಳಷ್ಟು ತೊಂದರೆಯಾಗುತ್ತಿದೆ ಎಂದು ತಿಳಿಸಿದರು.
ಪಠ್ಯಪುಸ್ತಕ ಸಂಘದಿಂದ ನೀಡಲಾಗುವ ಪುಸ್ತಕಗಳ ಬೆಲೆಯು ಮಾರುಕಟ್ಟೆಯಲ್ಲಿ ಸಿಗುವ ಬೆಲೆಗಿಂತ ದುಪ್ಪಟ್ಟಾಗಿರುತ್ತದೆ ಜೊತೆಗೆ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಪುಸ್ತಕಗಳು ದೊರೆಯುತ್ತಿವೆ, ಅದೂ ಅಲ್ಲದೇ ನಾವು ಇಂಡೆಂಟ್ / ಆರ್ಡರ್ ಮಾಡಿ ಹಣ ಸಂದಾಯ ಮಾಡಿದ 2 ತಿಂಗಳ ನಂತರವಷ್ಟೇ ಈ ಸಂಘದಿಂದ ನಮ್ಮಗಳಿಗೆ ಪುಸ್ತಕಗಳನ್ನು ವಿತರಣೆ ಮಾಡುವುದು, ಇಲ್ಲಿ ಕಾಣದ ಕೈಗಳು ಬಹಳಷ್ಟು ವ್ಯವಹಾರ ಮಾಡುತ್ತಿವೆ ಎಂಬುದು ನಮ್ಮ ವಾದವಾಗಿದೆ ಎಂದು ಆರೋಪಿಸಿದರು.
ಇಷ್ಟೇಲ್ಲಾ ಗೊಂದಲಗಳ ನಡುವೆ ರಾಜ್ಯ ಸರ್ಕಾರ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಿಗೆ ಈ ಪಠ್ಯಪುಸ್ತಕ ಸಂಘದಿಂದಲೇ ಪುಸ್ತಕಗಳನ್ನು ಖರೀದಸಬೇಕೆಂದು ಒತ್ತಡ ಹೇರುತ್ತಿದೆ, ಈ ರೀತಿಯಾಗಿ ಒತ್ತಡ ಹೇರಲು ಕಾರಣವಾದರೂ ಏನು? ಒತ್ತಡ ಹೇರುವ ಅಧಿಕಾರ ಸರ್ಕಾರಕ್ಕೆ ಇದೆಯೇ? ಎಂಬ ಪ್ರಶ್ನೆ ನಮ್ಮಲ್ಲಿ ಮೂಡಿದ್ದು, ಜೊತೆಗೆ ಇವರು ಈ ಸಂಘಕ್ಕೆ ಖರೀದಿಸುವ ವೇಳೆ ಅಕೌಂಟ್ ನಿಂದ ಹಣವನ್ನು ಪಾವತಿಸಿ ಎಂದು ಹೇಳುತ್ತಾರೆ, ನಾವು ಆಕೌಂಟ್ ನಿಂದ ಹಣ ಪಾವತಿಸಿದಾಗ ಜಿ.ಎಸ್.ಟಿ. (ವಾಣಿಜ್ಯ ತೆರಿಗೆ) ಇಲಾಖೆಯಿಂದ ನಮಗೆ ನೋಟೀಸ್ ಕೊಡುತ್ತಾರೆ, ನೀವು ಜಿ.ಎಸ್.ಟಿ ಪಾವತಿಸಬೇಕು, ನೀವು ಜಿ.ಎಸ್.ಟಿ. ಕಟ್ಟಿ ಇಲ್ಲವಾದಲ್ಲಿ ದಂಢ ವಿಧಿಸಲಾಗುವುದು ಎಂದು ಹೇಳುತ್ತಾರೆ, ಇದರಿಂದ ಶಾಲೆಗಳನ್ನು ನಡೆಸುತ್ತಿರುವ ನಮ್ಮಂತಹವರಿಗೆ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ಆರೋಪಿಸಿದರು.
ನಮ್ಮಗಳಿಗೆ ಆಗುತ್ತಿರುವ ತೊಂದರೆ ಮತ್ತು ಪಠ್ಯಪುಸ್ತಕದ ಕುರಿತಾಗಿನ ಎಲ್ಲಾ ನ್ಯೂನ್ಯತೆಗಳನ್ನು ಪ್ರಶ್ನಿಸಿ ಮುಂದಿನ ದಿನಗಳಲ್ಲಿ ರೂಪ್ಸಾ ಕರ್ನಾಟಕ ವತಿಯಿಂದ ತೀವ್ರ ಪ್ರತಿಭಟನೆಯನ್ನು ನಡೆಸಲಾಗುವುದು ಜೊತೆಗೆ ಈ ಕುರಿತು ನಾವು ನ್ಯಾಯಾಲಯದ ಮೊರೆ ಹೋಗಿ ನಮ್ಮಗಳಿಗೆ ನ್ಯಾಯ ಸಿಗುವವರೆವಿಗೂ ನ್ಯಾಯಯುತವಾದ ಹೋರಾಟವನ್ನು ನಡೆಸುತ್ತೇವೆಂದು ಲೋಕೇಶ್ ತಾಳಿಕಟ್ಟೆರವರು ಆಗ್ರಹಿಸಿದ್ದಾರೆ.