ಗ್ರಾ.ಪ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಬೆನ್ನಲ್ಲೇ ಆಣೆ ಪ್ರಮಾಣ ಮೂಲಕ ಕುದುರೆ ವ್ಯಾಪಾರಕ್ಕಿಳಿದ ಆಕಾಂಕ್ಷಿಗಳು….????
ತುಮಕೂರು _ ಜುಲೈ 18 ರಂದು ತುಮಕೂರು ಜಿಲ್ಲೆಯ ಹಲವು ಗ್ರಾಮ ಪಂಚಾಯ್ತಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದ್ದು ಚುನಾವಣೆಗೆ ಸ್ಪರ್ಧಿಸಿ ಗೆದ್ದು ಬೀಗಿದ ಕೆಲ ಅಭ್ಯರ್ಥಿಗಳು ಸಿಹಿ ಹಂಚಿ ಸಂಭ್ರಮಿಸಿದ್ದು ಒಂದೆಡೆಯಾದರೆ ಸೋತ ಅಭ್ಯರ್ಥಿಗಳು ಸೋಲು ಗೆಲುವಿನ ಪರಾಮರ್ಶೆ ಮಾಡಿದ್ದು ಒಂದೆಡೆಯಾದರೆ ಮತ್ತೊಂದೆಡೆ ದೇವಾಲಯಕ್ಕೆ ತೆರಳಿದ ಕೆಲ ಸೋತ ಆಕಾಂಕ್ಷಿಗಳು ತಮಗೆ ಬೆಂಬಲ ಸೂಚಿಸಿದರು ಸಹ ಸೋಲನ್ನು ಕಂಡ ಹಿನ್ನೆಲೆಯಲ್ಲಿ ದೇವಾಲಯಕ್ಕೆ ತೆರಳಿ ಆನೆ ಪ್ರಮಾಣ ಮಾಡಿಸಿ ಸೋಲಿಗೆ ಕಾರಣವನ್ನು ತಿಳಿಯಲು ಮುಂದಾಗಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ.
ಇದಕ್ಕೆ ಪುಷ್ಟಿ ನೀಡುವಂತೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಗ್ರಾಮ ಪಂಚಾಯತ್ ಒಂದರ ಪರಾಜಿತ ಆಕಾಂಕ್ಷಿಯೊಬ್ಬ ಸೋತ ಹಿನ್ನಲೆಯಲ್ಲಿ ತನ್ನ ಗ್ರಾಮ ಪಂಚಾಯತ್ ಸದಸ್ಯರನ್ನು ಜಿಲ್ಲೆಯ ದೇವಾಲಯ ಒಂದಕ್ಕೆ ಕರೆದುಕೊಂಡು ಹೋಗಿ ತನಗೆ ಮತಾ ಹಾಕಿದ್ದಿರೋ ಇಲ್ಲವೋ ಎನ್ನುವುದನ್ನು ತಿಳಿದುಕೊಳ್ಳುವ ಸಲುವಾಗಿ ದೇವಾಲಯಕ್ಕೆ ತೆರಳಿ ಕರ್ಪೂರ ಹಚ್ಚಿ ಆಣೆ ಪ್ರಮಾಣ ಮಾಡುವ ಮೂಲಕ ತನ್ನ ಸೋಲಿಗೆ ಕಾರಣವನ್ನು ತಿಳಿದುಕೊಳ್ಳಲು ಮುಂದಾಗಿರುವ ಘಟನೆ ವರದಿಯಾಗಿದೆ.
ಇನ್ನು ಮತ್ತೊಂದೆಡೆ ತಾನು ಮತ ಹಾಕಿದರು ಸಹ ತನ್ನ ಬೆಂಬಲಿತ ಆಕಾಂಕ್ಷಿ ಸೋತ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯನೊಬ್ಬ ಸಿಟ್ಟಿನಿಂದ ತಾನು ಯಾವುದೇ ಅನ್ಯಾಯ ಮಾಡದೆ ಮತವನ್ನ ಚಲಾಯಿಸಿದ್ದು ಅದಕ್ಕೆ ಪ್ರಮಾಣಿಕರಿಸುವ ಹಿನ್ನೆಲೆಯಲ್ಲಿ ಪ್ರಮಾಣ ಮಾಡಿ ಹಿಡಿ ಶಾಪ ಹಾಕಿದ ಘಟನೆ ದೇವಾಲಯ ಒಂದರಲ್ಲಿ ನಡೆದಿದೆ.
ಅದೇನೇ ಇರಲಿ ಗ್ರಾಮ ಪಂಚಾಯತ್ ಸದಸ್ಯರಿಗೆ ಅವರದೇ ಆದ ಗೌರವ ಸಮಾಜದಲ್ಲಿ ಸಿಗುತ್ತಿದ್ದರು ಸಹ ಕೇವಲ ತಮ್ಮ ಅಧಿಕಾರದ ದಾಹಕ್ಕಾಗಿ ವಾಮ ಮಾರ್ಗದ ಮೂಲಕ ತಮ್ಮ ಗ್ರಾಮ ಪಂಚಾಯತ್ ಸದಸ್ಯರಿಗೆ ಹಣ ಹೆಂಡ ಹಾಗೂ ಪ್ರವಾಸದ ಭಾಗ್ಯಗಳನ್ನು ನೀಡುತ್ತಾ ಅಧಿಕಾರದ ಚುಕ್ಕಾಣಿ ಹಿಡಿದ ಇಂತಹ ಸದಸ್ಯರಿಂದ ಗ್ರಾಮ ಪಂಚಾಯಿತಿಯ ಉದ್ದಾರ ಹೇಗೆ ಆಗಲಿದೆ ಎನ್ನುವುದು ಪ್ರಜ್ಞಾವಂತ ಮತದಾರರ ಯಕ್ಷಪ್ರಶ್ನೆ ಜೊತೆಗೆ ಕೇವಲ ತಮ್ಮ ಅಧಿಕಾರದ ಆಸೆಗಾಗಿ ದೇವಾಲಯಗಳನ್ನು ಈ ರೀತಿ ಬಳಸಿಕೊಳ್ಳುವುದು ಎಷ್ಟು ಸಮಂಜಸ ಎನ್ನುವುದನ್ನು ಗ್ರಾಮ ಪಂಚಾಯತ್ ಸದಸ್ಯರೇ ತಮ್ಮ ಆತ್ಮಾವಲೋಕನ ಮಾಡಿಕೊಂಡರೆ ಒಳಿತು.