ಜಿಲ್ಲೆಯಲ್ಲಿನ ಕೆರೆಗಳ ಸಮಗ್ರ ಅಭಿವೃದ್ಧಿಗೆ ಕ್ರಮ ವಹಿಸಿ: ಕೆ.ಹೆಚ್.ಮುನಿಯಪ್ಪ

ಜಿಲ್ಲೆಯಲ್ಲಿನ ಕೆರೆಗಳ ಸಮಗ್ರ ಅಭಿವೃದ್ಧಿಗೆ ಕ್ರಮ ವಹಿಸಿ: ಕೆ.ಹೆಚ್.ಮುನಿಯಪ್ಪ

 

ದೇವನಹಳ್ಳಿ :ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಯಾವುದೇ ನದಿಮೂಲಗಳಿಲ್ಲವಾದ್ದರಿಂದ ನೀರಿನ ಸಮಸ್ಯೆ ನೀಗಿಸಲು, ಅಂತರ್ಜಲ ಮಟ್ಟ ಹೆಚ್ಚಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಹಾಗೂ ಜಿಲ್ಲೆಯಲ್ಲಿರುವ ಕೆರೆಗಳ ಅಂಗಳದಲ್ಲಿ ಬೆಳೆದಿರುವ ಮರಗಳನ್ನು ತೆರವುಗೊಳಿಸಿ ಕೆರೆಗಳ ಸಮಗ್ರ ಅಭಿವೃದ್ಧಿಗೆ ಕ್ರಮ ವಹಿಸಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್.ಮುನಿಯಪ್ಪ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಿದರು.

 

 

 

ದೇವನಹಳ್ಳಿ ತಾಲ್ಲೂಕು, ಬೀರಸಂದ್ರ ಗ್ರಾಮ, ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಎಲ್ಲಾ ಇಲಾಖೆಯ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

 

 

 

ಜಿಲೆಯಲ್ಲಿರುವ ಎಲ್ಲಾ ಕೆರೆಗಳ ಅಂಗಳದಲ್ಲಿ ಬೆಳೆದಿರುವ ಜಾಲಿ ಮರಗಳನ್ನು ಹರಾಜು ಪ್ರಕ್ರಿಯೆ ಮೂಲಕ ತೆರವುಗೊಳಿಸಿ, ಅದರಿಂದ ಬರುವ ಆದಾಯವನ್ನು ಸ್ಥಳೀಯ ಸಂಸ್ಥೆಗಳಿಗೆ(ಗ್ರಾಮ ಪಂಚಾಯಿತಿ) ಹಾಗೂ ಸರ್ಕಾರಕ್ಕೆ ಸಂದಾಯ ಮಾಡಿ, ತೆರಿಗೆ ಹೊರತುಪಡಿಸಿ ಸದರಿ ಆದಾಯವನ್ನು ಹೂಳು ತೆಗೆಯುವಿಕೆ, ಸೇರಿದಂತೆ ಕೆರೆಗಳ ಸಂರಕ್ಷಣೆಗೆ ಆದ್ಯತೆ ನೀಡಲು ಸಣ್ಣ ನೀರಾವರಿ, ಅರಣ್ಯ, ಪಂಚಾಯಿತಿ ಅಧಿಕಾರಿಗಳು ಸಮನ್ವಯ ಸಾಧಿಸಿಕೊಂಡು, ವೈಜ್ಞಾನಿಕವಾಗಿ ರೂಪುರೇಷೆಗಳನ್ನು ಸಿದ್ಧಪಡಿಸಿ, ಯೋಜನಾಬದ್ಧವಾಗಿ ಪ್ರಾಮಾಣಿಕವಾಗಿ ಅಧಿಕಾರಿಗಳು ಕಾರ್ಯನಿರ್ವಹಿಸುವ ಮೂಲಕ ಜಿಲ್ಲೆಯು ಹಸಿರಿನಿಂದ ಕಂಗೊಳಿಸಲು ಶ್ರಮಿಸಬೇಕು ಎಂದು ತಿಳಿಸಿದರು.

 

 

 

 

 

ಕೆರೆಗಳಲ್ಲಿ ಮೀನುಮರಿ ಅಭಿವೃದ್ಧಿಪಡಿಸಿ ಬರುವ ಆದಾಯವನ್ನು ಹಾಗೂ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಇನ್ನಿತರ ಸಂಸ್ಥೆಗಳ ಸಿಎಸ್‌ಆರ್ ಅನುದಾನವನ್ನು ಕೆರೆಗಳ ಅಭಿವೃದ್ಧಿಗೆ ಬಳಸುವ ಮೂಲಕ ಸರ್ಕಾರಕ್ಕೆ ಆರ್ಥಿಕ ಹೊರೆಯನ್ನು ತಗ್ಗಿಸಬಹುದು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.

 

 

 

 

ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಅಗತ್ಯ ಕ್ರಮ ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಜಾಗ ನೀಡಲಾಗಿದ್ದು, ಜನಸಾಮಾನ್ಯರಿಗೆ ತೊಂದರೆಯಾಗದಂತೆ ಸ್ಥಳೀಯ ಸಂಸ್ಥೆಗಳು ಅಗತ್ಯ ಕ್ರಮ ಕೈಗೊಂಡು ಸ್ವಚ್ಚತೆಗೆ ಆದ್ಯತೆ ನೀಡಬೇಕು ಎಂದರು.

 

 

 

 

ದೊಡ್ಡಬಳ್ಳಾಪುರದ ನಾಗರಕೆರೆಗೆ, ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಕಲುಷಿತ ನೀರು ಹಾಗೂ ದೊಡ್ಡಬಳ್ಳಾಪುರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಒಳಚರಂಡಿ ನೀರು ಸೇರಿ ಆ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಕೆರೆಯನ್ನು ಸಂರಕ್ಷಿಸಲು ಕಲುಷಿತ ನಿರು ಬರದಂತೆ ತಡೆಯಲು, ನೀರನ್ನು ವೈಜ್ಞಾನಿಕ ರೀತಿಯಲ್ಲಿ ಸಂಸ್ಕರಿಸಲು ಯೋಜನೆಯನ್ನು ರೂಪಿಸಿ, ಶೀಘ್ರ ವರದಿ ನೀಡ ಹಾಗೆಯೇ ಕೆರೆಯನ್ನು ನೇರ ಸಂಪರ್ಕಿಸುವ ಒಳಚರಂಡಿ ಪೈಪ್‌ಲೈನ್ ಅನ್ನು ತೆರವುಗೊಳಿಸಿ, ಸಂಸ್ಕರಿಸಿದ ನೀರಿನ ವ್ಯವಸ್ಥೆ ಕಲ್ಪಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

 

 

 

 

ದೇವನಹಳ್ಳಿ ತಾಲ್ಲೂಕಿನಲ್ಲಿರುವ ಕೆರೆಗಳಲ್ಲಿಯೇ ವಿಜಯಪುರ ಬಳಿಯ ಭದ್ರನ ಕೆರೆಯು ಹೆಚ್ಚು ವಿಸ್ತಿರ್ಣವುಳ್ಳದ್ದಾಗಿದ್ದು ಸುಮಾರು 2000 ಎಕರೆ ಪ್ರದೇಶದ ವಿಸ್ತೀರ್ಣ ಹೊಂದಿದೆ. ಕಳೆದ ವರ್ಷ ಸುರಿದ ಮಳೆಯಿಂದಾಗಿ ವಿಜಯಪುರ ಕೆರೆಯಿಂದ ಭದ್ರನಕೆರೆಗೆ ಹಾದುಹೋಗುವ ನೀರು, ಸರಿಯಾದ ರಾಜಕಾಲುವೇ ಮಾರ್ಗ ಇಲ್ಲದಿರುವ ಕಾರಣ ರೈತರ ಕೃಷಿ ಜಮೀನುಗಳಿಗೆ ಮನೆಗಳಿಗೆ ನೀರು ನುಗ್ಗಿ ಜನಸಾಮಾನ್ಯರಿಗೆ ತೊಂದರೆಯಾಗಿತ್ತು. ಆದ್ದರಿಂದ ಇದರ ಬಗ್ಗೆ ಶೀಘ್ರವೇ ಗಮನಹರಿಸಬೇಕು. ತಹಶೀಲ್ದಾರ್, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ, ಭೂ ಮಾಪನ ಇಲಾಖೆ ಅಧಿಕಾರಿಗಳನ್ನೊಳಗೊಂಡ ನೇತೃತ್ವದ ತಂಡವು ಭೇಟಿ ನೀಡಿ ವರದಿ ನೀಡಿ, ನೀರು ಹರಿದು ಹೋಗುವ ರಾಜಕಾಲುವೆಯನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಿ ಎಂದರು.

 

 

 

 

 

ಜಿಲ್ಲೆಯ ಕೆಲವು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ನಿಗದಿಯಾಗಿರುವ ಸ್ಮಶಾನ ಭೂಮಿಯನ್ನು ಸಂಪರ್ಕಿಸುವ ರಸ್ತೆಗಳಿಲ್ಲದಿರುವುದು ಕಂಡುಬಂದಿದೆ. ಆಯಾ ತಾಲ್ಲೂಕು ತಹಶೀಲ್ದಾರ್ ಹಾಗೂ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಅವರು ಜಂಟಿಯಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಒಂದು ತಿಂಗಳ ಒಳಗಾಗಿ ಸಮಸ್ಯೆಯನ್ನು ಬಗೆಹರಿಸಿ ವರದಿ ನೀಡಿ ಎಂದು ಹೇಳಿದರು.

 

 

 

 

 

ಜಿಲ್ಲೆಯನ್ನು ಪೋಡಿ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಅಧಿಕಾರಿಗಳು ತ್ವರಿತ ಗತಿಯಲ್ಲಿ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಸಮೀಕ್ಷೆಗಾಗಿ ಅಗತ್ಯವಿರುವ ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ಸಂಬಂಧಿಸಿದ ಇಲಾಖೆಯ ಮುಖ್ಯಸ್ಥರೊಂದಿಗೆ ಚರ್ಚಿಸಲಾಗುವುದು ಎಂದರಲ್ಲದೆ ಪ್ರಸ್ತುತವಾಗಿ ಕಾರ್ಯ ನಿರ್ವಹಿಸುತ್ತಿರುವ ಸರ್ವೆಯರ್‌ಗಳು ಒಂದು ಗ್ರಾಮವನ್ನಾದರೂ ಪೋಡಿ ಮುಕ್ತ ಗ್ರಾಮವನ್ನಾಗಿ ಘೋಷಿಸಲು ಶೀಘ್ರ ಕ್ರಮ ಕೈಗೊಳ್ಳಲು ಕಾರ್ಯಕ್ರಮ ರೂಪಿಸಿ ಎಂದು ಜಿಲ್ಲಾಧಿಕಾರಿ ಅವರಿಗೆ ತಿಳಿಸಿದರು.

 

 

 

 

ಜಿಲ್ಲೆಯಲ್ಲಿ 8000 ಎಕರೆ ವಿಸ್ತೀರ್ಣದಷ್ಟು ಕೈಗಾರಿಕಾ ಪ್ರದೇಶವಿದ್ದಿ 800 ಕಾರ್ಖಾನೆಗಳು ಕಾರ್ಯ ನಿರ್ವಹಿಸುತ್ತಿವೆ. ಕೈಗಾರಿಕೆ ವ್ಯಾಪ್ತಿಯನ್ನು ಹೆಚ್ಚಿಸಲು ಭೂಮಿಯನ್ನು ಸ್ವಾದೀನ ಪಡಿಸಿಕೊಳ್ಳುವ ಪ್ರಕ್ರಿಯೆಯು ರೈತರಿಗೆ ತೊಂದರೆಯಾಗದಂತೆ ಕೈಗೊಳ್ಳಿ ಎಂದು ತಿಳಿಸಿದರು.

 

 

 

 

ಸಭೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ. ಶಿವಶಂಕರ.ಎನ್, ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವರ್ಣೀತ್‌ ನೇಗಿ, ಅಪರ ಜಿಲ್ಲಾಧಿಕಾರಿ ಅಮರೇಶ್.ಹೆಚ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಡಾ. ನಾಗರಾಜ, ಪ್ರಾದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸುಮಿತ್‌ಕುಮಾರ್ ಸುಭಾಷ್ ರಾವ್ ಪಾಟೀಲ್, ದೊಡ್ಡಬಳ್ಳಾಪುರ ಉಪ ವಿಭಾಗಾಧಿಕಾರಿ ಶ್ರೀನಿವಾಸ್ ಸೇರಿದಂತೆ ಎಲ್ಲಾ ಇಲಾಖೆಗಳ ಜಿಲ್ಲಾ ಹಾಗೂ ದೇವನಹಳ್ಳಿ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

 

ಮಂಜು ಬೂದಿಗೆರೆ

9113813926

Leave a Reply

Your email address will not be published. Required fields are marked *

You cannot copy content of this page

error: Content is protected !!