ಈ ಬಾರಿ ಮಧುಗಿರಿ ಕ್ಷೇತ್ರದ ದೊರೆ ಯಾರಾಗಲಿದ್ದಾರೆ….??
ತುಮಕೂರು : ಜಿಲ್ಲೆಯ ಹೈ ವೋಲ್ಟೇಜ್ ಕ್ಷೇತ್ರಗಳಲ್ಲಿ ಮಧುಗಿರಿ ವಿಧಾನಸಭಾ ಕ್ಷೇತ್ರವೂ ಒಂದು. ಈ ಬಾರಿಯ ಚುನಾವಣೆ ಮದಗಜಗಳ ಕಾಳಕ್ಕೆ ಸಾಕ್ಷಿಯಾಗಲಿದೆ. ಜೆಡಿಎಸ್ ಅಭ್ಯರ್ಥಿ ಎಂ.ವಿ.ವೀರಭದ್ರಯ್ಯ ನೂರು ಕೋಟಿಯಾದರೂ ಸುರಿಯಲು ಮುಂದಾಗಿದ್ದರೆ, ಕಾಂಗ್ರೆಸ್ ಕಲಿ ಕೆಎನ್‌ಆರ್ ಜನರೊಂದಿಗೆ ಕಡೇಚುನಾವಣೆಯ ಭಾವನಾತ್ಮಕ ಅಸ್ತ್ರವನ್ನು ಬಿಡುತ್ತಿದ್ದಾರೆ ಎನ್ನುವ ಚರ್ಚೆ ಆರಂಭವಾಗಿದೆ.
“ನಂದೊಂದ್ ಎಲ್ಲಿಡ್ಲಿ ನಂದಗೋಪಾಲ” : ಈ ಇಬ್ಬರ ನಡುವೆ ‘ನಂದೊಂದ್ ಎಲ್ಲಿ ಇಡ್ಲಿ ನಂದಗೋಪಾಲ ಎನ್ನುವ ರೀತಿಯಲ್ಲಿ’ ಕೆಎನ್ ರಾಜಣ್ಣ ಅವರಮೇಲೆ ಹಲ್ಲು ಮಸೆಯುತ್ತಿರುವ ಎಸ್ಟಿ ಸಮುದಾಯದ ಎಲ್ ಸಿ ನಾಗರಾಜು ಜಾತಿ ತುಕಡಿಯ ಅಸ್ತ್ರ ಹಿಡಿದು ಬೇಟೆಗೆ ನಿಂತಿದ್ದಾರೆ. 2018ರ ಚುನಾವಣೆಯಲ್ಲಿ ರಾಜಣ್ಣ ಅವರನ್ನು ಸೋಲಿಸಲೆಂದೇ 5ಕೋಟಿ ಹಣವನ್ನು ಎಲ್ಸಿ ನಾಗರಾಜು ಖರ್ಚು ಮಾಡಿಕೊಂಡಿದ್ದರಂತೆ. ಅದಕ್ಕೆ ಕಾರಣವೂ ಬೇರೆಯೇ ಇದೆ ಎನ್ನಲಾಗಿದೆ.
ಮಧುಗಿರಿ ವಿಧಾನಸಭಾ ಕ್ಷೇತ್ರ ಇಷ್ಟೊಂದು ಬಿರುಸಾಗಲು ರಾಜಣ್ಣರ ಈ ವೊಂದು ನಡೆ ಮತ್ತು ಮಾತು ಕುಮಾರಸ್ವಾಮಿವರನ್ನು ಕೆರಳುವಂತೆ ಮಾಡಿದೆ.
2019ರ ಲೋಕ ಸಭಾ ಚುನಾವಣೆ ವೇಳೆ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರವಿತ್ತು. ಈ ಎರಡೂ ಪಕ್ಷಗಳು ಒಂದುಗೂಡಿ ಸೈದ್ಧಾಂತಿಕ ವಿರೋಧಿಯಾಗಿದ್ದ ಬಿಜೆಪಿಯನ್ನು ಮಣಿಸಲು ದೇವೇಗೌಡರನ್ನು ತುಮಕೂರು ಜಿಲ್ಲೆಗೆ ಅಭ್ಯರ್ಥಿಯನ್ನಾಗಿ ಘೋಷಿಸಿದರು. ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿರುವ ಕ್ಷೇತ್ರ ಎಂಬ ಲೆಕ್ಕಾಚಾರದೊಂದಿಗೆ ಜೆಡಿಎಸ್ ತಂತ್ರ ರೂಪಿಸಿಕೊಂಡಿತ್ತು. ಒಕ್ಕಲಿಗ ಸಮುದಾಯದ ನಾಯಕರೇ ಆದ ಮುದ್ದಹನುಮೇ ಗೌಡರ ಲೋಕಸಭಾ ಸ್ಥಾನದ ಟಿಕೇಟ್ ನಿರೀಕ್ಷೆಗೆ ನೀರು ಬಿದ್ದಿತ್ತು. ಇರಲಿ, ಬಿಜೆಪಿ ಅಭ್ಯರ್ಥಿಯಾಗಿ ಜಿ.ಎಸ್ ಬಸವರಾಜು ನಿಂತಿದ್ದರು. ಬಿಜೆಪಿಗೆ ಬರುವ ಮೊದಲು ಕಾಂಗ್ರೆಸ್ ನಲ್ಲಿದ್ದಾಗ ರಾಜಣ್ಣ ಅವರೊಂದಿಗಿನ ಇವರ ಒಡನಾಟ ಚೆನ್ನಾಗಿತ್ತು ಮತ್ತು ಈಗಲೂ ಚೆನ್ನಾಗಿದೆ.
1996-97 ರಲ್ಲಿ ಜನತಾ ದಳ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ವೇಳೆ ಸಿದ್ದರಾಮಯ್ಯ ನವರಿಗೆ ಶಾಸಕರ ಬೆಂಬಲವಿದ್ದರೂ ಸಿಎಂ ಸ್ಥಾನ ತಪ್ಪಿಸಿ ಜೆ.ಎಚ್.ಪಟೇಲರಿಗೆ ಅವಕಾಶ ನೀಡಿದ್ದ ದೇವೇಗೌಡರ ನಿರ್ಧಾರ ಸಿದ್ದು ಬೆಂಬಲಿಗರಲ್ಲಿ ಬೂದಿ ಮುಚ್ಚಿದ ಕೆಂಡವಾಗಿತ್ತು. ದೇವೇಗೌಡರಿಗೆ ಸೋಲಿನ ಬಿಸಿ ಉಣಿಸಲು ಇದು ಸರಿಯಾದ ಸಮಯ ಎಂದು ಭಾವಿಸಿದ ಸಿದ್ದರಾಮಯ್ಯ ಸಪೋರ್ಟರ್ಸ್ ಚುನಾವಣೆಯಲ್ಲಿ ಸೋಲಿಸಿದರು ಎಂಬ ಮಾತುಗಳು ಕೇಳಿ ಬಂದವು.
ಸೋಲಿನ ಇನ್ನೊಂದು ಮುಖ ನೋಡುವುದಾದರೆ, ಕೆಎನ್ ರಾಜಣ್ಣ ನವರು ಲೋಕ ಸಭಾ ಚುನಾವಣೆಯಲ್ಲಿ ಜಿ.ಎಸ್.ಬಸವರಾಜು ಬೆನ್ನಿಗೆ ನಿಂತಿದ್ದು ಎಲ್ಲರಿಗೂ ತಿಳಿದಿರುವ ಸಂಗತಿ. ಮಧುಗಿರಿಯಲ್ಲಿ ಬಿಜೆಪಿಗೆ ನೆಲೆಯೇ ಇಲ್ಲದಿದ್ದರೂ ಕಾಂಗ್ರೆಸ್ ಓಟುಗಳನ್ನೆಲ್ಲಾ ಸಾಲು ಸಾಲಾಗಿ ಬಿಜೆಪಿಗೆ ಬಿಳುವಂತೆ ಮಾಡಿದ್ದರು. ಅಲ್ಲದೆ ಜಿಲ್ಲೆಯ ನಾನಾ ತಾಲೂಕುಗಳಲ್ಲಿ ಅವರು ಹಿಡಿತವನ್ನು ಸಾಧಿಸಿದ್ದರಿಂದ ಇತರ ಕ್ಷೇತ್ರಗಳಲ್ಲೂ ಓಟುಗಳು ದೇವೇಗೌಡರ ವಿರುದ್ಧ ಬೀಳುವಂತೆ ನೋಡಿಕೊಂಡರು. ರಾಜಣ್ಣ ಅಷ್ಟೇ ಅಲ್ಲಾ ಒಕ್ಕಲಿಗ ನಾಯಕ ಎಸ್ಪಿ ಮುದ್ದ ಹನುಮೇಗೌಡ ಬಣ ಮತ್ತು ಸಾಕಷ್ಟು ಜೆಡಿಎಸ್ ನಾಯಕರೇ ಗೌಡರ ವಿರುದ್ಧ ಕೆಲಸ ಮಾಡಿ ತುಮಕೂರು ಜಿಲ್ಲೆಯನ್ನು ದೊಡ್ಡ ಗೌಡರ ಕುಟುಂಬದ ಹಿಡಿತದಿಂದ ತಪ್ಪಿಸಿದ್ದಾರೆ ಎನ್ನುವ ವಿಶ್ಲೇಷಣೆ ಇದೆ. ಹೀಗಿರುವಾಗ ‘ಹೊಡೆದವನಿಗಿಂತ ಹೊಡಿ ಎಂದವನಿಗೆ ಪಾಪ ಸುತ್ತಿಕೊಂಡಂತೆ’ ರಾಜಣ್ಣ ಅವರೇ ಗೌಡರ ಕುಟುಂಬಕ್ಕೆ ಟಾರ್ಗೆಟ್ ಆದರು.
ಬೆಂಬಲಿಸಿದ ಬಿಜೆಪಿಯೇ ಮುಳ್ಳು :
ಎಲ್ಲೋ ಒಂದು ಕಡೆ ಮಧುಗಿರಿಯಲ್ಲಿ ಬಿಜೆಪಿ ತಕ್ಕ ಮಟ್ಟಿಗೆ ಗುರುತಿಸಿಕೊಳ್ಳಲು ರಾಜಣ್ಣನವರೇ ಪರೋಕ್ಷವಾಗಿ ಕಾರಣರಾದರಾ ಎಂಬ ಗುಮಾನಿ ಕಾಡುತ್ತದೆ. ಬಹುಕೋಟಿ ಐಎಂಎ ಹಗರಣದಲ್ಲಿ ಲಂಚ ಪಡೆದ ಆರೋಪ ಹೊತ್ತ ನಿವೃತ್ತ ಸರ್ಕಾರಿ ಅಧಿಕಾರಿ ಎಲ್ಸಿ ನಾಗರಾಜು ಎಸ್ಐಟಿ ತನಿಖೆಗೆ ಒಳಪಟ್ಟು ಬಂಧನಕ್ಕೊಳಗಾಗಿದ್ದರು. ಅವರಿಗೆ ಬಿಜೆಪಿ ಪಕ್ಷ ಟಿಕೇಟ್ ನೀಡಿರುವುದು ಅಚ್ಚರಿ ತಂದಿದೆ. ಎಲ್ಸಿ ನಾಗರಾಜು ಮನೆ ಮೇಲೆ ಐಟಿ ರೇಡ್ ಮಾಡಿಸುವ ಮೂಲಕ ನಾಗರಾಜು ಹೆಂಡತಿ ಸಾವಿಗೆ ರಾಜಣ್ಣ ಕಾರಣರಾದರು ಎನ್ನುವ ಸೇಡಿಗೆ ರಾಜಣ್ಣ ಗುರಿಯಗಿದ್ದಾರೆ. ತಾನು ಸೋತರೂ ಪರವಾಗಿಲ್ಲ ಕೆಎನ್ಆರ್ ಸೋಲಿಸಬೇಕೆಂಬ ಹಠದಿಂದ ಚುನಾವಣೆಗೆ ಸ್ಪರ್ಧಿಸಿದ್ದಾರೆ ಎನ್ನಲಾಗಿದೆ. ಎಲ್ಸಿ ನಾಗರಾಜು ನಾಯಕ ಸಮುದಾಯದ ಮತಗಳನ್ನು ಡಿವೈಡ್ ಮಾಡಲು ಪ್ಲಾನ್ ರೆಡಿ ಮಾಡಿಕೊಂಡಿದ್ದು, ತಮ್ಮ ಮಕ್ಕಳನ್ನು ಚುನಾವಣಾ ಪ್ರಚಾರಕ್ಕೆ ಬಿಟ್ಟಿದ್ದಾರೆ. ಅವರು ತಮ್ಮ ತಾಯಿ ಸಾವಿನ ಫೋಟೋ ತೋರಿಸುತ್ತಾ ಕಣ್ಣೀರು ಹಾಕುತ್ತಾ ಮನೆ ಮನೆಯ ಮತ ಕೇಳುತ್ತಿದ್ದಾರೆ. ಅಧಿಕಾರದಲ್ಲಿದ್ದಾಗ ಗಳಿಸಿದ ಹಣವನ್ನು ಚುನಾವಣೆಗೆ ಚೆಲ್ಲುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈಗ ಜಿ.ಎಸ್.ಬಸವರಾಜು ಋಣ ಸಂದಾಯ ಮಾಡುವ ಕಾಲ ಬಂದಿದ್ದು, ಅವರು ಇತ್ತೀಚೆಗೆ ಮಧುಗಿರಿಗೆ ಬಂದಿದ್ದ ವೇಳೆ ಕೆ.ಎನ್ಆರ್ ಗೆ ಮತ ಹಾಕುವಂತೆ ಮನವಿ ಮಾಡಿ ಹೋಗಿದ್ದು ಚರ್ಚೆಗೆ ಗ್ರಾಸವಾಗಿತ್ತು.
ದಳಪತಿಗಳ ಸರ್ಕಸ್ :
‘ದೇವೇ ಗೌಡರನ್ನು ನಾಲ್ಕು ಜನರು ಎತ್ತಿಕೊಂಡು ಹೋಗಬೇಕು’ ಎನ್ನುವ ಮಾತು ತೀವ್ರ ವಿರೋಧಕ್ಕೆ ಕಾರಣವಾಗಿ ಎಲ್ಲೆಲ್ಲೂ ಪ್ರತಿಭಟನೆಗಳು ನಡೆದವು. ಉದ್ದೇಶ ಪೂರ್ವಕ ಆಡಿದ ಮಾತುಗಳಾಗಿರಲಿಲ್ಲ ಎಂದು ರಾಜಣ್ಣ ಅವರು ಕೂಡ ವಿಷಾದ ವಿಷಾದ್ದಡಿಸಿದ್ದರು. ಲೋಕ ಸಭಾ ಚುನಾವಣೆಯಲ್ಲಿನ ಸೋಲು ಮತ್ತು ಈ ಹೇಳಿಕೆ ಜೆಡಿಎಸ್ ಮನೆಯ ದಳಪತಿಗಳನ್ನು ಕಂಗೆಡಿಸಿದ್ದು, ಖಡಕ್ ಕ್ಯಾಂಡಿಡೇಟ್ ರಾಜಣ್ಣನನ್ನು ಸೋಲಿಸಲು ಸರ್ಕಸ್ ಮಾಡುತ್ತಿದ್ದಾರೆ.
ಚುನಾವಣೆಯಿಂದ ಹಿಂದೆ ಸರಿಯುವ ನಿರ್ಧಾರ ಮಾಡಿದ್ದ ಎಂ.ವಿ.ವೀರಭದ್ರಯ್ಯ ಅವರ ಮನವೊಲಿಸಿ ಮತ್ತೆ ಕರೆತಂದು ನಿಲ್ಲಿಸಿರುವ ಕುಮಾರಸ್ವಾಮಿ, ನಮ್ಮ ಸರ್ಕಾರ ಬಂದರೆ ಸಚಿವರನ್ನಾಗಿ ಮಾಡುವುದಾಗಿ ವಾಗ್ದಾನ ನೀಡಿದ್ದಾರೆ. ನೂರು ಕೋಟಿಯಾದರೂ ಖರ್ಚಾಗಲಿ, ಗೆದ್ದು ಬರಬೇಕಷ್ಟೆ ಎಂದು ಟಾಸ್ಕನ್ನೂ ನೀಡಿದ್ದಾರಂತೆ. ಅದಕ್ಕಾಗಿ ವೀರಭದ್ರಯ್ಯ ಈಗಾಗಲೇ ಸ್ಥಳೀಯ ಕಾಂಗ್ರೆಸ್ ನಾಯಕರನ್ನು ಬುಕ್ ಮಾಡಿಕೊಂಡಿದ್ದು, ಮುಖಂಡರ ಸಾಮರ್ಥ್ಯದ ಮೇಲೆ 30 ಲಕ್ಷದಿಂದ 1.50 ಕೋಟಿಯವರೆಗೂ ಹಣ ನೀಡುತ್ತಿದ್ದಾರಂತೆ. ಸಣ್ಣ ಪುಟ್ಟ ಲೀಡರ್ ಗಳನ್ನು ಟೂರ್ ಕಳುಹಿಸಿ ಪಕ್ಷಕ್ಕೆ ದುಡಿಯುವಂತೆ ನೋಡಿಕೊಂಡಿದ್ದಾರೆ ಎನ್ನಲಾಗಿದೆ. ಮತಯಾಚನೆಗೆಂದು ಬಂದಿದ್ದ ಎಚ್.ಡಿ.ದೇವೇಗೌಡರು ರಾಜಣ್ಣರನ್ನು ಸೋಲಿಸಬೇಕು. ಅದಕ್ಕಾಗಿ ನಾನು ಮಧುಗಿರಿಗೆ ಹೋಗಬೇಕು ಎಂದು ಕುಮಾರಸ್ವಾಮಿ ಬಳಿ ಹೇಳಿದ್ದರಂತೆ. ಮಧುಗಿರಿಗೆ ಬಂದದ್ದ ವೇಳೆ ಮತಯಾಚನೆ ಮಾಡಿ ಕಣ್ಣೀರಾಕಿ ಹೋಗಿದ್ದರು.
- ರಾಜಣ್ಣ ಕೆಲಸಗಾರ. ಆದರೆ, ಕೋಪಿಷ್ಟ :
ಇತ್ತ ಹೊಸ ಮುಖಂಡತ್ವ ಹುಟ್ಟು ಹಾಕದೆ ಜಿ.ಜೆ.ರಾಜಣ್ಣನಂತಹ ಹಳೇ ಮುಖಗಳನ್ನೇ ಕೆಎನ್ಆರ್ ಇಟ್ಟುಕೊಂಡು ಕೊಂಡು ತಿರುಗುತ್ತಿರುವುದು ರಾಜಕೀಯ ಆಸಕ್ತ ಹೊಸ ಪ್ರತಿಭೆಗಳಲ್ಲಿ ಬೇಸರ ತರಿಸಿದೆ ಮತ್ತು ಈ ಹಿಂದೆ ಸಾಕಷ್ಟು ಸ್ಥಳೀಯ ಮುಖಂಡರೊಂದಿಗೆ ಒರಟಾಗಿ ನಡೆದುಕೊಂಡಿರುವುದನ್ನೇ ವೀರಭದ್ರಯ್ಯ ಬಂಡವಾಳ ಮಾಡಿಕೊಂಡಿದ್ದಾರೆ. ಜೆಡಿಎಸ್ ಮತ್ತು ಕಾಂಗ್ರೆಸ್ಗೆ ಜನರು ಸೇರ್ಪಡೆಯಾಗುತ್ತಿರುವು ಒಂದು ರೀತಿಯ ಹಾಸ್ಯ ಸಂಗತಿಯಾಗಿ ಮಾರ್ಪಟ್ಟಿದೆ. ಜೆಡಿಎಸ್ ಸೇರ್ಪಡೆಯಲ್ಲಿದ್ದ ಜನರೇ ಕಾಂಗ್ರೆಸ್ ಸೇರ್ಪಡೆ ಗೂ ಹೋಗುತ್ತಿದ್ದಾರೆ. ಬೆಲ್ಲವಿರುವಲ್ಲಿ ನೊಣಗಳು ಎನ್ನುವಂತೆ ಹಣ ಕೊಟ್ಟರೆ ಗಾಡಿ ಏರಿ ಹೋಗುತ್ತಿದ್ದಾರೆ. ಇತ್ತೀಚೆಗೆ ಆಂದ್ರದಿಂದ ಜನರನ್ನು ಕಾಂಗ್ರೆಸ್ ಕಾರ್ಯಕ್ರಮಕ್ಕೆ ರಾಜಣ್ಣ ಜನರನ್ನು ಕರೆ ತಂದಿದ್ದರು ಎನ್ನುವುದು ಹೊಸ ಬೆಳವಣಿಗೆ. ಹಿಂದುಳಿದ ಸಮುದಾಯವೇ ಹೆಚ್ಚಿರುವ ಮಧುಗಿರಿಯಲ್ಲಿ ನಿರೀಕ್ಷತ ಮಟ್ಟದಲ್ಲಿ ಅಭಿವೃದ್ಧಿ ಕಾಣಬೇಕಾದರೆ ಅದಕ್ಕೆ ರಾಜಣ್ಣ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಎಆರ್ಟಿಒ ಕಚೇರಿ, ನ್ಯಾಯಾಲಯ, ಬಸ್ಟಾಂಡ್, ಹಾಸ್ಟೆಲ್ಸ್, ಚೆಕ್ ಡ್ಯಾಂಸ್ಸ್, ಹಳ್ಳಿ ಹಳ್ಳಿಗೂ ಸಿಸಿ ರಸ್ತಗಳು, ಜಯಮಂಗಲಿ ನದಿಗೆ ಅಡ್ಡಲಾಗಿ ನಿರ್ಮಸಲಾಸ ಬ್ರಿಡ್ಜ್ , ಡಿಸಿಸಿ ಬ್ಯಾಂಕ್ ಗಳಿಂದ ರೈತರಿಗೆ ಅಗತ್ಯ ನೆರವು, ಸಂಕಷ್ಟದಲ್ಲಿರುವವರಿಗೆ ಸ್ಪಂದಿಸುವ ರೀತಿ ಹೀಗೆ ರಾಜಣ್ಣ ಮಧುಗಿರಿಯಲ್ಲಿ ಕೆಲಸ ಮಾಡಿದ್ದಾರೆ. ಇದನ್ನು ಜನರೇ ಹೇಳುತ್ತಾರೆ. ಸಿದ್ದರಾಮಯ್ಯನಂತ ಜಿಪುಣ ಶೆಟ್ಟಿಯಿಂದ ಅನುದಾನ ತರುವುದು ಅಷ್ಟು ಸುಲಭದ ಕೆಲಸವಂತೂ ಅಲ್ಲ ಎಂಬ ಮಾತಿಗಳಿವೆ. ಅಂತದ್ದರಲ್ಲಿ ಸಾಕಷ್ಟು ಕೆಲಸಗಳನ್ನು ತಾಲೂಕಿನಲ್ಲಿ ಮಾಡಿದ್ದಾರೆ. ಆದರೆ, ಈಗಿರುವ ಶಾಸಕರು ಅಭಿವೃದ್ಧಿ ಕೆಲಸಗಳನ್ನು ನಿರೀಕ್ಷಿತ ಮಟ್ಟದಲ್ಲಿ ಮಾಡದಿದ್ದರೂ.. ‘ಆಯಲ್ಲ, ಒದಿಯಲ್ಲ’ ಬಸವನಂತವನು ಎನ್ನತ್ತಾರೆ ಸ್ಥಳೀಯರೊಬ್ಬರು.
ಮಧುಗಿರಿ ಜಿಲ್ಲಾ ಕೇಂದ್ರ, ಗಾರ್ಮೆಂಟ್ಸ್, ರೋಪ್ ವೇ, ಹೈಟೆಕ್ ಸರ್ಕಾರಿ ಆಸ್ಪತ್ರೆ ಹಾಗೂ ಕಾಲೇಜುಗಳ ಘೋಷಣೆಗಳು ರಾಜಣ್ಣರ ಕೈ ಹಿಡಿಯಲಿದ್ದು, ರಾಜಕೀಯವಾಗಿ ಸೇವೆ ಮಾಡಿರುವ ತೃಪ್ತಿ ನನಗಿದೆ. ಇದು ನನ್ನ ಕೊನೆಯ ಚುನಾವಣೆ ಎನ್ನುವ ಭಾವನಾತ್ಮಕ ಮಾತುಗಳು ವರ್ಕ್ ಆಗಲಿವೆ. ಅಲ್ಲದೆ ಕೆಲಸಗಾರ ಎಂಬ ಒಲವೂ ಜನರಲ್ಲಿದೆ. ಪಕ್ಷ ಯಾವುದೇ ಅಧಿಕಾರಕ್ಕೆ ಬಂದರೂ ಅನುದಾನ ತರುವ ಸಾಮರ್ಥ್ಯವೂ ಅವರಿಗಿರುವುದರಿಂದ ಜನ ಅವರನ್ನು ನಂಬಬಹುದು. ಮತ್ತು ಈ ಬಾರಿ ಪಕ್ಷಗಳ ವರ್ಚಸ್ಸು ಜೋರಿದ್ದು, ಕಾಂಗ್ರೆಸ್ ಗ್ಯಾರಂಟಿ ಕಾರ್ಡುಗಳು ಮನೆ ಮನೆಗಳನ್ನು ತಲುಪಿವೆ.
ನಷ್ಟವಾಗುವುದು ಎಲ್ಲಿ?
15-20 ಸಾವಿರ ಮತಗಳನ್ನು ತನ್ನ ಜೇಬಿನಲ್ಲಿಟ್ಟುಕೊಂಡಿರುವ ಹಾಲು ಉತ್ಪಾದಕರ ಸಂಘದ ಮಾಜಿ ಅಧ್ಯಕ್ಷ ಹಾಗೂ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್ ಅವರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ್ದು, ಹೊಡೆತ ಬೀಳಲಿದೆ. ಒಕ್ಕಲಿಗ ಮತಗಳನ್ನು ಚದುರದಂತೆ ನೋಡಿಕೊಳ್ಳಲು ಕೊಂಡವಾಡಿಯನ್ನು ಮುಂದೆ ಬಿಡಲಾಗಿದೆ. ಹಿಂದಿನ ಬಾರಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಧುಗಿರಿಗೆ ಬಂದಿದ್ದ ವೇಳೆ ಜೋರಾಗಿ ಜಯ ಘೋಷಗಳು ಮುಳುಗುತ್ತಿದ್ದವು. ನಿಯಂತ್ರಣಕ್ಕೆ ಬರದವರನ್ನು ಕಂಡ ಕೆಎನ್‌ಆರ್ ನಿಮ್ಮ ಮತಗಳೇ ನನಗೆ ಬೇಡ ಎಂದಿರುವುದು ಹಲವರ ಸಿಟ್ಟಗೆ ಕಾರಣವಾಗಿದ್ದು, ಕಾರ್ಯಕ್ರದಿಂದಲೇ ಹೊರನಡೆದ ಘಟನೆಗಳು ನಡೆದಿವೆ. ಸ್ವಜಾತಿಯವರ ಮಾತು ಕೇಳಿ ಸ್ಥಳೀಯ ಮುಖಂಡರನ್ನು ಕಡೆಗಣಿಸಲ್ಪಟ್ಟಿರುವುದು ತೀವ್ರ ವಿರೊಧಕ್ಕೂ ಕಾರಣವಾಗಿದೆ. ಮಧುಗಿರಿಯಲ್ಲಿ ಅಪ್ಪ ಮಕ್ಕಳ (ರಾಜಣ್ಣ ಮತ್ತು ರಾಜೇಂದ್ರ) ಸಾಮ್ರಾಜ್ಯ ಕೊನೆಗೊಳಿಸಬೇಕೆನ್ನುವ ಗುಸುಗುಸು ಎಲ್ಲಡೆ ಹರಡಿದ್ದು, ವೀರಭದ್ರಯ್ಯನ ನಂತರ ಮತ್ತೊಬ್ಬ ಸ್ಥಳೀಯ ನಾಯಕನಿಗೆ ಅವಕಾಶ ಸಿಗಲಿದೆ ಎನ್ನುವ ನಿರೀಕ್ಷೆಗಳೂ ಇದರಲ್ಲಿ ಅಡಗಿದೆ ಎಎನ್ನಬಹುದು.
ಜೆಡಿಎಸ್ ಕಾಂಗ್ರೆಸ್ ಆಮಿಷದಲ್ಲೂ ಹೆಚ್ಚು ಕಮ್ಮಿ : ಜೆಡಿಎಸ್ ನಿಂದ ಯುಗಾದಿ ಹಬ್ಬಕ್ಕೆ ಚುನಾವಣಾ ಪೂರ್ವ ತಯಾರಿಯ ಭಾಗವಾಗಿ ತಲಾ ಐನೂರು ರೂಪಾಯಿ ನೀಡಿರುವುದರಿಂದ ತಳ ಸಮುದಾಯಗಳು ಜನರಿಗೆ ಸಿರಿ ದೊರೆತಂದಾಗಿದ್ದು, ಚುನಾವಣೆಗೂ ಒಂದು ದಿನ ಮೊದಲು ಮತ್ತೆ ಹಣ ಮತ್ತು ಬಟ್ಟೆ ಹಂಚುವ ಕಾರ್ಯಕ್ರಮದಿಂದ ಮತಗಳು ಖಾಯಂ ಆದಂತಿದೆ. ಕಾಂಗ್ರೆಸ್ ನಿಂದ 70-100 ರೂಪಾಯಿ ಸೀರೆ ನೀಡಿರುವುದು ಜನರ ಬೇಸರಕ್ಕೆ ಕಾರಣವಾದೆ ಎಂಬುದು ಜನ ಸಂದರ್ಶನದಿಂದ ತಿಳಿದು ಬಂದಿದೆ.
ರಾಜಣ್ಣನ ಪಾಲಿಗೆ ‘ಛಾಯಾಪುತ್ರ ಕುಮಾರಸ್ವಾಮಿ’ :
ಕೆ.ಎನ್.ರಾಜಣ್ಣ ಗೆದ್ದರೆ ಅವರ ಮಗ ಆರ್ ರಾಜೇಂದ್ರ ಅವರ ರಾಜಕೀಯ ಭವಿಷ್ಯ ಭದ್ರಗೊಳ್ಳಲಿದೆ. ಅಥವಾ ಸೋತು ಕುಮಾರಸ್ವಾಮಿ ಸರ್ಕಾರ (ಸಮ್ಮಿಶ್ರ) ಬಂದರೆ ರಾಜಣ್ಣನವರ ಪಾಲಿಗೆ ಕುಮಾತಸ್ವಾಮಿ “ಛಾಯಾಪುತ್ರ” ಆಗಲಿದ್ದಾರೆ. ರಾಜಣ್ಣರ ನಂತರ ಮಧುಗಿರಿಯಲ್ಲಿ ಕಾಂಗ್ರೆಸ್ ನೆಲೆ ಕಳೆದುಕೊಳ್ಳುವುದಂತೂ ಸತ್ಯ.
ಸ್ಪಂದನೆ ಮರೀಚಿಕೆ :
ಕಡುಕೋಪ ಹೊಂದಿರುವ ನಾಯಕ ರಾಜಣ್ಣರ ಲೋಪಗಳು ಈ ಬಾರಿ ಸರಿಪಡಿಸಿಕೊಂಡಿದ್ದಾರೆ ಎಂದುಕೊಂಡರೂ ಸ್ಥಳೀಯ ನಾಯಕರೊಂದಿಗೆ ವಿಶ್ವಾಸ ಸಾಧಿಸಲು ಸಾಧ್ಯವಾಗಿಲ್ಲ. ಇತ್ತ ಅಂತಹ ಕೆಲಸಗಾರವೇನಲ್ಲದ ವೀರಭದ್ರಯ್ಯ ಗೆದ್ದರೆ ಜನರ ಸಮಸ್ಯೆಗಳಿಗೆ ಸರಿಯಾದ ಸ್ಪಂದನೆ ಮಮರೀಚಿಕೆಯಾಗುವಂತಿದೆ.
ಮತದಾರರ ವಿವರ :
ಒಟ್ಟು ಮತದಾರರು 190214,
ಒಕ್ಕಲಿಗರು/ಕುಂಚಿಟಿಗರು : 46200,
ಪರಿಶಿಷ್ಟ ಜಾತಿ : 50500,
ಕುರುಬರು : 13000,
ಪರಿಶಿಷ್ಟ ಪಂಗಡ : 23000,
ಲಿಂಗಾಯತರು : 8500,
ಗೊಲ್ಲರು : 16500,
ಮುಸ್ಲಿಮರು13000,
ಇತರೆ : 19214,
ಈ ಜಾತಿಗಳೇ ನಿರ್ಣಾಯಕ :
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುತ್ತಾರೆ ಎನ್ನುವ ಭರವಸೆಯಿಂದ ಕುರುಬ ಸಮುದಾಯ ಕಾಂಗ್ರೆಸ್ ಗೆ ಓಟ್ ಮಾಡುತ್ತದಾದರೂ 13 ಸಾವಿರ ಜನರಲ್ಲಿ 2-3 ಸಾವಿರ ಮತಗಳು ಜೆಡಿಎಸ್ ಪಾಲಾಗಲಿವೆ. ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಮತ್ತು ಕಾಂಗ್ರೆಸ್ ನಾಯಕ ಜಮೀರ್ ಅಹಮದ್ ಖಾನ್ ಅವರ ಮಧುಗಿರಿ ಭೇಟಿಯಿಂದ ಮುಸ್ಲಿಂ ಮತಗಳು ಸ್ಪ್ಲಿಟ್ ಆಗಲಿವೆ. 46 ಸಾವಿರ ಒಕ್ಕಲಿಗರ ಮತಗಳಲ್ಲಿ ಬಹುಪಾಲು ಕುಮಾರಸ್ವಾಮಿ ಪಕ್ಷಕ್ಕೆ ಬೀಳಲಿವೆ. ಒಕ್ಕಲಿಗ, ಎಸ್ಸಿ ಎಸ್ಟಿ ಮತ್ತು ಗೊಲ್ಲರ ಮತಗಳೇ ಇಲ್ಲಿ ನಿರ್ಣಾಯಕವಾಗಿದ್ದು, ಇರುವ ಹತ್ತು ದಿನಗಳಲ್ಲಿ ರಾಜಕೀಯ ಚಿತ್ರಣವೇ ಬದಲಾಗಬಹುದು.
ವಿಶ್ಲೇಷಣೆ ; ಹರೀಶ್ ಕಮ್ಮನಕೋಟೆ