ಕಾರ್ಮಿಕರ ಬದುಕಿಗೆ ಬಲ ತುಂಬಿದ ಬಾಬಾಸಾಹೇಬ
ಡಾ.ಆರ್. ಅಂಬೇಡ್ಕರ್ ಅವರು ನೀಡಿದ ಕೊಡುಗೆಯನ್ನು ಸ್ಮರಿಸದೆ ಯಾವುದೇ ಕಾರ್ಮಿಕ ದಿನಾಚರಣೆ ಅರ್ಥಹೀನ ಹಾಗೂ ಭಾರತ ಕಂಡ ಒಬ್ಬ ಮೇರು ನಾಯಕನಿಗೆ ಮಾಡುವ ದ್ರೋಹವಾಗುತ್ತದೆ. ಇಂದು ಭಾರತದಲ್ಲಿ ಕಾರ್ಮಿಕರು ಯಾವುದೇ ಹಕ್ಕು ಪಡೆದಿದ್ದರೆ, ಅದು ಡಾ. ಅಂಬೇಡ್ಕರ್ ಅವರ ಕಾರಣದಿಂದಲೇ ಎಂದರೆ ತಪ್ಪಾಗಲಾರದು.
ಭಾರತದಲ್ಲಿ ಕಾರ್ಮಿಕರಿಗೆ ಅವರ ಹಕ್ಕುಗಳನ್ನು ವಾಸ್ತವವಾಗಿ ದೊರಕಿಸಿಕೊಟ್ಟ ನಾಯಕರಿದ್ದರೆ ಅದು ಆಧುನಿಕ ಭಾರತದ ಪಿತಾಮಹ ಹಾಗೂ ಕ್ರಾಂತಿಕಾರಿ ಡಾ.ಬಾಬಾಸಾಹೇಬ್ ಅಂಬೇಡ್ಕರ್. ಡಾ.ಅಂಬೇಡ್ಕರ್ ಅವರ ಪ್ರಯತ್ನ ಇರದಿದ್ದರೆ, ಇಂದು ಭಾರತೀಯ ಕಾರ್ಮಿಕರ ಭವಿಷ್ಯ ಕರಾಳವಾಗುತ್ತಿತ್ತು.
ಭಾರತದ ಕಾರ್ಮಿಕ ವಲಯದ ಬಗ್ಗೆ ಬಹುಮುಖಿ ಚಿಂತನೆ ಹೊಂದಿದ್ದ ಮತ್ತು ದೂರದೃಷ್ಟಿ ಇರಿಸಿಕೊಂಡಿದ್ದ ಏಕೈಕ ನೇತಾರ ಅವರು. ಜಾತಿಪದ್ಧತಿ ಅತ್ಯಂತ ಸಂಕೀರ್ಣ ಹಾಗೂ ಆಳವಾಗಿ ಬೇರುಬಿಟ್ಟಿದ್ದ ಭಾರತದಂತಹ ದೇಶದಲ್ಲಿ ಹುಟ್ಟಿದ್ದರಿಂದ, ಪಟ್ಟಭದ್ರವಾದ ಮೇಲ್ಪಾತಿಯ ಮಂದಿ, ಆಧುನಿಕ ಭಾರತವನ್ನು ಕಟ್ಟುವಲ್ಲಿ ಅಂಬೇಡ್ಕರ್ ನೀಡಿದ ಕೊಡುಗೆಯ ಕೀರ್ತಿಯನ್ನು ಅವರಿಗೆ ನೀಡಿಲ್ಲ ಎಂದೇ ಹೇಳಬೇಕು.
ವಿಶ್ವದಲ್ಲೇ ಅತಿವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಭಾರತ ರೂಪುಗೊಳ್ಳಬೇಕಾದರೆ ಅದಕ್ಕೆ ಅಂಬೇಡ್ಕರ್ ಅವರ ಕೊಡುಗೆ ಕಾರಣ. ಅಂಬೇಡ್ಕರ್ ಅವರ ವಿಶಿಷ್ಟ ಆರ್ಥಿಕ ಚಿಂತನೆಗಳು ಬಲುದೊಡ್ಡ ಆರ್ಥಿಕ ಕುಸಿತದ ಸಂದರ್ಭದಲ್ಲೂ ಭಾರತದ ಆರ್ಥಿಕತೆಯನ್ನು ಸಂಕಷ್ಟದಿಂದ ಪಾರು ಮಾಡುವಲ್ಲಿ ಯಶಸ್ವಿಯಾಗಿವೆ.
ಅದು ಭಾರತೀಯ ರಿಸರ್ವ್ ಬ್ಯಾಂಕಿನ ಸಂಸ್ಥಾಪನೆಗೆ ಸಂಬಂಧಿಸಿದ ತತ್ವಗಳನ್ನು ರೂಪಿಸುವಲ್ಲಿ ಇರಬಹುದು ಅಥವಾ ಮುಕ್ತವ್ಯಾಪಾರ ನೀತಿ ಬಗೆಗೆ ಇರಬಹುದು. ಅತ್ಯಂತ ಶ್ರೇಷ್ಠ ಆರ್ಥಿಕ ಚಿಂತನೆಯನ್ನು ಈ ದೇಶಕ್ಕೆ ಅಂಬೇಡ್ಕರ್ ನೀಡಿದ್ದಾರೆ.
ಅಂಬೇಡ್ಕರ್ ಅವರು ದೇಶಕ್ಕೆ ನೀಡಿದ ವೌಲಿಕ ಚಿಂತನೆಯ ಬಗ್ಗೆ ಕೆಲವೊಂದು ಅಪರೂಪದ ಮಾಹಿತಿಗಳು ಇಲ್ಲಿವೆ. ಕಾರ್ಮಿಕರ ಹಕ್ಕಿಗಾಗಿ ಅವರು ನಡೆಸಿದ ಹೋರಾಟ,
ಕಾರ್ಮಿಕ ಮುಖಂಡರಾಗಿ ಸಲ್ಲಿಸಿದ ಸೇವೆ ಹಾಗೂ 1942ರಿಂದ 1946ರವರೆಗೆ ವೈಸ್ರಾಯ್ ಆಡಳಿತ ಮಂಡಳಿಯ ಕಾರ್ಮಿಕ ಸದಸ್ಯರಾಗಿ ಅವರು ಸಲ್ಲಿಸಿದ ಸೇವೆ ಅಪೂರ್ವ. 1942ರ ಜುಲೈ 7ರಂದು ಅವರು ವೈಸರಾಯ್ ಆಡಳಿತ ಮಂಡಳಿಯ ಕಾರ್ಮಿಕ ಸದಸ್ಯರಾಗಿ ಅಧಿಕಾರ ಸ್ವೀಕರಿಸಿದರು. ಅಂಬೇಡ್ಕರ್ ಅವರ
ಮೊಟ್ಟಮೊದಲ ಹಾಗೂ ಅಪೂರ್ವ ಸಾಧನೆ ಎಂದರೆ ಫ್ಯಾಕ್ಟರಿ ಕೆಲಸದ ಅವಧಿಯನ್ನು ಎಂಟು ಗಂಟೆಗಳಿಗೆ ಇಳಿಸಿರುವುದು. ಇಂದು ದೇಶಾದ್ಯಂತ ಕಾರ್ಮಿಕರ ಕೆಲಸದ ಅವಧಿ ಎಂಟು ಗಂಟೆಗೆ ಸೀಮಿತವಾಗಿದೆ. ಆದರೆ ಇದು ಸಾಧ್ಯವಾಗಿರುವುದು ಡಾ.ಅಂಬೇಡ್ಕರ್ ಅವರ ಹೋರಾಟದ ಫಲವಾಗಿ ಎನ್ನುವುದು ಎಷ್ಟು ಮಂದಿ ಕಾರ್ಮಿಕರಿಗೆ ತಿಳಿದಿದೆ ಎನ್ನುವುದು ಬೇರೆ ವಿಚಾರ, ದೇಶದಲ್ಲಿ ಎಂಟು ಗಂಟೆಗಳ ಕೆಲಸದ ಅವಧಿಯನ್ನು ಜಾರಿಗೆ ತಂದ ಅವರು,
ಈ ಹಿಂದೆ ಇದ್ದ 14 ಗಂಟೆಗಳ ಕೆಲಸದ ಅವಧಿಯ ಶೋಷಣೆಯಿಂದ ಕಾರ್ಮಿಕ ವಲಯವನ್ನು ಮುಕ್ತಗೊಳಿಸಿದರು. ಈ ಮೂಲಕ ಕಾರ್ಮಿಕ ಪಾಲಿನ ಆಶಾಕಿರಣವಾದರು. 1942ರ ನವೆಂಬರ್ 27ರಂದು ನವದೆಹಲಿಯಲ್ಲಿ ನಡೆದ ಏಳನೇ ಅಖಿಲ ಭಾರತ ಕಾರ್ಮಿಕ ಸಮಾವೇಶದಲ್ಲಿ ಈ ಐತಿಹಾಸಿಕ ನಿರ್ಣಯ ಜಾರಿಗೆ ಕಾರಣರವಾಯಿತು .
ವರದಿ :- ನಾಗೇಂದ್ರ ಪ್ರಸಾದ್